ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಗ್ರಾಮೀಣ, ನಗರ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ದುರಸ್ತಿ ಮಾಡಲು ಮತ್ತು ಮೇಲ್ದರ್ಜೆಗೇರಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ರಸ್ತೆಗಳು ಹದಗೆಟ್ಟಿರುವುದರಿಂದ ಅಪಘಾತಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 702 ಅಪಘಾತಗಳು ಸಂಭವಿಸಿದ್ದು, ಸೆಪ್ಟೆಂಬರ್ ಆರಂಭದ ವೇಳೆಗೆ 122 ಸಾವುಗಳು ಮತ್ತು 815 ಗಾಯಗಳಾಗಿವೆ. ಈ ಪೈಕಿ 63 ಬಲಿಪಶುಗಳು ದ್ವಿಚಕ್ರ ವಾಹನ ಸವಾರರು ಮತ್ತು 44 ಮಂದಿ ಪಾದಚಾರಿಗಳು ಎಂದು ತೋರಿಸುವ ಅಧಿಕೃತ ದತ್ತಾಂಶವನ್ನು ಡಾ. ಮಂಜುನಾಥ್ ಭಂಡಾರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಸಾವಿನ ಸಂಖ್ಯೆಯಲ್ಲಿನ ಆತಂಕಕಾರಿ ಏರಿಕೆಯು ಹೆದ್ದಾರಿಗಳು ಮತ್ತು ಸೇವಾ ರಸ್ತೆಗಳ ಕಳಪೆ ಸ್ಥಿತಿಗೆ ನೇರವಾಗಿ ಸಂಬಂಧಿಸಿದೆ. ವಿಶೇಷವಾಗಿ ದಶಕಗಳಿಂದ ಅಗಲೀಕರಣ ಅಥವಾ ನವೀಕರಣಗೊಳ್ಳದ ರಸ್ತೆಗಳು ಕಾರಣವೇ ಈ ಅಪಘಾತಗಳಿಗೆ ಕಾರಣ” ಎಂದು ಡಾ.ಮಂಜುನಾಥ ಭಂಡಾರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಿಂದ ಶಿವಮೊಗ್ಗದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 52 ರ ಸ್ಥಿತಿಯನ್ನು ಅವರು ಎತ್ತಿ ತೋರಿಸಿದ್ದಾರೆ. ವಾಹನ ದಟ್ಟಣೆಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದ್ದರೂ 93 ಕಿ.ಮೀ. ಉದ್ದದ ಈ ಹೆದ್ದಾರಿ 40 ವರ್ಷಗಳಿಗೂ ಹೆಚ್ಚು ಕಾಲ ಕಿರಿದಾಗಿಯೇ ಕೂಡಿದೆ ಎಂದು ಅವರು ಹೇಳಿದ್ದಾರೆ.
“ರಸ್ತೆ ಅತ್ಯಂತ ಅಸುರಕ್ಷಿತವಾಗಿದೆ. 1960 ರಲ್ಲಿ ವಾರಾಹಿ ನದಿಗೆ ನಿರ್ಮಿಸಲಾದ ಕಾಂಡ್ಲೂರ್ ಸೇತುವೆ ಕುಸಿಯುವ ಅಂಚಿನಲ್ಲಿದೆ ಮತ್ತು ತುರ್ತು ಪುನರ್ನಿರ್ಮಾಣದ ಅಗತ್ಯವಿದೆ” ಎಂದು ಡಾ. ಭಂಡಾರಿ ಹೇಳಿದರು.
ಶಿರಾಡಿ, ಆಗುಂಬೆ, ಚಾರ್ಮಾಡಿ, ಸಂಪಾಜೆ ಮತ್ತು ನಾಗೋಡಿ ಘಾಟ್‌ಗಳಲ್ಲಿ ಸಂಚಾರಕ್ಕೆ ನಿರಂತರವಾಗಿ ಇರುವ ಅಡಚಣೆಗಳ ಬಗ್ಗೆಯೂ ಅವರು ಗಮನ ಸೆಳೆದರು, ಸುರಂಗ ರಸ್ತೆಗಳನ್ನು ದೀರ್ಘಾವಧಿಯ ಪರಿಹಾರವಾಗಿ ಪರಿಗಣಿಸಬಹುದು ಎಂದು ಸೂಚಿಸಿದರು.
“ಸಾವಿರಾರು ಪ್ರಯಾಣಿಕರ ಸುರಕ್ಷತೆಯು ಸರ್ಕಾರದ ತುರ್ತು ಕ್ರಮವನ್ನು ಅವಲಂಬಿಸಿದೆ. ದುರಸ್ತಿ ಮತ್ತು ನವೀಕರಣ ಕಾರ್ಯಗಳನ್ನು ತಕ್ಷಣ ಪ್ರಾರಂಭಿಸಲು ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಮತ್ತು ಸಮಗ್ರ ಸುಧಾರಣೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಡಾ. ಮಂಜುನಾಥ್ ಭಂಡಾರಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.