ಕಲಬುರಗಿ, ಚಿತ್ತಾಪುರ,ಏಪ್ರಿಲ್ 11: ಅನೇಕ ಜಾತಿ ಧರ್ಮಗಳು, ಭಾಷೆ, ಸಂಸ್ಕೃತಿಗಳಿರುವ ಸಮಾಜದಲ್ಲಿ ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಚಿತ್ತಾಪುರ ತಾಲ್ಲೂಕಿನ ಶ್ರೀ ಶ್ರೀ ಶ್ರೀ ಭೋಜಲಿಂಗೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ನೂತನ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿ, ಕಲ್ಯಾಣ ಮಂಟಪವನ್ನು ಉದ್ಘಾಟಿಸಿ ಮಾತನಾಡಿದರು.
ಭೋಜಲಿಂಗೇಶ್ವರರು ಸಮಾಜಕ್ಕೆ ಸತ್ಯದ ದಾರಿಯನ್ನು ತೋರಿ ಸಮಾನತೆ, ಭಾವೈಕ್ಯತೆಯನ್ನು ಸಾರಿದವರು. ನಾವೆಲ್ಲರೂ ಮನುಷ್ಯರಾಗಿದ್ದು, ಮಾನವರಾಗಿ ಬದುಕಬೇಕಿದೆ. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಪರಸ್ಪರ ದ್ವೇಷವನ್ನು ಬಿತ್ತುವವರು ನಮ್ಮ ಮಧ್ಯೆ ಇದ್ದಾರೆ. ಸಮಾಜವನ್ನು ಧರ್ಮ, ಜಾರಿಯ ಹೆಸರಿನಲ್ಲಿ ಒಡೆದು, ಒಬ್ಬರನ್ನು ಮತ್ತೊಬ್ಬರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುವ ಪಟ್ಟಭದ್ರ ಹಿತಾಸಕ್ತಿಗಳು ಇದ್ದು ಅವರ ಆಮಿಷಕ್ಕೆ ಬಲಿಯಾಗಬಾರದು ಎಂದರು. ಅದನ್ನೇ ಬೊಜಲಿಂಗೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ ಎಂದರು.
ಎಲ್ಲರೂ ಕಾಯಕ ಮಾಡಬೇಕು
“ಮುಂದೆ ಗುರಿ, ಹಿಂದೆ ಗುರು” ಇರಬೇಕು ಎಂದು ಸಾಧು, ಸಂತರು, ಸಮಾಜ ಸುಧಾರಕರು, ಬಸವಣ್ಣನವರು ಹೇಳಿದ್ದು ಎಂದರು. ಸಮಾಜದಲ್ಲಿರುವ ಎಲ್ಲರೂ ಕಾಯಕವನ್ನು ಮಾಡಬೇಕು, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ,ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಅಸಮಾನತೆ ಹೋಗಲಾಡಿಸಲು ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ದೊರಕಬೇಕು ಎಂದರು.
ಸಮಾಜ ಒಡೆಯುವ ಶಕ್ತಿಗಳಿಗೆ ಬಲಿಯಾಗಬಾರದು
ಅನೇಕ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದು ಅದಕ್ಕೆ ನಾವು ಬಲಿಯಾಗಬಾರದು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಭೋಜಲಿಂಗೇಶ್ವರ ಕ್ಷೇತ್ರದ ಮಹತ್ವವನ್ನು ಜನರಿಗೆ ತಿಳಿಸಬೇಕು.
ಸಮ ಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು
ಬುದ್ಧ, ಬಸವಣ್ಣ, ಕನಕದಾಸರು ಹೇಳಿದ ವಿಚಾರಗಳು ನಮ್ಮ ಮುಂದಿದ್ದರೂ ನಾವು ದಾರಿತಪ್ಪುತ್ತೇವೆ. ಅದಕ್ಕಾಗಿಯೇ ಜಾತಿ ವ್ಯವಸ್ಥೆ ಈವರೆಗೆ ಹೋಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೇಲು ಕೀಳು ಎಂಬ ತಾರತಮ್ಯ ಹೋಗಲಾಡಿಸಲು ಶ್ರಮಿಸಿದರು. ಸಮ ಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರೂ ಇದನ್ನು ಆಚರಣೆಗೆ ತಂದರೆ ಮಾತ್ರ ಇದು ಸಾಧ್ಯ. ಜಾತಿ ವ್ಯವಸ್ಥೆಗೆ ಚಲನೆ ಬರಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಬಲ ಬರಲೇಬೇಕು ಎಂದರು.
ಎಲ್ಲರಿಗೂ ವೈಚಾರಿಕ, ವೈಜ್ಞಾನಿಕ ಶಿಕ್ಷಣ ದೊರೆಯಬೇಕು
ಜಾತಿ ವ್ಯವಸ್ಥೆ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣವಾಗಿ ಅಳಿದಿಲ್ಲ. ಅದಕ್ಕಾಗಿ ಎಲ್ಲರಿಗೂ ವೈಚಾರಿಕ, ವೈಜ್ಞಾನಿಕ ಶಿಕ್ಷಣ ದೊರೆಯಬೇಕು. ಕರ್ಮಸಿದ್ಧಾಂತಕ್ಕೆ ಬಲಿಯಾಗದೆ, ಮೂಢ ನಂಬಿಕೆಗಳಿಗೆ ದಾಸರಾಗಬಾರದು ಎಂದು ಕಿವಿ ಮಾತು ಹೇಳಿದರು.
ಭೋಜಲಿಂಗೇಶ್ವರ ಮಠಕ್ಕೆ ಒಂದು ಕೋಟಿ
ಭೋಜಲಿಂಗೇಶ್ವರ ಮಠಕ್ಕೆ ಸಚಿವ ಪ್ರಿಯಾಂಕ ಖರ್ಗೆ ಅವರು ಒಂದು ಕೋಟಿ ಅನುದಾನ ಒದಗಿಸಿದ್ದು, ಮಠ ಜಾತ್ಯತೀತವಾಗಿ ಬೆಳೆಯಲಿ ಎಂದರು. ಚಿತ್ತಾಪುರದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಅನುದಾನ ಒದಗಿಸಲು ಹಾಗೂ ಯಾತ್ರಿ ನಿವಾಸಕ್ಕಾಗಿ ಸಲ್ಲಿಸಿರುವ ಬೇಡಿಕೆಯನ್ನು ಸರ್ಕಾರ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
