ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024 ಕ್ರೀಡಾ ಕೂಟದಿಂದ ಇಂದು ಹೃದಯ ವಿದ್ರಾವಕ ಸುದ್ದಿ ಹೊರಬಿದ್ದಿದೆ. ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣ ಮಹಿಳಾ ಕುಸ್ತಿಯ 50 ಕೆಜಿ ತೂಕದ ವಿಭಾಗದಿಂದ ಅನರ್ಹಗೊಂಡಿದ್ದಾರೆ.
ಈ ಸುದ್ದಿ ಹೊರಬಿದ್ದ ನಂತರ ದೇಶವೇ ಇದರ ಕುರಿತು ಚರ್ಚೆ ನಡೆಸುತ್ತಿದೆ. ಇದರ ಒಳಸುಳಿಗಳ ಕುರಿತಾಗಿಯೂ ಚರ್ಚೆಗಳು ಎದ್ದಿವೆ. ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹರಿಯಾಣದ ಚಾರ್ಕಿ ದಾದ್ರಿಯಲ್ಲಿ ವಿನೇಶ್ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಅವರನ್ನು ಭೇಟಿಯಾದರು.
ಮಹಾವೀರ್ ಫೋಗಟ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಪಂಜಾಬ್ ಸಿಎಂ ಭಗವಂತ್ ಮಾನ್, ಕೇವಲ 100-50 ಗ್ರಾಂ ಕೂದಲೇ ಇತ್ತು, ಅದನ್ನು ಕತ್ತರಿಸಿದ್ದರೂ ಗೆಲ್ಲುತ್ತಿದ್ದರು ಎಂದು ಹೇಳಿದರು. ಇದನ್ನು ನಿರ್ಲಕ್ಷ್ಯ ಎಂದು ಬಣ್ಣಿಸಿದ ಅವರು, ತರಬೇತುದಾರರು ಮತ್ತು ಫಿಸಿಯೋಥೆರಪಿಸ್ಟ್‌ಗಳು ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುತ್ತಾರೆ. ಅವರು ಏನು ಮಾಡುತ್ತಿದ್ದರು? ಅವರು ರಜೆಯ ಮೇಲೆ ಅಲ್ಲಿಗೆ ಹೋಗಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಗವಂತ್ ಮಾನ್, “ಇಂತಹ ಉನ್ನತ ಮಟ್ಟದಲ್ಲಿ ಇಂತಹ ತಪ್ಪುಗಳು ನಡೆಯುತ್ತಿವೆ, ಕೋಚ್ ಮತ್ತು ಫಿಸಿಯೋಥೆರಪಿಸ್ಟ್‌ಗಳಿಗೆ ಲಕ್ಷಗಳಲ್ಲಿ ಸಂಬಳ ನೀಡಲಾಗುತ್ತದೆ, ಅವರು ರಜೆಯ ಮೇಲೆ ಅಲ್ಲಿಗೆ ಹೋಗಿದ್ದಾರ?” ಎಂದು ಪ್ರಶ್ನಿಸಿದರು.
ವಿನೇಶ್ ಅವರ ಅನರ್ಹತೆಯ ವಿಷಯವಾಗಿ ಮುಂದುವರೆದು ಮಾತನಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು “ನಾನು ಈ ವಿಷಯದಲ್ಲಿ ರಾಜಕೀಯ ಬೆರೆಸಲು ಬಯಸುವುದಿಲ್ಲ. ಆಕೆ (ವಿನೇಶ್ ಫೋಗಟ್) ಫೈನಲ್ ತಲುಪಿದಾಗ (ಮೋದಿ) ಒಂದು ಟ್ವೀಟನ್ನು ಸಹ ಮಾಡಿಲ್ಲ, ಆದರೆ ಅವರು ಅನರ್ಹರಾದ ತಕ್ಷಣ ಟ್ವೀಟ್ ಮಾಡಿದ್ದಾರೆ” ಇದರ ಅರ್ಥವೇನು ಎಂದು ಮಾನ್ ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಅವರ ತೂಕ ತಪಾಸಣೆ ಮಾಡುವುದು ಆಕೆಯ ಕೋಚ್ ಮತ್ತು ಫಿಸಿಯೋಥೆರಪಿಸ್ಟ್‌ನ ಕೆಲಸವಾಗಿತ್ತು. ಈಗ ಇಂತಹ ನಿರ್ಧಾರ ಬಂದಿದೆ. ಈ ಅನ್ಯಾಯವನ್ನು ಅವರು ತಡೆಯಬೇಕಿತ್ತು. ನಮ್ಮ ಮಹಿಳಾ ಕುಸ್ತಿಪಟು ತನ್ನ ಪದಕಗಳನ್ನು ಅಂದು ನದಿಯಲ್ಲಿ ವಿಸರ್ಜನೆ ಮಾಡಿದ ಸಂದರ್ಭದಲ್ಲಿ ಅವರು (ಕೇಂದ್ರ) ಯಾರನ್ನಾದರೂ ಇದಕ್ಕೆ ಹೊಣೆಗಾರರನ್ನಾಗಿ ಮಾಡಿದ್ದರೆ? ಎಂದೂ ಅವರು ಪ್ರಶ್ನಿಸಿದರು.
ಇದ್ದಕ್ಕಿದ್ದ ಹಾಗೆ ಬಂದೆರಗಿದ ಈ ಅನರ್ಹತೆಯ ಸುದ್ದಿಯನ್ನು ಅರಗಿಸಿಕೊಳ್ಳಲು ದೇಶಕ್ಕೆ ದೇಶವೇ ಪರದಾಡುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೇಶ್ ಈಗ ಚೇತರಿಸಿಕೊಳ್ಳುತ್ತಿದ್ದಾರೆನ್ನುವ ಸುದ್ದಿ ಬರುತ್ತಿದೆ.