ಬೆಂಗಳೂರು : ಉತ್ತರ ಕರ್ನಾಟಕದ ಭಾಗಗಳಲ್ಲಿ ಭಾರೀ ಪ್ರವಾಹ ಆಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಇದೀಗ ಪ್ರವಾಹದಿಂದಾಗಿ (Flood) ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ಪರಿಶೀಲನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ಸಿಎಂ ಭೇಟಿ ಮಾಡಿದ ಸಚಿವರು
ಇಂದು ಸಿಎಂ ಸಿದ್ದರಾಮಯ್ಯ ಅವರನ್ನ ಬೀದರ್‌ನ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರು ಸಚಿವ ರಹೀಂಖಾನ್ ಜೊತೆಯಲ್ಲಿ ಭೇಟಿ ಮಾಡಿದ್ದು, ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸರಿಯುತ್ತಿದೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಪ್ರವಾಹ ಆಗಿದೆ. ಈ ಮಳೆಯ ಕಾರಣದಿಂದ ಮನೆಗಳಿಗೆ ಹಾಗೂ ಜಮೀನುಗಳಿಗೆ ಹಾನಿ ಆಗಿದೆ. ಹಾಗಾಗಿ ಈ ಹಾನಿಗಳ ಬಗ್ಗೆ ವೈಮಾನಿಕ ಸಮೀಕ್ಷೆ ಮಾಡಿ, ಜಿಲ್ಲೆಗಳಿಗೆ ವಿಶೇಷವಾದ ಪ್ಯಾಕೇಜ್ ಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಉತ್ತಮವಾದ ರೀತಿಯಲ್ಲಿ ಸ್ಪಂದನೆ ಕೊಟ್ಟಿದ್ದು, ಮುಂದಿನ ಮೂರು ದಿನಗಳಲ್ಲಿ ಸಮೀಕ್ಷೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ ಈಶ್ವರ್ ಖಂಡ್ರೆ
ಇನ್ನು ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದ್ದು, ಅದರಲ್ಲಿಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದ ಈ ರೀತಿ ಸಮಸ್ಯೆಗಳಾಗುತ್ತಿದೆ. ಇದರಿಂದಾಗಿ ಬೀದರ್ ಜಿಲ್ಲೆಯಲ್ಲಿ ಸಮಸ್ಯೆ ಆಗುತ್ತಿದೆ. ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಇಲ್ಲದ ಕಾರಣದಿಂದ ಇಲ್ಲಿನ ಜನರು ಕೃಷಿಯನ್ನ ಅವಲಂಬಿಸಿ ಜೀವನ ಮಾಡುತ್ತಾರೆ. ಈ ರೀತಿ ಜೋರಾದ ಮಳೆ ಹಾಗೂ ಪ್ರವಾಹದಿಂದ ಜಮೀನುಗಳ ಬೆಳೆ ನಾಶವಾಗಿದೆ. ಇದರಿಂದ ರೈತರ ಪರಿಸ್ಥಿತಿ ದುಸ್ತರವಾಗಿದೆ ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವರು ಭೇಟಿ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೃಷ್ಣ ಮತ್ತು ಭೀಮಾ ನದಿಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇದೀಗ ವಿಜಯಪುರ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ್ ಹಾಗೂ ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಜನರಿಗೆ ಧೈರ್ಯ ಹೇಳಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ.
ಇಂದು ವಿಜಯಪುರ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ್ ಅವರು ಆಲಮೇಲ ತಾ. ಕುಮಸಗಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದು, ಮೂಲ ಸೌಕರ್ಯಗಳನ್ನ ಪರಿಶೀಲನೆ ಮಾಡಿ, ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಕಲಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ, ಕಣಸೂರು ಹಾಗೂ ಮಲಘಾಣ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಜನರಿಗೆ ಪ್ರತಿ ಹಂತದಲ್ಲೂ ಜೊತೆ ಇರುವುದಾಗಿ ಭರವಸೆ ಕೊಟ್ಟಿದ್ದಾರೆ.