ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ರಾಜ್ಯ ಸರ್ಕಾರವು ಕೋಟಿ, ಕೋಟಿ ಹಣ ಲೂಟಿ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ವಾರದ ಹಿಂದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 10 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದು 7 ಲಕ್ಷ ಉದ್ಯೋಗ ಸೃಷ್ಟಿ ಎಂದು ಹೇಳಿದ್ದಾರೆ. ಮುರುಗೇಶ್ ನಿರಾಣಿ ಅವರು 2010 ಹಾಗೂ 2012ರಲ್ಲೂ ಕೈಗಾರಿಕಾ ಸಚಿವರಾಗಿದ್ದರು. ಆಗಲೂ ಇದೇ ರೀತಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ್ದರು. 2010ರಲ್ಲಿ 3 ಲಕ್ಷ ಕೋಟಿ ಹೂಡಿಕೆ ಎಂದು ಘೋಷಣೆ ಮಾಡಿದ್ದರು. ಇಲ್ಲಿವರೆಗೂ ಅದರಲ್ಲಿ ಜಾರಿ ಆಗಿದ್ದು ಶೇ.14ರಷ್ಟು ಮಾತ್ರ. 3 ಲಕ್ಷ ಉದ್ಯೋಗ ಸೃಷ್ಟಿ ಎಂದಿದ್ದರು ಆದರೆ ಇಲ್ಲಿಯವರೆಗೂ ಸಿಕ್ಕಿರುವ ಕೆಲಸ 4 ಸಾವಿರ ಮಾತ್ರ. ಇನ್ನು 2012ರಲ್ಲಿ ಘೋಷಣೆ ಆಗಿದ್ದು 6.77 ಲಕ್ಷ ಕೋಟಿ, ಹೂಡಿಕೆ ಆಗಿದ್ದು ಶೇ.8ರಷ್ಟು ಅಂದರೆ 54 ಸಾವಿರ ಕೋಟಿ. ಅಂದು 4.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದರು. ಆದರೆ ಸಿಕ್ಕಿದ ಉದ್ಯೋಗ ಕೇವಲ 3500 ಮಾತ್ರ ಎಂದು ಮಾಹಿತಿ ನೀಡಿದರು.
ಈಗ 2022ರಲ್ಲಿ ಘೋಷಣೆ ಆಗಿರುವುದು 9.89 ಲಕ್ಷ ಕೋಟಿ ಅದರಲ್ಲಿ ಮಾಡಿಕೊಂಡಿರುವ ಒಪ್ಪಂದ 2.83 ಲಕ್ಷ ಕೋಟಿ ಎಂದು ಹೇಳುತ್ತಿದ್ದು, 7 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಇದೆಲ್ಲವೂ ರಾಜಕೀಯ ಗಿಮಿಕ್ ಆಗಿದೆ ಎಂದು ಲಕ್ಷ್ಮಣ್ ಅವರು ದೂರಿದ್ದಾರೆ.
ಈ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮಕ್ಕಾಗಿ ಪ್ರಪಂಚದಾದ್ಯಂತ ಇವರು ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ. ಭೂ ಬ್ಯಾಂಕ್ ಮೂಲಕ 1.5 ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ, ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು. ಈಗ ದೇವನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆಯನ್ನು ರೈತರಿಂದ ಕಸಿದು ರಿಯಲ್ ಎಸ್ಟೇಟ್ ನವರಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ಈ ಕಾರ್ಯಕ್ರಮದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಆ ಸಮಿತಿಯಲ್ಲಿ ಅವರು ಇದ್ದು, ಕಾರ್ಯಕ್ರಮದ ಆಯೋಜನೆಯಲ್ಲೂ ಅವರ ಪಾತ್ರವಿತ್ತು. ಸಚಿವರ ಪುತ್ರ ಎನ್ನುವುದು ಹೊರತಾಗಿ ಉಳಿದ ಯಾವುದೇ ಅರ್ಹತೆ ಅವರಿಗೆ ಇಲ್ಲವಾಗಿದೆ. ಅವರನ್ನು ಯಾಕೆ ಇದರಲ್ಲಿ ಭಾಗವಹಿಸಲು ಅವಕಾಸ ನೀಡಿ ಅವರ ಮೂಲಕ ಯಾರಿಗೆ ಎಷ್ಟು ಎಕರೆ ಜಮೀನು ಕೊಡಿಸಿದ್ದೀರಿ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳ ವಾಸ್ತವ್ಯಕ್ಕೆ ಸ್ಟಾರ್ ಹೋಟೇಲ್ ಗಳಿಗಾಗಿ 85 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಮೊನ್ನೆ ಪ್ರಧಾನಿ ಅವರು 4 ಗಂಟೆ ಆಗಮಿಸಿದ್ದಕ್ಕೆ ಜಾಹೀರಾತು ಹೊರತುಪಡಿಸಿ 48 ಕೋಟಿ ಖರ್ಚು ಮಾಡಲಾಗಿದೆ. ಇದು ಜನಸಾಮಾನ್ಯರ ಹಣವಾಗಿದೆ. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಸರ್ಕಾರ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 144ಪೊಲೀಸ್ ಠಾಣೆಗಳಿವೆ. 44 ಟ್ರಾಫಿಕ್ ಪೊಲೀಸ್ ಠಾಣೆಗಳಿವೆ. ಒಟ್ಟು 188 ಠಾಣೆಗಳಿವೆ. ಇವುಗಳಿಂದ ಭ್ರಷ್ಟಾಚಾರದ ಮೂಲಕ ಬರುತ್ತಿರುವ ಆದಾಯ ವಾರ್ಷಿಕವಾಗಿ 250 ಕೋಟಿ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಗೆ 1.50 ಕೋಟಿ. ಉಪ್ಪಾರಪೇಟೆ ಠಾಣೆಯಲ್ಲಿ 1.25 ಕೋಟಿ, ಬಸವೇಶ್ವರ ನಗರ 1 ಕೋಟಿ. ಕೇವಲ ವರ್ಗಾವಣೆ ಧಂದೆಯಲ್ಲಿ 188 ಪೊಲೀಸ್ ಠಾಣೆಗಳ ಮೂಲಕ 250 ಕೋಟಿ ವಸೂಲಿ ಮಾಡಲಾಗಿದೆ. ಈ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಹಸ್ಯವಾಗಿ ನೀಡಿರುವ ಮಾಹಿತಿ. ಈ ವಿಚಾರ ತನಿಖೆ ಮೂಲಕ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಠಾಣೆಗಳಿಂದ ಪ್ರತಿನಿತ್ಯ ಆಗುತ್ತಿರುವ ವಸೂಲಿ 5 ಕೋಟಿ. ತಿಂಗಳಿಗೆ 150 ಕೋಟಿ ವಸೂಲಿ ಆಗುತ್ತಿದೆ. ಕಳೆದ ಮೂರುವರೆ ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ನಂತರ ಸುಮಾರು 1 ಲಕ್ಷ ಕೋಟಿ ವಸೂಲಿ ಮಾಡಲಾಗಿದೆ. ಇದು ಹಾಲಿ 6 ಸಚಿವರು ಇಬ್ಬರು ಆಪ್ತರ ಬಳಿ ಈ ಹಣವಿದೆ. ಈ ವಿಚಾರವಾಗಿ ಹೈಕೋರ್ಟ್ ಹಾಗು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ, ಇಡಿ ಅಥವಾ ಸಿಬಿಐ ಮೂಲಕ ತನಿಖೆ ಆದರೆ 8 ಜನರ ಹೆಸರನ್ನು ನಾವು ನೀಡುತ್ತೇವೆ ಎಂದು ತಿಳಿಸಿದರು.
ಇಡಿ ಅವರು ಸಣ್ಣ ಪುಟ್ಟ ಪ್ರಕರಣ ಇಟ್ಟುಕೊಂಡು ಅವರು ಸಾಯುವ ವರೆಗೂ ಬಿಡುವುದಿಲ್ಲ. ನೀವು ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಿ. ಬೊಮ್ಮಾಯಿ ಅವರೇ ನೀವು ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ. ನಿಮ್ಮ ಸುತ್ತಮುತ್ತಲಿನವರೇ ಈ 1 ಲಕ್ಷ ಕೋಟಿ ಒಡೆಯರು ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರ ಕಿ.ಮೀ ರಸ್ತೆಗಳಿದ್ದು, 32 ಸಾವಿರ ರಸ್ತೆಗುಂಡಿಗಳಿವೆ ಎಂದು ಸರ್ಕಾರ ಹೈಕೋರ್ಟ್ ಗೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ 10 ಸಾವಿರ ರಸ್ತೆಗುಂಡಿ ಮುಚ್ಚಲಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಖರ್ಚಾಗಿರುವ ಹಣ 790 ಕೋಟಿ. ಇನ್ನು ಉಳಿದ 22 ಸಾವಿರ ಕೋಟಿ ರಸ್ತೆಗುಂಡಿ ಮುಚ್ಚಲು 1500 ಕೋಟಿ ಬೇಕಾಗುತ್ತದೆ. ಒಟ್ಟಾರೆ 2200 ಕೋಟಿ ಯನ್ನು ರಸ್ತೆ ಗುಂಡಿ ಮುಚ್ಚಲು ಬೇಕಾಗಿದೆ ಎಂದು ತಿಳಿಸಿದರು.
ಕೇಂದ್ರದ ಇಂಡಿಯನ್ ರೋಡ್ ಕಾಂಗ್ರೆಸ್ ಸಂಸ್ಥೆ ಪ್ರಕಾರ 1 ಕಿ.ಮೀ ರಸ್ತೆಯ ಡಾಂಬರೀಕರಣಕ್ಕೆ 1.5 ಕೋಟಿ ವೆಚ್ಚ ಬೀಳುತ್ತದೆ. ಇವರು 1 ಕಿ.ಮೀ ರಸ್ತೆಯ ರಸ್ತೆಗುಂಡಿ ಮುಚ್ಚಲು 2.25 ಕೋಟಿ ವೆಚ್ಚ ಮಾಡಿದ್ದಾರೆ. ಈ ಸರ್ಕಾರದಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಬೊಮ್ಮಾಯಿ ಅವರೇ ನೀವು ಸಂಕಲ್ಪ ಯಾತ್ರೆ ಮಾಡಲು ಹೊರಟಿದ್ದೀರಿ. ನಿಮ್ಮ ಸಂಕಲ್ಪ ಯಾತ್ರೆಯಲ್ಲಿ 3 ಗಂಟೆ ಭಾಷಣದಲ್ಲಿ ಎರಡೂವರೆ ಗಂಟೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಬೈಯ್ಯಲು ಮೀಸಲಿಡುತ್ತೀರಿ. ಈಗ ನೀವು ಇದಕ್ಕೆ ಉತ್ತರ ನೀಡಬೇಕು ಎಂದರು.
ಮೈಸೂರಿನಲ್ಲಿ ಕಿಡಿ ಹೊತ್ತಿಸಲು ಪ್ರತಾಪ್ ಸಿಂಹ ಎಂಬ ಸಂಸದರಾಗಿದ್ದಾರೆ. ಈ ಹಿಂದಿನ ಸರ್ಕಾರಗಳು ಮೈಸೂರು ಸಿಟಿಯನ್ನು ಪಾರಂಪರಿಕ ನಗರಿ ಎಂದು ಪರಿಗಣಿಸಬೇಕು ಎಂದು ಆರ್ಕಿಯಾಲಜಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿತ್ತು. ಈ ಪರ್ಸ್ತಾವನೆಯಲ್ಲಿ 350 ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಿದ್ದು, ಇದರಲ್ಲಿ ಅರಮನೆ ಸೇರಿದಂತೆ 180 ಕಟ್ಟಡಗಳು ಸರ್ಕಾರಿ ಕಟ್ಟಡಗಳಾಗಿವೆ ಎಂದು ಮಾಹಿತಿ ನೀಡಿದರು.
ಇಡೀ ಪ್ರಪಂಚದಲ್ಲಿ 8 ಬಗೆಯ ಆರ್ಕಿಟೆಕ್ಚರ್ ಗಳನ್ನು ಬಳಸಲಾಗುತ್ತಿದೆ. ಮೈಸೂರು ಅರಮನೆಯ ಮೇಲ್ಬಾಗದ ಗೋಪುರವನ್ನು ಮೋಘಲರ ಆರ್ಕಿಟೆಕ್ಚರ್ ಎಂದು ಕರೆಯುತ್ತೇವೆ. ಬ್ರಿಟನ್ ಸೇರಿದಂತೆ ಪ್ರಪಂಚದಾದ್ಯಂತ ಈ ವಿನ್ಯಾಸ ಬಳಸಲಾಗಿದೆ. ಮೈಸೂರು ಅರಮನೆ ವಿನ್ಯಾಸ ಆಧಾರದ ಮೇಲೆ ಅಲ್ಲಿನ ಪಾಲಿಕೆ, ಶಾಸಕರು ಸೇರಿ ಅರಮನೆಯ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕಾದರೂ ಅದು ಅರಮನೆಯ ಪಾರಂಪರಿಕ ವಿನ್ಯಾಸವನ್ನೇ ಹೊಂದಿರ ಬೇಕು ಎಂದು ತೀರ್ಮಾನಿಸಲಾಗಿದೆ. ಇದು ಮೈಸೂರು ಪಾಲಿಕೆಯ ಬೈಲಾದಲ್ಲೂ ಇದೆ. ಒಂದು ಶೌಚಾಲಯ ಕಟ್ಟಿದರೂ ಅದರ ವಿನ್ಯಾಸ ಈ ರೀತಿ ಇರಬೇಕು ಎಂದು ಕಾನೂನು ಇದೆ ಎಂದು ಹೇಳಿದರು.
ಈ ಭಾಗದ ಮೂವರು ಶಾಸಕರ ಪೈಕಿ ಬಿಜೆಪಿ ಶಾಸಕ ರಾಮದಾಸ್ ಅವರು 18 ಬಸ್ ಶೆಲ್ಟರ್ ಗಳನ್ನು ತಮ್ಮ ಅನುದಾನದಲ್ಲಿ ಹಣ ನೀಡಿದ್ದು, 12 ಬಸ್ ಶೆಲ್ಟರ್ ನಿರ್ಮಾಣವಾಗಿವೆ. ಇವುಗಳ ಡೂಮ್ ಸ್ಟಕ್ಚರ್ ಏನು ಎಂದು ಅರ್ಥ ಮಾಡಿಕೊಳ್ಲುವ ಯೋಗ್ಯತೆ ಇಲ್ಲದ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ತಂದು ಪಾಲಿಕೆ ಹಾಗೂ ರಾಜ್ಯ ರಸ್ತೆ ಸಂಸ್ಥೆಗೆ ಪತ್ರ ಬರೆದು ಅದರಲ್ಲಿ ಇದು ಧರ್ಮವನ್ನು ಬಿಂಬಿಸುವ ವಿನ್ಯಾಸವಾಗಿದೆ. ಹೀಗಾಗಿ ಇದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿ ಕೈಯಲ್ಲಿ ಸಂಸದರು ಪತ್ರ ಬರೆಸುತ್ತಾರೆ ಎಂದು ಹೇಳಿದರು.
ಇದಕ್ಕೆ ರಾಮದಾಸ್ ಅವರು ಸ್ಪಷ್ಟೀಕರಣ ನೀಡಿದ್ದು, ಇದು ಯಾವುದೇ ಧರ್ಮದ ಪ್ರತೀಕವಾಗಿಲ್ಲ. ಇದಕ್ಕೂ ಮಸೀದಿಗೆ ಸಂಬಂಧವಿಲ್ಲ ಹಾಗಾಗಿ ಇದನ್ನು ಒಡೆಯುವ ಪ್ರಶ್ನೆಯೇ ಇಲ್ಲ. ಪ್ರತಾಪ್ ಸಿಂಹ ಅವರು ರಾಜಕೀಯ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದರು.
ಪ್ರತಾಪ್ ಸಿಂಹ ಕಳೆದ ಎಂಟು ವರ್ಷಗಳಿಂದ ಕೊಡಗನ್ನು ಸಂಪೂರ್ಣವಾಗಿ 25 ವರ್ಷ ಹಿಂದಕ್ಕೆ ತೆಗೆದುಕೊಂಡಿದ್ದು, ಮೈಸೂರನ್ನು ಸುಮಾರು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉಳಿದಿರುವ ಎರಡು ವರ್ಷಗಳಲ್ಲಿ ಇನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇವರ ಯೋಗ್ಯತೆಗೆ ಕೇಂದ್ರದಿಂದ ನಯಾ ಪೈಸೆ ತರಲಿಲ್ಲ. ಆದರೆ ರಾಜ್ಯದಲ್ಲಿ ಕಿಡಿ ಹೊತ್ತಿಸಲು ನಾಲ್ಕೈದು ಜನರಿದ್ದು ಇವರು ಮೊದಲ ಎರಡು ಸ್ಥಾನಗಳಲ್ಲಿ ಬರುತ್ತಾರೆ. ಪ್ರಪ್ಲಾದ್ ಜೋಷಿ, ಸಿ.ಟಿ ರವಿ, ರವಿ ಕುಮಾರ್ ಇವರೆಲ್ಲರೂ ಸುಳ್ಲು ಹೇಳುವುದರಲ್ಲೇ ಪಿಹೆಚ್ಡಿ ಮಾಡಿಕೊಂಡಿದ್ದರೆ ಎಂದು ಕಾರವಾಗಿ ಟೀಕಿಸಿದರು.
ಪ್ರತಾಪ್ ಸಿಂಹ ಅವರು ಸತ್ಯಹರಿಶ್ಚಂದ್ರರ ಕುಟುಂಬಕ್ಕೆ ಸೇರಿದ್ದರೆ ನಾನು ಮೈಸೂರು ಡಿಸಿಗೆ ನೀಡಿರುವ ದೂರಿನಲ್ಲಿ ಸಂಸದರ ನಿಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದೇನೆ. ಇವರು ದಕ್ಷಿಣ ಕನ್ನಡದ ಕಿಕ್ಕಂಜೆ ಊರಿನಲ್ಲಿ ಡಾ.ಮುರಳಿಕೃಷ್ಣ ಎಂಬ ಇವರ ಸ್ನೇಹಿತರ ಆಸ್ಪತ್ರೆ ಇದೆ. ಅದಕ್ಕೆ ಇವರು 18 ಲಕ್ಷ ರೂಪಾಯಿಯ ಆಂಬುಲೆನ್ಸ್ ಅನ್ನು ದೇಣಿಗೆ ನೀಡುತ್ತಾರೆ. ಮುರಳಿಕೃಷ್ಣ ಅವರ ಮತ್ತೊಂದು ಕ್ಲೀನಿಕ್ ಹೊಯ್ಸಳ ಕ್ಲೀನಿಕ್ ಗೆ ನಿರ್ದೇಶಕರನ್ನಾಗಿ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಂಸದರ ನಿಧಿಯಿಂದ ಬೇರೆ ಜಿಲ್ಲೆ ಕ್ಷೇತ್ರಗಳಿಗೇ ದೇಣಿಗೆ ರೂಪದಲ್ಲಿ ನೀಡಲು ಅವಕಾಶವಿದೆ. ಆದರೆ ಅದಕ್ಕೆ ಒಂದು ಷರತ್ತು ಇದ್ದು, ನೀವು ಯಾವುದೇ ಟ್ರಸ್ಟ್, ಸೊಸೈಟಿ ಅಥವಾ ಸಹಕಾರಿ ಸೊಸೈಟಿ ಆಗಿರಬಾರದು. ಆದರೆ ಪ್ರತಾಪ್ ಸಿಂಹ ಅವರು ನೀಡಿರುವ ಹಣ ವೆಂಕಟಕೃಷ್ಣ ಯೂರತ್ರೇಯ ಮೆಮೋರಿಯಲ್ ಟ್ರಸ್ಟ್ ಗೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇನ್ನು ಮೈಸೂರಿನಲ್ಲಿ ಒಂದು ಟ್ರಸ್ಟ್ ಗೆ ಹಣ ನೀಡಿದ್ದು, ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ಗೆ ನೀಡಿದ್ದಾರೆ. ಈ ಟ್ರಸ್ಟ್ ನ ವಿಳಾಸ ಹುಡುಕಿಕೊಂಡು ಹೋದಾಗ ಸರಸ್ವತಿಪುರಂ ನ ವಿಶ್ವಮಾನವ ರಸ್ತೆ 12ನೇ ನಂಬರ್ ಜಾಗದಲ್ಲಿ ಈ ಟ್ರಸ್ಟ್ ನ ಕಚೇರಿ ಬದಲು ಮೆಕ್ ಡೊನಾಲ್ಡ್ ಹೊಟೇಲ್ ಇದೆ. ಇದಕ್ಕೆ ಪ್ರತಾಪ್ ಸಿಂಹ ಅವರು ಉತ್ತರಿಸಬೇಕು. ಇದುವರೆಗೂ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿ, ಎರಡು ಪತ್ರಿಕಾಗೋಷ್ಠಿ ಮಾಡಿದ್ದರೂ ಅವರು ಉತ್ತರ ನೀಡಿಲ್ಲ ಎಂದರು.
ಇಂತಹ ವ್ಯಕ್ತಿ ಬೆಂಗಳೂರು ಮೈಸೂರು ರಸ್ತೆಯನ್ನು ತನ್ನ ಮನೆ ಆಸ್ತಿಯಿಂದ ಮಾಡುತ್ತಿರುವಂತೆ ಮಂಡ್ಯ, ಮದ್ದೂರಿನಲ್ಲಿ ಫೇಸ್ಬುಕ್ ಲೈವ್ ಮಾಡುತ್ತಿದ್ದಾರೆ. ಈ ರೀತಿ ಮಾಡಿ ಗುತ್ತಿಗೆದಾರರಿಂದ 3 ಕೋಟಿಯಷ್ಟು ಲಂಚ ಪಡೆದಿದ್ದಾರೆ ಎಂದು ಮಂಡ್ಯದ ಜನ ಪತ್ರಿಕಾಗೋಷ್ಠಿ ಮಾಡಿ ಹೇಳುತ್ತಿದ್ದಾರೆ. ಇಂತಹ ವ್ಯಕ್ತಿ ಚುನಾವಣೆ ಸಮಯದಲ್ಲಿ ಕಿಡಿ ಹಚ್ಚಲು ಈ ರೀತಿ ಗೊಂದಲ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರ ಈ ಸುಳ್ಳು ಹೇಳಿಕೆಗಳನ್ನು ನಂಬಬಾರದು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಅವರು ತಾವು ಇಂತಹ ಭರವಸೆ ನೀಡಿದ್ದು, ಅದರಲ್ಲಿ ಎಷ್ಟು ಭರವಸೆ ಈಡೇರಿಸಿದ್ದೇವೆ, ಇಂತಹ ಯೋಜನೆ ಮಾಡಿದ್ದೇವೆ ಎಂದು ತಮ್ಮ ಕೆಲಸದ ಪಟ್ಟಿ ನೀಡಿ ಮತ ಕೇಳಲಿ. ಅದನ್ನು ಬಿಟ್ಟು ದಿನಬೆಳಗಾದರೆ ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೆಸರು ಬಳಸದೇ ಯಾವುದಾದರೂ ಒಂದು ಕಾರ್ಯಕ್ರಮವನ್ನು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಶ್ರೀರಾಮುಲು ಅವರು ಅಂದರಗಾನಿ ಎಂದು ವೀರಾವೇಷದಲ್ಲಿ ಮಾತನಾಡುವುದರ ಹೊರತಾಗಿ ಬೇರೇನು ಮಾಡಿಲ್ಲ. ಆ ಪದದ ಅರ್ಥ ಹುಡುಕುತ್ತಿದ್ದು ಈವರೆಗೂ ಸಿಕ್ಕಿಲ್ಲ. ಅವರು ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಅನ್ಯಾಯಾ ಮಾಡಿದ್ದಾರೆ ಎಂದು ಹೇಳುತ್ತಾರೆ. ಅವರು ಯಾವ ಕ್ಷೇತ್ರದವರು ಅವರು ಏನು ಅನ್ಯಾಯಾ ಮಾಡಿದ್ದಾರೆ ಎಂದು ಅರಿಯುತ್ತಿಲ್ಲ. ಶ್ರೀರಾಮುಲು ಅವರೇ ನೀವು ಮುಂದಿನ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಸೋಲುವುದು ನಿಶ್ಚಿತ. ನಿಮ್ಮನ್ನು ಸೋಲಿಸಲು ಎಲ್ಲ ವ್ಯವಸ್ಥೆಯನ್ನು ಜನ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ರಾಮದಾಸ್ ಹಾಗೂ ಪ್ರತಾಪ್ ಸಿಂಹ ಅವರ ನಡುವಣ ತಿಕ್ಕಾಟ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಒಳಗೆ ಅವರು ಬಟ್ಟೆ ಹರಿದುಕೊಂಡು ಹೊಡೆದಾಡಿ ಹೊರಗಡೆ ಏನೂ ಆಗಿಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಅನ್ನು ದೊಡ್ಡ ಮಟ್ಟಕ್ಕೆ ಹೋಗಲಿದ್ದು. ಜನಗಳು ಇದನ್ನು ಮನರಂಜನೆಯಾಗಿ ನೋಡಲಿದ್ದಾರೆ.