ಕರಾವಳಿ_ಟೈಗರ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟವನ್ನು ನಿರ್ವಹಿಸುತ್ತಿದ್ದ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸರು ದಕ್ಷಿಣ ಕನ್ನಡ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ಮಲವಂತಿಗೆಯ 22 ವರ್ಷದ ಮೊಹಮ್ಮದ್ ಕೈಫ್ ಬಂಧಿತ ಆರೋಪಿ.
Karavali_tigers ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಪೋಸ್ಟ್ ಆದ ಪ್ರಚೋದನಕಾರಿ ಸಂದೇಶಗಳ ಆಧಾರದ ಮೇಲೆ ಜುಲೈ 19 ರಂದು ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ಶುಕ್ರವಾರ ತಿಳಿಸಿದ್ದಾರೆ.
ಐಟಿ ಕಾಯ್ದೆಯ ಸೆಕ್ಷನ್ 66(ಸಿ) ಮತ್ತು ಬಿಎನ್‌ಎಸ್‌ನ ಸೆಕ್ಷನ್ 56, 353 (1), 192 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ತಾಂತ್ರಿಕ ಪುರಾವೆಗಳು ಸದರಿ ಜಾಲತಾಣ ಖಾತೆ ಮೂಲಕ ಪ್ರಚೋದನಕಾರಿ ವಿಷಯವನ್ನು ಹರಡುತ್ತಿದ್ದ ಆರೋಪಿಯನ್ನು ಗುರುತಿಸಲು ಕಾರಣವಾಯಿತು. ಮಾಹಿತಿಯಂತೆ ಆರೋಪಿಯು ತಮಿಳುನಾಡಿನಲ್ಲಿದ್ದಾನೆ ಎಂದು ತಿಳಿದ ಹಿನ್ನೆಲೆಯಲ್ಲಿ ಪೊಲೀಸರ ತಂಡ ತಮಿಳುನಾಡಿಗೆ ತೆರಳಿ, ಔಪಚಾರಿಕವಾಗಿ ಆತನನ್ನು ಬಂಧಿಸಿದೆ.
ಆ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇಲೆ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದರ ಜೊತೆಗೆ, ಸದರಿ ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದರ ಅಡಿಯಲ್ಲೂ ಹೆಚ್ಚಿನ ತನಿಖೆ ಮುಂದುವರೆದಿದೆ.
ಬಂಧಿತ ವ್ಯಕ್ತಿ ನಿಯಮಿತವಾಗಿ ಐಡಿ ಬದಲಾಯಿಸುತ್ತಿದ್ದರಿಂದ ಮತ್ತು ಮಧ್ಯವರ್ತಿಗಳಿಂದ ಮಾಹಿತಿ ಹಂಚಿಕೊಳ್ಳುವಲ್ಲಿ ವಿಳಂಬವಾಗುತ್ತಿದ್ದರಿಂದ ಆತನನ್ನು ಗುರುತಿಸಲು ಸಿಇಎನ್ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದರು.