ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೆರೆದ ಮ್ಯಾನ್‌ಹೋಲ್‌ಗೆ ಮಹಿಳೆಯೊಬ್ಬರು ಬಿದ್ದಿದ್ದಾರೆ. ನಂತರ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ ಕುಟುಂಬಕ್ಕೆ ಆಧಾರವಾಗಿದ್ದ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ನಗರಸಭೆ ಜತೆಗೆ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ನಡೆದಿದೆ. ನಗರದಲ್ಲಿ ಬುಧವಾರ ಧಾರಾಕಾರ ಮಳೆ ಸುರಿದಿದ್ದು ಇದರಿಂದ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿಯಿತು.
ಅಂಧೇರಿ ಪೂರ್ವದಲ್ಲಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ಕಟ್ಟಡದ ಗೇಟ್ ಸಂಖ್ಯೆ 8ರ ಬಳಿ ಬುಧವಾರ ರಾತ್ರಿ ಮಹಿಳೆಯೊಬ್ಬರು ತುಂಬಿ ಹರಿಯುತ್ತಿದ್ದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಆಕೆಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತರನ್ನು 45 ವರ್ಷದ ವಿಮಲಾ ಅನಿಲ್ ಗಾಯಕ್ವಾಡ್ ಎಂದು ಗುರುತಿಸಲಾಗಿದೆ.
ಮತ್ತೊಂದೆಡೆ, ವಿಮಲಾ ಸಾವಿನ ಬಗ್ಗೆ ಪತಿ ಪೊಲೀಸ್ ದೂರು ದಾಖಲಿಸಿದ್ದಾರೆ. ತಾನು ಅನಾರೋಗ್ಯದಿಂದ ಬಳಲುತ್ತಿದ್ದು ದುಡಿಯುವ ಪತ್ನಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು ಆಕೆಯೇ ಆಸರೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿಯ ಅಕಾಲಿಕ ಮರಣದಿಂದ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದೆ ಎಂದು ಅವರು ಅಳಲು ತೋಡಿಕೊಂಡರು. ಮ್ಯಾನ್‌ಹೋಲ್ ತೆರೆದು ನಿರ್ಲಕ್ಷ್ಯ ತೋರಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಏತನ್ಮಧ್ಯೆ, ಈ ಘಟನೆಗೆ ಮುಂಬೈ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ನಿರ್ಲಕ್ಷ್ಯದ ಆರೋಪ ಎದುರಿಸುತ್ತಿರುವ ಬಿಎಂಸಿ ಕೂಡ ಈ ಘಟನೆಗೆ ಪ್ರತಿಕ್ರಿಯಿಸಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಘಟನೆಯ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಆ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.