ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜಾಥಾ ಇಂದು ಫ್ರೀಡಂ ಪಾರ್ಕ್ ಬಳಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು.

ಮಳೆಯನ್ನೂ ಲೆಕ್ಕಿಸದೆ ಮುಖ್ಯಂಮತ್ರಿಗಳು ಬರುವ ತನಕ ಹೋರಾಟ ಮುಂದುವರೆಸಿದ ಹೋರಾಟಗಾರರ ಮೇಲೆ ಈಗ ಸಂಜೆಗತ್ತಲಿನಲ್ಲಿ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಹೊಸಪೇಟೆ ಕಮಲಾಪುರದಿಂದ ಪಾದಯಾತ್ರೆಯಲ್ಲಿ ಬಂದಿದ್ದ ಒಳಮೀಸಲಾತಿ ಹೋರಾಟದ ಮುಂಚೂಣಿ ಹೋರಾಟಗಾರ 62 ವರ್ಷ ವಯಸ್ಸಿನ ಕರಿಯಪ್ಪ ಗುಡಿಮನಿಯವರಿಗೆ ತಲೆಗೆ ಪೆಟ್ಟಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಸಧ್ಯ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮುಖ್ಯಂಮತ್ರಿಗಳ ನಿರೀಕ್ಷೆಯಲ್ಲಿದ್ದ ಹೋರಾಟಗಾರರನ್ನ ಲಾಠಿ ಚಾರ್ಜ್ ಮಾಡುವುದರ ಮೂಲಕ ಚದುರಿಸಿದ್ದು ಸರ್ಕಾರದ ಹೇಡಿತನಕ್ಕೆ ಸಾಕ್ಷಿಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಜನರು ಒಳಮೀಸಲಾತಿ ಜಾರಿಗಾಗಿ ಹೋರಾಟ ಆರಂಭಿಸಿದ್ದರು. ಮಳೆ-ಚಳಿ-ಗಾಳಿ ಲೆಕ್ಕಿಸದೆ ಸದಾಶಿವ ಆಯೋಗದ ವರದಿ ಚರ್ಚೆ ಮತ್ತು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು. ಸಚಿವ ವಿ.ಸೋಮಣ್ಣ ಮನವಿ ಆಲಿಸಲು ಬಂದಾಗ ಧಿಕ್ಕಾರ ಕೂಗಿ ಸಿಎಂ ಬೊಮ್ಮಾಯಿಯವರೆ ಬರಬೇಕೆಂದು ಪಟ್ಟು ಹಿಡಿದಿದ್ದರು.
ಅಲ್ಲದೆ ಅಂಬಣ್ಣ ಅರೋಲಿಕರ್ ಸೇರಿದಂತೆ ನೂರಾರು ಹೋರಾಟಗಾರರನ್ನು ಆಡುಗೋಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.