ಬೆಂಗಳೂರು : ದಸರಾ (Mysore Dasara 2025) ಸಮಯದಲ್ಲಿ ಜನರಿಗೆ ಗುಡ್‌ನ್ಯೂಸ್ ಕೊಡಬೇಕಿದ್ದ ಸರ್ಕಾರ ದರ ಏರಿಕೆ (Price Hike) ಮೂಲಕ ಶಾಕ್ ಕೊಟ್ಟಿದೆ. ಹೌದು, ದಸರಾ ಹಿನ್ನೆಲೆಯಲ್ಲಿ ಟಿಕೆಟ್ ದರವನ್ನ ಏರಿಕೆ ಮಾಡಲಾಗಿದೆ.
20 ರೂಪಾಯಿ ಏರಿಕೆ
ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಉಚಿತ ಭಾಗ್ಯಗಳನ್ನ ಕೊಟ್ಟಿದ್ದ ಸರ್ಕಾರ ಈಗ ಜನರಿಗೆ ಬೆಲೆ ಏರಿಕೆಗಳ ಮೂಲಕ ಬರೆ ಎಳೆಯುತ್ತಿದೆ. ಈಗ ದಸರಾ ಸಮಯದಲ್ಲಿ ಬಸ್‌ಗಳ ಟಿಕೆಟ್ ದರವನ್ನ ಕಡಿಮೆ ಮಾಡುವ ಮೂಲಕ ಜನರಿಗೆ ಹಬ್ಬದ ಖುಷಿ ಕೊಡುವ ಬದಲಾಗಿ ಮೈಸೂರು ಮಾರ್ಗದ ಬಸ್‌ಗಳ ಟೆಕೆಟ್ ಬೆಲೆಯನ್ನ ಜಾಸ್ತಿ ಮಾಡಿದೆ. ರಾಜ್ಯ ಸರ್ಕಾರ ಈಗ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನ ಬರೋಬ್ಬರಿ 20 ರೂ. ಏರಿಕೆ ಮಾಡಿದ್ದು , ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ಮಾರ್ಗದಲ್ಲಿ ಓಡಾಡುವ ಕೆಎಸ್ ಆರ್‌ಟಿಸಿ ಬಸ್ ದರವನ್ನ ಹೆಚ್ಚು ಮಾಡಿದೆ. ಇದರಿಂದ ಮೈಸೂರು ದಸರಾ ನೋಡಲು ಹೋಗುವ ಪ್ರಯಾಣಿಕರಿಗೆ ಸಮಸ್ಯೆ ಆಗಲಿದೆ. ಕೆಂಪು ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ. ಆದರೆ ಪುರುಷ ಪ್ರಯಾಣಿಕರಿಗೆ ಈ ಬೆಲೆ ಏರಿಕೆ ಬಿಸಿ ತಾಗಲಿದೆ. ಇದರಿಂದಾಗಿ ಮೈಸೂರಿಗೆ ಬಸ್ ಮೂಲಕ ಹೋಗುವ ಪ್ರಯಾಣಿಕರ ಸಂಖ್ಯೆ ಸಹ ಕಡಿಮೆ ಆಗುವ ಸಾಧ್ಯತೆ ಇದೆ. ಕೆಎಸ್‌ಆರ್‌ಟಿಸಿಯ ರಾಜಹಂಸ, ವೇಗದೂತ, ಎಕ್ಸ್‌ಪ್ರೆಸ್, ಐರಾವತ ಸೇರಿದಂತೆ ಎಲ್ಲಾ ಬಸ್‌ಗಳ ಬೆಲೆ ಏರಿಕೆಯನ್ನ ಮಾಡಲಾಗಿದ್ದು, ದಸರಾ ಮುಗಿಯುವ ತನಕ ಇದೇ ಬೆಲೆ ಇರಲಿದೆ.
ಬೆಲೆ ಏರಿಕೆ ಎಷ್ಟಾಗಿದೆ?
ಐರಾವತ ಕ್ಲಬ್ ಕ್ಲಾಸ್ ಬಸ್‌ಗೆ 440 ರೂ ಇದ್ದ ದರ 460 ರೂಗೆ ಏರಿಕೆ ಆಗಿದೆ. ಹಾಗೆಯೇ, ತಡೆ ರಹಿತ ಸಾರಿಗೆ – 210 ರಿಂದ 240 ರೂ. ಐರಾವತ – 430 ರಿಂದ 450 ರೂ. ಕರ್ನಾಟಕ ಸಾರಿಗೆ ವೇಗದೂತ – 170 ರೂ. ನಿಂದ 190 ರೂ.ಗೆ ಮತ್ತು ರಾಜಾಹಂಸ – 270 ರಿಂದ 290 ರೂ ಏರಿಕೆ ಆಗಿದೆ.
ದಸರಾ ನಿಮಿತ್ತ 2,300 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ್ದ ಸರ್ಕಾರ
ದಸರಾ ಹಿನ್ನೆಯಲ್ಲಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸುಮಾರು 2,300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು. ಸೆಪ್ಟೆಂಬರ್ 26,27 ಮತ್ತು 30 ರಂದು ರಾಜಧಾನಿ ಬೆಂಗಳೂರಿನಿಂದ ರಾಜ್ಯ & ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2300ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಆರಂಭ ಮಾಡಿದೆ.
ಬೆಂಗಳೂರಿನಿಂದ ಮೈಸೂರಿಗೆ 260 ಹೆಚ್ಚುವರಿ ಬಸ್ ಗಳು ತೆರಳಲಿದ್ದು, ಮೈಸೂರಿನ ಸುತ್ತಮುತ್ತಪ್ರವಾಸಿ ತಾಣಗಳಿಗೆ ಹೆಚ್ಚುವರಿ 350 ಬಸ್ ಗಳ ವ್ಯವಸ್ಥೆ ಇರಲಿದೆ. ಹೀಗಾಗಿ ಒಟ್ಟಾರೆ 610 ದಸರಾ ವಿಶೇಷ ವಾಹನಗಳನ್ನು ರಸ್ತೆಗಿಳಿದಿದೆ. ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ, ಎಂಬ ಹೆಸರುಗಳಲ್ಲಿ ವಿಶೇಷ ವಾಹನಗಳು ಸಂಚರಿಸುತ್ತಿದ್ದು, ಮೈಸೂರು- ಚಾಮರಾಜನಗರ- ಮಂಡ್ಯದ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ.
ಇದರ ಜೊತೆಗೆ ಪ್ರಯಾಣಿಕರಿಗೆ ಮಾಹಿತಿ ಕೇಂದ್ರ ಸೇರಿದಂತೆ ಹತ್ತು ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿ ಮತ್ತು ಇ-ಟಿಕೇಟ್ ಬುಕಿಂಗ್ ಗಾಗಿ www.ksrtc.karnataka.gov.in ವೆಬ್ ಸೈಟ್ ನಲ್ಲಿ ಪರಿಶೀಲಿಸಬೇಕಾಗಿ ಸಾರಿಗೆ ಇಲಾಖೆ ತಿಳಿಸಿದೆ.