ಸುಪ್ರೀಂಕೋರ್ಟ್ ಪ್ರಧಾನ ನ್ಯಾಯಮೂರ್ತಿಗಳ (CJI) ಕಾಕ್ರೋಚ್ (ಜಿರಳೆ) ವ್ಯಾಖ್ಯಾನವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಹುಟ್ಟುಹಾಕಲಾಗಿರುವ ಹೊಸ ರಾಜಕೀಯ ಪಕ್ಷವೊಂದು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಕೇವಲ 96 ಗಂಟೆಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 55 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಈ ಪಕ್ಷ ಇಂಟರ್ನೆಟ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಈ ವಿಭಿನ್ನ ಆನ್‌ಲೈನ್ ಪಕ್ಷದ ಹೆಸರೇ ‘ಕಾಕ್ರೋಚ್ ಜನತಾ ಪಾರ್ಟಿ’ (CJP – ಜಿರೆಳೆ ಜನತಾ ಪಕ್ಷ).
ಏನಿದು ಪಕ್ಷ? ಸಂಸ್ಥಾಪಕರು ಯಾರು?
ಅಮೆರಿಕದ ಬೋಸ್ಟನ್ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ರಿಲೇಶನ್ಸ್‌ನಲ್ಲಿ ಮಾಸ್ಟರ್ಸ್ ಮಾಡುತ್ತಿರುವ 30 ವರ್ಷದ ಭಾರತೀಯ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಎಂಬುವವರು ಮೇ ೧೬ ರಂದು ಈ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಸ್ಥಾಪಿಸಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಕ್ಯಾನ್ವಾ ಡಿಸೈನ್‌ಗಳ ಸಹಾಯದಿಂದ ರಾತ್ರೋರಾತ್ರಿ ಈ ಆನ್‌ಲೈನ್ ಪಕ್ಷವನ್ನು ಸಿದ್ಧಪಡಿಸಲಾಗಿದೆ. “ಸೆಕ್ಯುಲರ್, ಸೋಶಿಯಲಿಸ್ಟ್, ಡೆಮೋಕ್ರಟಿಕ್ ಮತ್ತು ಲೇಜಿ (ಸೋಮರಿತನ)” ಎಂಬುದು ಈ ಪಕ್ಷದ ಪ್ರಮುಖ ಘೋಷಣೆಯಾಗಿದೆ. ದೇಶದ ನಿರುದ್ಯೋಗಿ ಯುವಜನತೆಯ ಆಕ್ರೋಶವನ್ನು ಧ್ವನಿಸುವುದು ಹಾಗೂ ಸಾರ್ವಜನಿಕರ ತೆರಿಗೆ ಹಣ ಎಲ್ಲೆಲ್ಲಿ ಲೂಟಿಯಾಗುತ್ತಿದೆ ಎಂದು ವ್ಯವಸ್ಥೆಯನ್ನು ಪ್ರಶ್ನಿಸುವುದೇ ಈ ಪಕ್ಷದ ಮೂಲ ಉದ್ದೇಶವಾಗಿದೆ. ಈ ಪಕ್ಷಕ್ಕೆ ತನ್ನದೇ ಆದ ಪ್ರತ್ಯೇಕ ವೆಬ್‌ಸೈಟ್ ಮತ್ತು 5 ಸೂತ್ರಗಳ ಪ್ರಣಾಳಿಕೆ (ಮ್ಯಾನಿಫೆಸ್ಟೋ) ಕೂಡ ಇದೆ.
ಪಕ್ಷದ ಉದಯಕ್ಕೆ ಕಾರಣವೇನು?
ಇತ್ತೀಚೆಗೆ ಸುಪ್ರೀಂಕೋೋರ್ಟ್ ಪ್ರಧಾನ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಈ ಪಕ್ಷ ಅಸ್ತಿತ್ವಕ್ಕೆ ಬಂದಿದೆ. “ದೇಶದ ನಿರುದ್ಯೋಗಿಗಳು ಸೋಮರಿಗಳಂತೆ, ಜಿರಳೆಗಳಂತೆ ಹಾಗೂ ಪರಾವಲಂಬಿಗಳಂತೆ (ಪ್ಯಾರಾಸೈಟ್ಸ್) ತಯಾರಾಗುತ್ತಿದ್ದಾರೆ. ಇವರು ಜರ್ನಲಿಸ್ಟ್‌ಗಳು, ವಕೀಲರು ಮತ್ತು ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಸಿಜೆಐ ಹೇಳಿದ್ದರು. ತಮ್ಮ ವ್ಯಾಖ್ಯಾನವನ್ನು ಮಾಧ್ಯಮಗಳು ವಕ್ರೀಕರಿಸಿವೆ ಎಂದು ಸಿಜೆಐ ಸ್ಪಷ್ಟನೆ ನೀಡಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೇ ವ್ಯಂಗ್ಯವಾಗಿ ಪ್ರತಿಭಟಿಸಲು ಅಭಿಜೀತ್ ಈ ಪಕ್ಷವನ್ನು ಸ್ಥಾಪಿಸಿದ್ದಾರೆ.
ಪಕ್ಷ ಸೇರಲು ಇರುವ ವಿಚಿತ್ರ ಅರ್ಹತೆಗಳು:
ಸಿಜೆಪಿ ಪಕ್ಷದ ಸದಸ್ಯರಾಗಲು ಕೆಲವು ವಿಲಕ್ಷಣ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ:
- ಉದ್ಯೋಗ ಇಲ್ಲದಿರುವುದು (ನಿರುದ್ಯೋಗಿ ಆಗಿರಬೇಕು).
- ಸೋಮಾರಿತನ ಹೊಂದಿರಬೇಕು (ಕೇವಲ ದೈಹಿಕವಾಗಿ ಮಾತ್ರ, ಮಾನಸಿಕವಾಗಿ ಅಲ್ಲ).
- ದಿನದಲ್ಲಿ ಕನಿಷ್ಠ 11 ಗಂಟೆಗಳ ಕಾಲ ಆನ್‌ಲೈನ್ ಅಥವಾ ಸೋಶಿಯಲ್ ಮೀಡಿಯಾಕ್ಕೆ ಅಂಟಿಕೊಂಡಿರಬೇಕು.
- ಪ್ರಸ್ತುತ ವ್ಯವಸ್ಥೆಯ ಮೇಲಿರುವ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಅದ್ಭುತವಾಗಿ ಹೊರಹಾಕುವ ಕೌಶಲ್ಯ ಹೊಂದಿರಬೇಕು.
ಸಂಚಲನ ಮೂಡಿಸಿದ ೫ ಸೂತ್ರಗಳ ಪ್ರಣಾಳಿಕೆ:
ತಾವು ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಪ್ರಮುಖ ಅಂಶಗಳನ್ನು ಪಕ್ಷ ಪ್ರಕಟಿಸಿದೆ:
- ಅಧಿಕಾರ ಅವಧಿ ಮುಗಿಸಿ ನಿವೃತ್ತರಾಗುವ ಯಾವುದೇ ಸುಪ್ರೀಂಕೋೋರ್ಟ್ ಪ್ರಧಾನ ನ್ಯಾಯಮೂರ್ತಿಗಳಿಗೂ ರಾಜ್ಯಸಭಾ ಸದಸ್ಯತ್ವದ ಉಡುಗೊರೆಯನ್ನು ನೀಡುವುದಿಲ್ಲ.
- ದೇಶದ ಅರ್ಹ ಮತದಾರರೊಬ್ಬರು ತಾಂತ್ರಿಕ ಕಾರಣದಿಂದ ಮತದಾನದ ಹಕ್ಕನ್ನು ಕಳೆದುಕೊಂಡರೆ, ಅದಕ್ಕೆ ನೇರ ಹೊಣೆಯಾಗಿಸಿ ಮುಖ್ಯ ಚುನಾವಣಾ ಆಯುಕ್ತರನ್ನು (CEC) ಕಠಿಣ ಯುಎಪಿಎ (UAPA) ಕಾಯ್ದೆಯಡಿ ಬಂಧಿಸಿ ತನಿಖೆ ನಡೆಸಲಾಗುವುದು.
- ಪಾರ್ಲಿಮೆಂಟ್ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸದೆಯೇ, ಶೇಕಡಾ 50ರಷ್ಟು ಸೀಟುಗಳನ್ನು ಹಾಗೂ ಕೇಂದ್ರ ಸಚಿವ ಸಂಪುಟದ ಅರ್ಧದಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಕಡ್ಡಾಯವಾಗಿ ಮೀಸಲಿಡಲಾಗುವುದು.
- ಅದಾನಿ ಮತ್ತು ಅಂಬಾನಿ ಸಮೂಹಕ್ಕೆ ಸೇರಿದ ಎಲ್ಲಾ ಮಾಧ್ಯಮ ಸಂಸ್ಥೆಗಳ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗುವುದು. ‘ಗೋದಿ ಮೀಡಿಯಾ’ದ ಆಂಕರ್‌ಗಳ ಬ್ಯಾಂಕ್ ಖಾತೆಗಳ ತನಿಖೆ ನಡೆಸಿ, ದೇಶದಲ್ಲಿ ನಿಜವಾದ ಸ್ವತಂತ್ರ ಮಾಧ್ಯಮಗಳು ಕಾರ್ಯನಿರ್ವಹಿಸಲು ದಾರಿ ಮಾಡಿಕೊಡಲಾಗುವುದು.
- ಪಕ್ಷಾಂತರ ಮಾಡುವ ಯಾವುದೇ ಸಂಸದ ಅಥವಾ ಶಾಸಕರು ಮುಂದಿನ ೨೦ ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗುವುದು.
ಪ್ರಮುಖ ರಾಜಕಾರಣಿಗಳ ಪ್ರತಿಕ್ರಿಯೆ:
ಈ ವ್ಯಂಗ್ಯ ಪಕ್ಷದ ಕುರಿತು ದೇಶದ ಪ್ರಮುಖ ರಾಜಕಾರಣಿಗಳು ಕೂಡ ರಸವತ್ತಾಗಿ ಪ್ರತಿಕ್ರಿಯಿಸಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು, “ನನ್ನ ಮೇಲೆ ಆಂಟಿ-ನ್ಯಾಷನಲ್ ಎಂಬ ಮುದ್ರೆ ಇದೆ, ನಾನು ನಿಮ್ಮ ಪಕ್ಷ ಸೇರಬಹುದೇ?” ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಸಿಜೆಪಿ ಪಕ್ಷವು, “ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ನಿಮಗೆ ನಮ್ಮ ಪಕ್ಷಕ್ಕೆ ಆತ್ಮೀಯ ಸ್ವಾಗತ” ಎಂದು ಉತ್ತರಿಸಿದೆ. ಟಿಎಂಸಿಯ ಮತ್ತೊಬ್ಬ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ಪಕ್ಷದ ಅರ್ಹತೆ ಬಗ್ಗೆ ಕೇಳಿದಾಗ, “1983 ರ ವಿಶ್ವಕಪ್ ಗೆದ್ದಿರುವುದಕ್ಕಿಂತ ದೊಡ್ಡ ಅರ್ಹತೆ ಬೇರೇನಿದೆ?” ಎಂದು ಸಿಜೆಪಿ ಹೇಳಿದೆ. ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು, ಈ ಪಕ್ಷ ಆರ್‌ಟಿಐ ವ್ಯಾಪ್ತಿಗೆ ಒಳಪಡಬೇಕು ಮತ್ತು ಯಾವುದೇ ರಹಸ್ಯ ‘ಕಾಕ್ರೋಚ್ ಕೇರ್ಸ್ ಫಂಡ್’ ಮೂಲಕ ದೇಣಿಗೆ ಪಡೆಯಬಾರದು ಎಂದು ಸಲಹೆ ನೀಡಿದ್ದು, ಅದನ್ನು ಪಕ್ಷ ತನ್ನ ಪ್ರಣಾಳಿಕೆಗೆ ಸೇರಿಸಿಕೊಂಡಿದೆ.
ಈಗಾಗಲೇ ಕಣಕ್ಕಿಳಿದ ಕಾರ್ಯಕರ್ತರು!
ದೆಹಲಿಯಲ್ಲಿ ಕಸದಿಂದ ಕಲುಷಿತಗೊಂಡಿರುವ ಯಮುನಾ ನದಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಇತ್ತೀಚೆಗೆ ಕೆಲವು ಯುವಕರು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆ ಯುವಕರು ಧರಿಸಿದ್ದ ಟಿ-ಶರ್ಟ್‌ಗಳ ಮೇಲೆ ಜಿರಳೆ ಗುರುತಿನ ಪೋಸ್ಟರ್‌ಗಳಿದ್ದವು. ಇದನ್ನು ನೋಡಿದ ನೆಟ್ಟಿಗರು, ಸಿಜೆಪಿ ಪಕ್ಷದ ಕಾರ್ಯಕರ್ತರು ಆಗಲೇ ಮೈದಾನಕ್ಕಿಳಿದು ಕೆಲಸ ಆರಂಭಿಸಿದ್ದಾರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.
ಸ್ಪರ್ಧೆಗೆ ಇಳಿದ ಮತ್ತೊಂದು ಪಕ್ಷ – ಎನ್‌ಪಿಎಫ್ (NPF):
ಕಾಕ್ರೋಚ್ ಪಾರ್ಟಿಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ಈಗ ‘ನ್ಯಾಷನಲ್ ಪ್ಯಾರಾಸೈಟಿಕ್ ಫ್ರಂಟ್’ (NPF – ರಾಷ್ಟ್ರೀಯ ಪರಾವಲಂಬಿ ಒಕ್ಕೂಟ) ಎಂಬ ಮತ್ತೊಂದು ವ್ಯಂಗ್ಯ ಪಕ್ಷ ಎಂಟ್ರಿ ಕೊಟ್ಟಿದೆ. “ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ನಾವು ಈ ಮುರಿದುಬಿದ್ದಿರುವ ವ್ಯವಸ್ಥೆಗೇ ಅಂಟಿಕೊಳ್ಳುತ್ತೇವೆ” ಎಂದು ಎನ್‌ಪಿಎಫ್ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಪಾರ್ಲಿಮೆಂಟ್‌ನಲ್ಲಿ ಅಪರಾಧಿಗಳು ಇರಬಾರದು, ವಿದ್ಯಾವಂತ ಪ್ರತಿನಿಧಿಗಳು ಬರಬೇಕು ಮತ್ತು ಸಣ್ಣ ಮಳೆಗೆ ರಸ್ತೆಗಳು ನದಿಯಾಗಬಾರದು ಎಂಬುದು ಈ ಪಕ್ಷದ ಪ್ರಮುಖ ಬೇಡಿಕೆಗಳಾಗಿವೆ.
ದೇಶದಲ್ಲಿ ಜಿಇಎನ್-ಜಡ್ (Gen-Z) ಕ್ರಾಂತಿ!
ಇವುಗಳು ಚುನಾವಣಾ ಆಯೋಗದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಲ್ಲದಿದ್ದರೂ, ದೇಶದ ನಿರುದ್ಯೋಗಿ ಯುವಜನತೆಯ ಮನಸ್ಸಿನಲ್ಲಿರುವ ಆಕ್ರೋಶ ಮತ್ತು ವ್ಯವಸ್ಥೆಯ ಮೇಲಿರುವ ತೀವ್ರ ಅಸಮಾಧಾನವನ್ನು ಹೊರಹಾಕಲು ಡಿಜಿಟಲ್ ವೇದಿಕೆಯನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಳ್ಳುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಎರಡೂ ಆನ್‌ಲೈನ್ ಪಕ್ಷಗಳಿಗೆ ಹರಿದುಬರುತ್ತಿರುವ ಯುವಜನರ ಬೆಂಬಲವನ್ನು ನೋಡುತ್ತಿದ್ದರೆ, ಭಾರತದಲ್ಲಿ ಹೊಸ ಮಾದರಿಯ ‘ಜೆನ್-ಜಡ್’ (Gen-Z) ಯುವ ಚಳವಳಿಯೊಂದು ಆರಂಭವಾಗಿದೆಯೇ ಎಂಬ ಚರ್ಚೆಗಳು ನೆಟ್ಟಿಗರ ವಲಯದಲ್ಲಿ ಮುನ್ನೆಲೆಗೆ ಬಂದಿವೆ.
