Home ಅಪರಾಧ ಅಕ್ರಮ ಮಸೀದಿ ತೆರವು ವೇಳೆ ರಣರಂಗವಾದ ಮುಂಬೈ ಬಾಂದ್ರಾ: ಪೊಲೀಸರ ಮೇಲೆ ಭಾರಿ ಕಲ್ಲು ತೂರಾಟ,...

ಅಕ್ರಮ ಮಸೀದಿ ತೆರವು ವೇಳೆ ರಣರಂಗವಾದ ಮುಂಬೈ ಬಾಂದ್ರಾ: ಪೊಲೀಸರ ಮೇಲೆ ಭಾರಿ ಕಲ್ಲು ತೂರಾಟ, ಲಾಠಿಚಾರ್ಜ್!

0

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ತೀವ್ರ ಘರ್ಷಣೆ ಮತ್ತು ಹಿಂಸಾಚಾರ ಉಂಟಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಲ್ಲಿನ ಅಕ್ರಮ ಮಸೀದಿಯೊಂದನ್ನು ನೆಲಸಮಗೊಳಿಸಲು ಅಧಿಕಾರಿಗಳು ಮುಂದಾದಾಗ ಆಕ್ರೋಶಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ.

ಬಾಂದ್ರಾ ರೈಲ್ವೆ ನಿಲ್ದಾಣದ ಸಮೀಪವಿರುವ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳನ್ನು ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಮಂಗಳವಾರದಿಂದಲೇ ತೆರವುಗೊಳಿಸಲು ಅಧಿಕಾರಿಗಳು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಬುಧವಾರ ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರನ್ನು ಗುರಿಯಾಗಿಸಿಕೊಂಡು ಕಲ್ಲು ಎಸೆದಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ತಕ್ಷಣವೇ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ.

ಪೊಲೀಸರು ಕಲ್ಲು ತೂರಾಟ ನಡೆಸಿದ ಗುಂಪಿನ ಮೇಲೆ ಲಾಠಿಚಾರ್ಜ್ ನಡೆಸುವ ಮೂಲಕ ಅವರನ್ನು ಚದುರಿಸಿದ್ದಾರೆ. ಪ್ರತಿಭಟನಾಕಾರರು ಹಲವು ಬಾರಿ ಕಲ್ಲು ತೂರಾಟಕ್ಕೆ ಯತ್ನಿಸಿದಾಗಲೂ ಪೊಲೀಸರು ಯಶಸ್ವಿಯಾಗಿ ಅವರನ್ನು ನಿಯಂತ್ರಿಸಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಘಟನಾ ಸ್ಥಳದಲ್ಲಿ ಸುಮಾರು 1000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗಿದೆ. ಕಲ್ಲು ತೂರಾಟ ನಡೆಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಿಡಿಗೇಡಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಅಕ್ರಮ ನಿರ್ಮಾಣಗಳನ್ನು ಅಧಿಕಾರಿಗಳು ಗುರುತಿಸಿದ್ದು, ಈ ತೆರವು ಕಾರ್ಯಾಚರಣೆಯು ಒಟ್ಟು ಐದು ದಿನಗಳ ಕಾಲ ಸಾಗಲಿದೆ. ಈ ಮೂಲಕ ಸುಮಾರು 5300 ಚದರ ಮೀಟರ್‌ಗಳಷ್ಟು ರೈಲ್ವೆ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗುತ್ತಿದ್ದು, ಈ ಜಾಗದಲ್ಲಿ ರೈಲ್ವೆ ಇಲಾಖೆಗೆ ಸೇರಿದ ಬೃಹತ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

You cannot copy content of this page

Exit mobile version