ಚೆನ್ನೈ: ಲೋಕಸಭೆ ಸ್ಥಾನಗಳ ಹೆಚ್ಚಳ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಕಿಡಿಕಾರಿದ್ದಾರೆ. ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿರುವ ಅವರು, “ದಕ್ಷಿಣದಲ್ಲಿ ಬೀಸುತ್ತಿರುವ ತಂಗಾಳಿಯನ್ನು ಚಂಡಮಾರುತವನ್ನಾಗಿ ಬದಲಿಸಬೇಡಿ” ಎಂದು ಪ್ರಧಾನಿ ಮೋದಿ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ‘ನಾರಿಶಕ್ತಿ ವಂದನ್ ಅಧಿನಿಯಮ-2023’ ತಿದ್ದುಪಡಿ ಬಿಲ್ ಮತ್ತು ಕ್ಷೇತ್ರ ಪುನರ್ವಿಂಗಡಣೆಯಂತಹ ನಿರ್ಣಾಯಕ ವಿಷಯಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಹಠಾತ್ತಾಗಿ ಅಂಗೀಕರಿಸಲು ಹೊರಟಿರುವುದು ಸರ್ವಾಧಿಕಾರದ ನಡೆಯಾಗಿದೆ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 1 ರಿಂದ ಜನಗಣತಿ ಆರಂಭವಾಗಲಿದೆ ಎಂದು ಕೇಂದ್ರ ಘೋಷಿಸಿದ್ದರೂ, ಈ ಇಡೀ ಪ್ರಕ್ರಿಯೆಯನ್ನು ಸರ್ಕಾರ ಏಕೆ ಗೌಪ್ಯವಾಗಿಟ್ಟಿದೆ ಮತ್ತು ಇದರಲ್ಲಿ ಪಾರದರ್ಶಕತೆ ಎಲ್ಲಿದೆ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕ್ಷೇತ್ರ ಪುನರ್ವಿಂಗಡಣೆಯನ್ನು 25 ವರ್ಷಗಳ ಕಾಲ ಮುಂದೂಡಿದ್ದ ಮಾದರಿಯನ್ನು ಪ್ರಧಾನಿ ಮೋದಿ ಅವರು ಏಕೆ ಅನುಸರಿಸುತ್ತಿಲ್ಲ ಎಂಬುದು ಸ್ಟಾಲಿನ್ ಅವರ ಪ್ರಮುಖ ಪ್ರಶ್ನೆಯಾಗಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಲೋಕಸಭೆ ಸ್ಥಾನಗಳನ್ನು ನೀಡುವ ಬದಲು, ಉತ್ತರ ಭಾರತಕ್ಕೆ ಹೆಚ್ಚಿನ ಅಧಿಕಾರ ನೀಡುವ ಪ್ರಯತ್ನವನ್ನು ಡಿಎಂಕೆ ಎಂದಿಗೂ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 29ರ ನಂತರ ಅಧಿವೇಶನ ನಡೆಸಿ ಎಂಬ ವಿರೋಧ ಪಕ್ಷಗಳ ಮನವಿಯನ್ನು ತಿರಸ್ಕರಿಸುವಲ್ಲಿ ಅಡಗಿರುವ ರಹಸ್ಯವೇನು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಗಳ ಪುನರ್ವಿಂಗಡಣೆ ಎಂಬುದು ಭಾರತದ ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಿರುವ ಸ್ಟಾಲಿನ್, ದಕ್ಷಿಣದ ಜನರ ಅನುಮತಿಯಿಲ್ಲದೆ ಮತ್ತು ಸರ್ವಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಸಮ್ಮತಿಸುವುದಿಲ್ಲ ಎಂದು ಹೇಳಿದ್ದಾರೆ. ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ದೆಬೆಹಾಕುವ ಕೇಂದ್ರದ ಯಾವುದೇ ಕ್ರಮವನ್ನು ಡಿಎಂಕೆ ಸುಮ್ಮನೆ ನೋಡುತ್ತಾ ಕೂರುವುದಿಲ್ಲ. ನಾವು ಕೇವಲ ನ್ಯಾಯಯುತವಾದ ಪುನರ್ವಿಂಗಡಣೆಯನ್ನು ಬಯಸುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
