ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ KWIN ಸಿಟಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಚಾಲನೆ ನೀಡಿದರು. ಪ್ರಾಥಮಿಕ ಹಂತದಲ್ಲಿ 2,000 ಎಕರೆ ಜಾಗದಲ್ಲಿ ಶುರುವಾಗುವ ಈ ಯೋಜನೆ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರದ (ಕೆಎಚ್ಐಆರ್ ಸಿಟಿ) ಮೊದಲ ಹಂತದ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ದೇಶದಲ್ಲೇ ಇಂತದ್ದೊಂದು ಸಿಟಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ಬಳಿ ನಿರ್ಮಾಣವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಅತಿ ಹೆಚ್ಚು ಮುತುವರ್ಜಿ ವಹಿಸಿರುವುದರ ಹಿಂದೆ ಭವಿಷ್ಯದಲ್ಲಿ ಇಡೀ ಜಗತ್ತೇ ಹೂಡಿಕೆಗಾಗಿ ಬೆಂಗಳೂರಿನ ಕಡೆ ಮುಖ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ದಾಬಸಪೇಟೆ- ದೊಡ್ಡಬಳ್ಳಾಪುರ ನಡುವೆ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಗೆ ಹೊಂದಿಕೊಂಡೇ ಇರುವ, ಮೊದಲ ಹಂತದಲ್ಲಿ 500 ಎಕರೆಯಲ್ಲಿ ಈ ಕೆಎಚ್‌ಐಆರ್ ವಿನೂತನ ಸಿಟಿ/ನಗರ ತಲೆ ಎತ್ತಲಿದೆ. ಸದ್ಯ ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಿದ್ದೇವೆ. ಭವಿಷ್ಯ ಅಗತ್ಯತೆ ನೋಡಿಕೊಂಡು ಈ ನಗರದ ವಿಶಾಲತೆಯನ್ನು 5000 ಎಕರೆಗೆ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದೂ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಈ ಹೊಸ ನಗರದಲ್ಲಿ ಜ್ಞಾನ, ಆರೋಗ್ಯ ಮತ್ತು ಹೊಸ ಆವಿಷ್ಕಾರಗಳ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಅನೇಕ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು ಪ್ರಾಥಮಿಕ ಹಂತದಲ್ಲಿ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ ನಗರ ನಿರ್ಮಾಣದ ಭರವಸೆ ನೀಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ಜಾಗತಿಕವಾಗಿ ಹೆಸರು ಮಾಡಿರುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್, ಅವುಗಳೊಂದಿಗೆ ಸಹಭಾಗಿತ್ವ, ವೈದ್ಯಕೀಯ ಸಂಸ್ಥೆಗಳು ಮತ್ತು ಆರೋಗ್ಯ ಸೇವೆಗಳು, ಸಂಶೋಧನೆ ಮತ್ತು ನಾವೀನ್ಯತೆ ಇವೆಲ್ಲವೂ ಬೆಂಗಳೂರಿನ ಸಮೀಪವೇ ನೆಲೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ಇಲ್ಲಿ ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿರುವ ಈ ಹೊಸ ನಗರ ನಿರ್ಮಾಣ ಆದಷ್ಟು ಬೇಗನೆ ಮುಗಿದು ಕಾರ್ಯಾರಂಭ ಮಾಡಿ, ಉದ್ಘಾಟನೆ ಹೊತ್ತಿಗೆ ಸಿಟಿಗೆ ಹೊಸ ಹೆಸರು ನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದರು.