ಬೆಂಗಳೂರು: ಒಳಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಸಿಎಂ ಮನೆಯೆಡೆಗೆ ಪಾದಯಾತ್ರೆ ಹೊರಟಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯ ಹಲವು ಮುಖಂಡರನ್ನು ಬಂಧಿಸಿದ್ದು, ಸರ್ಕಾರದ ಈ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಒಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರನ್ನು ರಾಜ್ಯ ಬಿಜೆಪಿ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಒಂದೋ ಹೋರಾಟಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಬೇಕು, ಇಲ್ಲವಾದರೆ ಕನಿಷ್ಠ ಅವರನ್ನು ಮಾತುಕತೆಗಾದರೂ ಆಹ್ವಾನಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಹೋರಾಟಗಾರರನ್ನು ಪೊಲೀಸರ ಮೂಲಕ ಹಣಿಯಲು ನಡೆಸಿದ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಕಿಡಿಕಾರಿದ್ದಾರೆ.
ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರ ಈಗ ಹೋರಾಟಗಾರರನ್ನೇ ಬಂಧಿಸಲು ಹೊರಟಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಟ್ವೀಟ್ ಮಾಡುವ ಮುಖಾಂತರ ತಿಳಿಸಿದ್ದಾರೆ.