Saturday, June 22, 2024

ಸತ್ಯ | ನ್ಯಾಯ |ಧರ್ಮ

ಪ್ಯಾಲೆಸ್ಟೈನ್:‌ ಕುಡಿಯಲು ನೀರೂ ದೊರಕದೆ ಎಲುಬಿನ ಹಂದರದಂತಾಗಿರುವ ಮಕ್ಕಳು

ಪ್ಯಾಲೆಸ್ಟೈನ್‌ ಮೇಲಿನ ಇಸ್ರೇಲ್‌ ದಾಳಿ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಯುದ್ಧಕ್ಕೆ ಬಲಿಯಾಗುತ್ತಿರುವ ಜನಸಾಮಾನ್ಯರ ಸಂಖ್ಯೆ 30 ಸಾವಿರದ ಗಡಿ ದಾಟಿದೆ.

ಆದರೆ ಅಲ್ಲಿನ ಸ್ಥಿತಿ ನೋಡಿದಾಗ ಸತ್ತವರೇ ನಿಜಕ್ಕೂ ಪುಣ್ಯವಂತರು ಎನ್ನುವ ಭಾವನೆ ನಿಮ್ಮಲ್ಲಿ ಮೂಡದೆ ಇರದು. ಏಕೆಂದರೆ ಯುದ್ಧಪೀಡಿತ ದೇಶವೊಂದರಲ್ಲಿ ಬದುಕುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮೊಂದಿಗೆ ಅಲ್ಲಿ ಸಾವೂ ಹೆಜ್ಜೆ ಹಾಕುತ್ತಿರುತ್ತದೆ. ಯಾವ ಕಡೆಯಿಂದ ಬೇಕಿದ್ದರೂ ರಾಕೆಟ್‌ ಅಥವಾ ಬಾಂಬ್‌ ಬಂದು ಬೀಳಬಹುದು. ಸಾವಿನ ಭಯ ಒಂದೆಡೆಯಾದರೆ ಕಿತ್ತು ತಿನ್ನುವ ಹಸಿವು ಹಾಗೂ ಬಾಯಾರಿಕೆ ಇನ್ನೊಂದೆಡೆ. ಇಂತಹ ಪರಿಸ್ಥಿತಿಯಲ್ಲಿ ಎಂತಹವರಿಗೂ ಬದುಕಿಗಿಂತ ಸಾವೇ ಮೇಲು ಅನ್ನಿಸಿದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಇಂತಹ ಯುದ್ಧಗಳಲ್ಲಿ ಅತಿ ಹೆಚ್ಚು ಸಂತ್ರಸ್ತರಾಗುವುದು ಮಹಿಳೆಯರು ಮತ್ತು ಮಕ್ಕಳು. ಪ್ರಸ್ತುತ ಪ್ಯಾಲೆಸ್ಟೈನ್‌ ದೇಶದಲ್ಲೂ ಅದೇ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಮಕ್ಕಳೀಗ ಕುಡಿಯಲು ಶುದ್ಧ ನೀರು ದೊರಕದೆ ಎಲುಬಿನ ಗೂಡಿನಂತಾಗುತ್ತಿದ್ದಾರೆ. ಕಿಲೋಮೀಟರುಗಳಷ್ಟು ದೂರ ನಡೆದರೂ ಅವರಿಗೆ ಕುಡಿಯಲು ಹನಿ ಶುದ್ಧ ನೀರು ದೊರಕುತ್ತಿಲ್ಲ.

ಇಲ್ಲಿನ ಮಕ್ಕಳು ಈಗ ನಿರ್ಜಲೀಕರಣ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಕುಡಿದು ಅತಿಸಾರ ಬೇಧಿಗೆ ಒಳಗಾಗುತ್ತಿದ್ದಾರೆ. ಅಸಹಾಯಕ ತಾಯಂದಿರು ಮಕ್ಕಳನ್ನು ಆಸ್ಪತ್ರೆಗೆ ಹೊತ್ತು ಓಡಿ ಬರುತ್ತಿದ್ದಾರೆ. ಆದರೆ ಇಸ್ರೇಲ್‌ ಆಸ್ಪತ್ರೆಗಳ ಮೇಲೂ ದಾಳಿ ನಡೆಸುತ್ತಿದೆ.

40 ಡಿಗ್ರಿಯಷ್ಟು ಸುಡುವ ಬಿಸಿಲಿನಲ್ಲಿ ಇಲ್ಲಿನ ಜನರು ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಇದು ಅವರನ್ನು ಬಳಲುವಂತೆ ಮಾಡುತ್ತಿದೆ. ದೊಡ್ಡವರು ಚಿಕ್ಕವರು ಎನ್ನದೆ ಆರೋಗ್ಯ ಕೆಟ್ಟು ಮಲಗುತ್ತಿದ್ದಾರೆ. ಕಲುಷಿತ ನೀರು ಅವರನ್ನು ಹೈರಾಣಾಗಿಸಿದೆ. ಆದರೆ ಆ ನೀರನ್ನು ಕುಡಿಯದೆ ಅವರಿಗೆ ಬೇರೆ ದಾರಿಯಿಲ್ಲ.

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಪ್ರಕಾರ, ಗಾಜಾದ 67 ಪ್ರತಿಶತದಷ್ಟು ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳು ಈಗಾಗಲೇ ಅಸಮರ್ಪಕವಾಗಿವೆ. ಅವುಗಳನ್ನು ಯುದ್ಧ ದಾಳಿಯಲ್ಲಿ ನಾಶಗೊಳಿಸಲಾಗಿದೆ.

“ನೀರು ಮತ್ತು ಒಳಚರಂಡಿ ಜಾಲಗಳನ್ನು ಪುನರ್ನಿರ್ಮಿಸಲು ಅಂತರರಾಷ್ಟ್ರೀಯ ಪ್ರಯತ್ನದ ಅಗತ್ಯವಿದೆ” ಎಂದು ಖಾನ್ ಯೂನಿಸ್ ಪುರಸಭೆಯ ನೀರಿನ ಎಂಜಿನಿಯರ್ ಸಲಾಂ ಶರಬ್ ಹೇಳುತ್ತಾರೆ.

ಖಾನ್ ಯೂನಿಸ್ ಪ್ರದೇಶದಲ್ಲಿ 170ರಿಂದ 200 ಕಿ.ಮೀ ದೂರದ ಪೈಪ್ ಲೈನುಗಳು ನಾಶವಾಗಿವೆ. ಜೊತಗೆ ಬಾವಿಗಳು, ನೀರಿನ ತೊಟ್ಟಿಗಳು ಸಂಪೂರ್ಣ ನಾಶವಾಗಿವೆ.

ಕೆರೆಮ್ ಶಾಲೋಮ್ ಕ್ರಾಸಿಂಗ್ ಮೂಲಕ ಗಾಜಾಕ್ಕೆ ಮಾನವೀಯ ನೆರವು ಸಾಗಿಸುವ ಸುಮಾರು 200 ಟ್ರಕ್‌ಗಳನ್ನು ಪ್ರತಿದಿನ ಅನುಮತಿಸುವುದಾಗಿ ಇಸ್ರೇಲ್‌ನ ಮಿಲಿಟರಿ ಹೇಳಿದೆ. ನೆರವು ಸಂಸ್ಥೆಗಳು ಅವುಗಳನ್ನು ವಿತರಿಸುತ್ತಿಲ್ಲ ಎಂದು ಸೇನೆ ಆರೋಪಿಸಿದೆ.

ದಕ್ಷಿಣ ಗಾಜಾದ ರಫಾದ ಸುತ್ತ ನಡೆಯುತ್ತಿರುವ ಹೋರಾಟವು ತಮ್ಮ ಕಾರ್ಯಾಚರಣೆಗಳಿಂದಾಗಿ ನಮಗೆ ನೆರವು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಅಪಾಯಕಾರಿ ಎಂದು ನೆರವು ಸಂಸ್ಥೆಗಳು ದೂರುತ್ತವೆ.

ನೀರು ಮತ್ತು ಆಹಾರ ದೊರಕದ ಹತಾಶೆ ಗಾಜಾಪಟ್ಟಿಯ ಜನರನ್ನು ದರೋಡೆ ಮಾಡುವ ಮಟ್ಟಕ್ಕೆ ಇಳಿಸಿದೆ. ಅವರು ಬಂದೂಕುಧಾರಿಗಳು ಹಾಗೂ ನಾಗರಿಕರು ಸೇರಿದಂತೆ ಸಹಾಯ ಟ್ರಕ್‌ಗಳನ್ನು ಲೂಟಿ ಮಾಡಿದ ವರದಿಗಳೂ ಇವೆ.

ಅದೇ ಸಮಯದಲ್ಲಿ, ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಪ್ರಾಸಿಕ್ಯೂಟರ್ ಇಸ್ರೇಲ್ ಗಾಜಾದ ಜನರ ಹಸಿವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಬಂಧಿಸುವಂತೆಯೂ ಒತ್ತಾಯಿಸಿದ್ದಾರೆ.

ಮುಂದಿನ ಒಂದು ತಿಂಗಳಿನಲ್ಲಿ ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಒಂದು ಕೋಟಿಯನ್ನು ದಾಟಲಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಆದರೆ ಇತ್ತ ಇಸ್ರೇಲ್ ಇದನ್ನು ನಿರಾಕರಿಸುತ್ತಿದೆ. ಇದು ನಮ್ಮ ದೇಶದ ವಿರುದ್ಧ ನಡೆಸಲಾಗುತ್ತಿರುವ ಪಿತೂರಿ ಎಂದು ಅದು ವಾದಿಸುತ್ತಿದೆ.

ಆದರೆ ಗಾಜಾದ ಬೀದಿಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ನಿರಾಶ್ರಿತರ ಡೇರೆಗಳ ಬಳಿ ಅಲೆದಾಡಿದವರಿಗೆ ಹಸಿದ ಜನರ ಸಂಖ್ಯೆ ಅದನ್ನೂ ಮೀರಿದೆ ಎಂದೆನ್ನಿಸದೆ ಇರುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು