Home ಬೆಂಗಳೂರು ಆವಿಷ್ಕಾರದ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಲು ಉದ್ಯಮಿಗಳಿಗೆ ಸಿಎಂ ಕರೆ

ಆವಿಷ್ಕಾರದ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಲು ಉದ್ಯಮಿಗಳಿಗೆ ಸಿಎಂ ಕರೆ

0

ಬೆಂಗಳೂರು: ಉದ್ಯಮಿಗಳು ಆವಿಷ್ಕಾರ ಮಾಡುವುದರ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಿ ಸರ್ಕಾರಕ್ಕೂ ಅದಾಯ ತರುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಉದ್ಘಾಟಿಸಿದ ಬೆಂಗಳೂರು ಟೆಕ್ ಸಮ್ಮಿಟ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆಲ್ಲರಿಗು ಪರಿಸರ ಸ್ನೇಹಿ ವಾತಾವರಣ ಅಗತ್ಯ, ನಾವು ಜಾಗತಿಕವಾಗಿ  ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಜಗತ್ತು ಸಮಸ್ಯೆಗಳಿಂದ ಮುಳುಗುತ್ತಿದೆ. ಹಣಕಾಸು ಮೂಲಗಳು ಪ್ರತಿ ಕ್ಷಣವೂ ಇಳಿಮುಖವಾಗುತ್ತಿದೆ. ನಾವು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದರಿಸಬೇಕಾಗುತ್ತದೆ. ನಮ್ಮ ಪೂರ್ವಜರು ವ್ಯವಸ್ಥಿತವಾದ ಜೀವನ ಮಾಡುತ್ತಿದ್ದರು. ನಾವು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ವನ್ನು ನೀಡಬೇಕು.  ಭವಿಷ್ಯ ದಿಂದ ನಾವು ಕಳ್ಳತನ ಮಾಡಬಾರದು. ಭವಿಷ್ಯಕ್ಕಾಗಿ ಭೂಮಿಯನ್ನು ಉಳಿಸಬೇಕು. ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಚಿಂತನೆ ಅಗತ್ಯ ಎಂದು ಹೇಳಿದರು.

ಯಾವುದೇ ತಂತ್ರಜ್ಞಾನ ಬಂದರೂ ಈ ಪರಿಸರವನ್ನು ಉಳಿಸುವ ಗಣ ಹೊಂದಿರಬೇಕು. ಡಿಜಿಟಲ್ ಅಂತರವನ್ನು ಕಡಿಮೆ ಮಾಡುವತ್ತಲೂ ನಾವು ಗಮನಹರಿಸಬೇಕು.  ಪರಿಸರ ಸ್ನೇಹಿ ವಾತಾವರಣ ಹೊಂದಬೇಕು‌. ಪರಿಸರ ಸ್ನೇಹಿ ತಂತ್ರಜ್ಞಾನ, ನಾವೀನ್ಯತೆ ಹಾಗೂ ಇಕೋ ಇಕನಾಮಿಕ್ಸ್‌ಅನ್ನು ಸಾಧ್ಯವಾಗಿಸಬೇಕು ಎಂದರು.

ಐಟಿ ಬಿಟಿ, ಕೃತಕ ಬುದ್ಧಿಮತ್ತೆ ನಮ್ಮ ಸಂಪನ್ಮೂಲಗಳನ್ನು ಉಳಿಸಿ ರಕ್ಷಣೆ ಮಾಡುವ ಸಾಧ್ಯತೆ ಇದೆ. ಮಾನವ ಕುಲಕ್ಕೆ ಯಾವುದು ಅನುಕೂಲವಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷಿಸಬೇಕು. ತಂತ್ರಜ್ಞಾನ ನಮಗೆ ಮಾಹಿತಿಯ ಕಣಜವನ್ನೇ ನಮ್ಮ ಮುಂದಿರಿಸಿದೆ.  ನವೀಕರಿಸಬಹುದಾದ ಇಂಧನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಸರಳ ನಗರ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಿ

ಮೈಸೂರು ಮಹಾರಾಜರು ವಿಜ್ಞಾನ ತಂತ್ರಜ್ಞಾನಕ್ಕೆ, ಶಿಕ್ಷಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ‌. ನಂತರ ಉದ್ಯಮಕ್ಕೆ ಆದ್ಯತೆ ನೀಡಿದ್ದಾರೆ. ಆದರೆ ಈಗ ಐಟಿ ಬಿಟಿ ಬಂದಿದೆ. ಬೆಂಗಳೂರಿಗೆ ಬಂದವರು ಐಟಿ ಬಿಟಿ ಕಂಪನಿಗಳಿಗೆ ಭೇಟಿ ನೀಡುತ್ತಾರೆ. ಮೊದಲು ಸಂಪತ್ತು ಉಳ್ಳವರ ಕಾಲವಿತ್ತು.  ಈಗ ಜ್ಞಾನ ಇರುವವರ ಕಾಲ. ಬೆಂಗಳೂರಿಗೆ ಪ್ರತಿದಿನ 5000 ಕ್ಕೂ ಹೆಚ್ಚು ಇಂಜನೀಯರ್ ಗಳು ಬಂದು ಹೋಗುತ್ತಾರೆ.  ಬೆಂಗಳೂರಿನಲ್ಲಿ ಸುಮಾರು 400 ಆರ್ ಆಂಡ್ ಡಿ ಸೆಂಟರ್ ಇವೆ. ಬಿಯಾಂಡ್ ಬೆಂಗಳೂರು ಸಾಕಾರಗೊಳಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ ಐಟಿ ಉದ್ಯಮಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.

ಮುಂದಿನ 10 ವರ್ಷದಲ್ಲಿ ನಗರೀಕರಣ ಹೆಚ್ಚಳವಾಗಲಿದೆ. ಭಾರತದಲ್ಲಿ ಶೇ 40% ರಷ್ಟು ನಗರೀಕರಣವಾಗಲಿದೆ. ಹೀಗಾಗಿ ಐಟಿ ಬಿಟಿ ಕಂಪನಿಗಳು ಸರಳ ನಗರೀಕರಣ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಲು ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ

ಆರೋಗ್ಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು.  ದೇಶದಲ್ಲಿ ಒಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ 7 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ ಮಾಡಲಾಗುತ್ತಿದೆ. ಕಲಬುರ್ಗಿ, ಹುಬ್ಬಳ್ಳಿ ಧಾರವಾಡ, ಮೈಸೂರು, ಮಂಗಳೂರು ಸುತ್ತ ಹೊಸ ನಗರಗಳು ಬರಲಿವೆ ಎಂದು ತಿಳಿಸಿದರು.

ಬೆಂಗಳೂರಿನ ಪಕ್ಕ ಹೊಸ ನಗರ‌ ನಿರ್ಮಾಣ ಮಾಡಲಾಗುತ್ತದೆ. ಜ್ಞಾನ, ವಿಜ್ಞಾನ ಹಾಗೂ ಟೆಕ್ ಸಿಟಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ವಿಮಾನ ನಿಲ್ದಾಣಕ್ಕೆ ಹತ್ತಿರವಿರಲಿದೆ. ಆರು ತಿಂಗಳೊಳಗೆ ಈ ನಗರ ನಿರ್ಮಾಣ ದ ಬಗ್ಗೆ ಘೋಷಣೆ ಮಾಡಲಿದ್ದು, ಯೋಜನೆಯನ್ನು ರೂಪಿಸಲಾಗುವುದು. ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳಿದ್ದು, ಸರ್ಕಾರದ ವತಿಯಿಂದ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಇದೂ ಕೂಡ ಆರು ತಿಂಗಳಲ್ಲಿ ಸ್ಥಾಪಿಸಲಾಗುವುದು.  ನಮ್ಮ ಪ್ರಧಾನಿಗಳು ಬಿಐಎಎಲ್ ನ 2 ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದಾರೆ.  ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಟರ್ಮಿನಲ್ ಇದಾಗಿದೆ. ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ.  ತಂತ್ರಜ್ಞಾನಗಳೆಲ್ಲವೂ ವಿಶ್ವದ ಭವಿಷ್ಯಕ್ಕೆ ಮಾನವ ಅಭಿವೃದ್ಧಿ ಸಮಾವೇಶದ ಧ್ಯೇಯವಾಗಲಿ ಎಂದರು.

ಕಳೆದ 25 ವರ್ಷಗಳಿಂದ ಬೆಂಗಳೂರು ಟೆಕ್ ಸಮ್ಮಿಟ್ ಯಶಸ್ವಿ ಯಾಗಿ ನಡೆಯುತ್ತಿದೆ.‌ಇದಕ್ಕೆ ಕಾರಣರಾದ ಎಲ್ಲರಿಗೂ ಮುಖ್ಯ ಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಫಿನ್ ಲ್ಯಾಂಡ್ ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ ಕೊನೆನ್, ಯುನೈಟೆಡ್ ಎಮಿರೈಟ್ಸ್ ನ ಡಿಜಿಟಲ್ ಇಕಾಣಮಿ ಸಚಿವ ಓಮರ್ ಬಿನ್ ಸುಲ್ತಾನ್ ಅಲ್ ಒಲಾಮ,  ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವ್ಯಾಟ್  ಐ.ಟಿ ಬಿ. ಟಿ ಸಚಿವರಾದ  ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್,    ಬಯೋ ಟೆಕ್ನಾಲಜಿ ವಿಷನ್ ಗ್ರೂಪ್ ಅಧ್ಯಕ್ಷೆ  ಡಾ. ಕಿರಣ್ ಮಜುಂದಾರ್ ಶಾ,  ಸ್ಟಾರ್ಟ್ ಅಪ್  ವಿಷನ್ ಗ್ರೂಪ್  ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲ ಕೃಷ್ಣನ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐ.ಟಿ. ಬಿಟಿ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ, ಐ.ಟಿ. ಬಿಟಿ  ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

You cannot copy content of this page

Exit mobile version