ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬುಧವಾರದವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಲಘು ಮಳೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಮಾಂಡೌಸ್ ಚಂಡಮಾರುತ ಈ ವಾರದಲ್ಲಿ ಕಡಿಮೆಯಾಗಲಿದೆ. ತದನಂತರ ಬೆಂಗಳೂರಿನಲ್ಲಿ ಮೋಡಕವಿದ ವಾತವರಣ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ಕೆಲವು ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಮಂಜು ಕವಿದ ವಾತವರಣ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ. ಈ ಅವಧಿಯಲ್ಲಿ ಮೇಲ್ಮೈ ಮಾರುತಗಳು ಬಲವಾಗಿರುತ್ತವೆ, ಆಗ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಅಥವಾ 18 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ರಾಜ್ಯ ವಿಪತ್ತು ಉಸ್ತುವಾರಿ ಕೋಶದ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಕೊಟ್ಟಿಗೆಪಾಳ್ಯದಲ್ಲಿ ಭಾನುವಾರ 64.5 ಮಿ.ಮೀ ಮಳೆಯಾಗಿದೆ. ನಗರದ ಇತರ ಭಾಗಗಳಲ್ಲಿಯೂ ಸಾಧಾರಣ ಮಳೆಯಾಗಿದೆ. ಶನಿವಾರ ದಾಖಲಾದ ನಿರಂತರ ತುಂತುರು ಮಳೆಗೆ ಹೋಲಿಸಿದರೆ, ಸಣ್ಣ ಪ್ರಮಾಣದ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ .
ಕರ್ನಾಟಕದ ಕರಾವಳಿ ಜಿಲ್ಲೆಗಳ ಜೊತೆಗೆ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಂಗಳವಾರದವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಬುಧವಾರ ಮಳೆ ಸಾಕಷ್ಟು ವ್ಯಾಪಕವಾಗಿರುವ ನಿರೀಕ್ಷೆಯಿದೆ ಮತ್ತು ಗುರುವಾರ ಮಳೆ ಮಿರಾಮ ನೀಡುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ಉಸ್ತುವಾರಿ ಕೋಶ ತಿಳಿಸಿದೆ.
ಈ ವರ್ಷದ ಅಕ್ಟೋಬರ್ ವೇಳೆಗೆ ಬೆಂಗಳೂರಿನಲ್ಲಿ ಸುಮಾರು 1,704 ಮಿ.ಮೀ ಮಳೆಯಾಗಿದೆ. ಈಶಾನ್ಯ ಮಾನ್ಸೂನ್ ಋತುವಿನಲ್ಲಿಯೂ ಉತ್ತಮ ಮಳೆಯಾಗಿದ್ದರಿಂದ 2022 ರ ಡಿಸೆಂಬರ್ ಅಂತ್ಯದ ವೇಳೆಗೆ ನಗರದ ಒಟ್ಟು ಮಳೆ 2,000 ಮಿ.ಮೀ.ಗೆ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ.