ಬೆಳಗಾವಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.
ಇಲ್ಲಿನ ಮಾಲಿನಿ ಸಿಟಿಯಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಸೂಕ್ತ ದರಕ್ಕಾಗಿ ದೊಡ್ಡ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. 30ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಎಫ್‌ಆರ್‌ಪಿ (FRP) ದರ ಘೋಷಿಸಿದ್ದು ನಿಜ. ಆದರೆ, ಅದಕ್ಕೂ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ’ ಎಂದರು.
‘ಕರ್ನಾಟಕ ಅತೀ ಹೆಚ್ಚು ಕಬ್ಬು ಬೆಳೆಯುವ ರಾಜ್ಯ. ಇದರಿಂದ ಸರ್ಕಾರಕ್ಕೆ ₹40 ಸಾವಿರ ಕೋಟಿ ಆದಾಯ ಬರುತ್ತದೆ. ಆದರೆ, ಪ್ರತಿ ಟನ್‌ಗೆ ಕೇವಲ ₹50 ಪರಿಹಾರ ಘೋಷಿಸಿದ್ದಾರೆ. 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೂ ಖರೀದಿ ಕೇಂದ್ರ ತೆರೆದಿಲ್ಲ. ಶೀತಲೀಕರಣ ಘಟಕ (Cold Storage) ತೆರೆದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 6.5 ಲಕ್ಷ ಟನ್ ತೊಗರಿ ಬೆಳೆದಿದ್ದಾರೆ. ಅಡಕೆಗೆ ಚುಕ್ಕೆ ರೋಗ ಬಂದಿದೆ. ಇದೆಲ್ಲವನ್ನೂ ಸರ್ಕಾರ ಗಮನಿಸುತ್ತಲೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜನ ಹೊಡೆಯುತ್ತಾರೆ ಎಂಬ ಭಯಕ್ಕೆ ಮುಖ್ಯಮಂತ್ರಿ, ಸಚಿವರು ಈಗ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೇ ರೈತ ಹೋರಾಟ ನಡೆದರೂ ಯಡಿಯೂರಪ್ಪ ಹೋಗುತ್ತಿದ್ದರು. ಹಗಲು-ರಾತ್ರಿ ರೈತಪರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಅದೇ ದಾರಿಯಲ್ಲಿ ಬಿಜೆಪಿ ನಡೆಯುತ್ತಿದೆ’ ಎಂದರು.
ಸರ್ಕಾರ ಸತ್ತು ಹೋಗಿದೆ: ವಿಪಕ್ಷ ನಾಯಕ ಆರ್. ಅಶೋಕ
ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ‘ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇಲ್ಲ. ಸರ್ಕಾರ ಸತ್ತು ಹೋಗಿದೆ. ಯಡಿಯೂರಪ್ಪ ಅವರು ಜಾರಿಗೆ ತಂದ ಯೋಜನೆಗಳನ್ನು ಕಡಿತ ಮಾಡಿದರು. ಕಿಸಾನ್ ಸಮ್ಮಾನ್ ಜತೆಗೆ ನೀಡುತ್ತಿದ್ದ ₹4,000, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲವನ್ನು ಬಂದ್ ಮಾಡಿದರು. ಕೇವಲ ಗ್ಯಾರಂಟಿಯ ನೆಪ ಮಾತ್ರ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.
ಸುಳ್ಳು ಮಾಹಿತಿ ನೀಡುತ್ತಿದೆ: ಎ.ಎಸ್. ಪಾಟೀಲ ನಡಹಳ್ಳಿ
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ‘ಅತಿವೃಷ್ಟಿಯಿಂದ ರಾಜ್ಯದಲ್ಲಿ 38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ, 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಮಳೆಯಿಂದ ಮನೆ ಹಾನಿಯಾದರೆ ಯಡಿಯೂರಪ್ಪ ಸರ್ಕಾರ ₹5 ಲಕ್ಷ ಪರಿಹಾರ ಕೊಡುತ್ತಿತ್ತು. ಸಿದ್ದರಾಮಯ್ಯ ಅದನ್ನು ₹95 ಸಾವಿರಕ್ಕೆ ಇಳಿಸಿದ್ದಾರೆ’ ಎಂದು ಕಿಡಿ ಕಾರಿದರು.
ಈ ಸಮಾವೇಶದಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಸಿದ್ದು ಸವದಿ, ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮುಖಂಡ ಸಂಜಯ ಪಾಟೀಲ, ಮುರುಘೇಂದ್ರಗೌಡ ಪಾಟೀಲ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.
