Home ವಿದೇಶ ಕದನ ವಿರಾಮ ಒಪ್ಪಂದ ಮಣ್ಣುಪಾಲು: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ, 19...

ಕದನ ವಿರಾಮ ಒಪ್ಪಂದ ಮಣ್ಣುಪಾಲು: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ, 19 ಸಾವು

0

ಬೀರೂಟ್ అಮೆರಿಕದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವನ್ನು ಗಾಳಿಗೆ ತೂರಿರುವ ಇಸ್ರೇಲ್, ಲೆಬನಾನ್‌ನ ದಕ್ಷಿಣ ಭಾಗದ ಮೇಲೆ ಮತ್ತೊಮ್ಮೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಬುಧವಾರ ಸಾಯಂಕಾಲದವರೆಗಿನ ಕಳೆದ 24 ಗಂಟೆಗಳ ಅವಧಿಯಲ್ಲಿ ಇಸ್ರೇಲ್ ನಡೆಸಿದ ಸರಣಿ ಬಾಂಬ್ ದಾಳಿಗಳಿಗೆ ಕನಿಷ್ಠ 19 ಜನ ಬಲಿಯಾಗಿದ್ದು, ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಲೆಬನಾನ್ ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಕರಾವಳಿ ಪ್ರದೇಶವಾದ ಟೈರ್ ಪ್ರಾಂತ್ಯದ ‘ದೇವ್ ಖನೂನ್ ಅಲ್ ನಹರ್’ ಗ್ರಾಮದ ಮೇಲೆ ನಡೆದ ದಾಳಿಯಲ್ಲೇ 10 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಪೈಕಿ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಈ ಬಾಂಬ್ ದಾಳಿಗೆ ವಸತಿ ಗೃಹವೊಂದು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಹೊರತೆಗೆಯಲಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಲ್ಲದೆ ದಕ್ಷಿಣದ ಪ್ರಮುಖ ನಗರವಾದ ‘ನಬಾಟಿಯೆ’ ಮೇಲೆ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ೧೦ ಜನ ಗಾಯಗೊಂಡಿದ್ದಾರೆ. ಹಾಗೆಯೇ ‘ಕಫರ್ ಸಿರ್’ ಎಂಬ ಹಳ್ಳಿಯಲ್ಲಿ ನಡೆದ ಮೂರನೇ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಐದು ಜನ ಜೀವಂತವಾಗಿ ಸಮಾಧಿಯಾಗಿದ್ದಾರೆ. ಲೆಬನಾನ್ ಮೇಲಿನ ಈ ಸರಣಿ ದಾಳಿಗಳ ಕುರಿತು ಇಸ್ರೇಲ್ ಸೇನೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದರೂ ಸಹ ಇಸ್ರೇಲ್ ಮಾತ್ರ ಪ್ರತಿದಿನ ಲೆಬನಾನ್‌ನ ವಿವಿಧ ಭಾಗಗಳ ಮೇಲೆ ದಾಳಿ ಮುಂದುವರಿಸಿದೆ. ಈ ಭೀಕರ ಯುದ್ಧದ ಕಾರಣದಿಂದಾಗಿ ಇವತ್ತು ಲೆಬನಾನ್‌ನಲ್ಲಿ ಸುಮಾರು ೧೦ ಲಕ್ಷಕ್ಕೂ ಹೆಚ್ಚು ನಾಗರಿಕರು ನಿರಾಶ್ರಿತರಾಗಿ ಬೀದಿಪಾಲಾಗಿದ್ದಾರೆ. ವಸತಿ ಕಳೆದುಕೊಂಡಿರುವ ಸಾವಿರಾರು ಕುಟುಂಬಗಳು ರಸ್ತೆ ಬದಿಗಳಲ್ಲಿ ಹಾಗೂ ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಸಣ್ಣ ಸಣ್ಣ ಗುಡಾರಗಳನ್ನು (ಟೆಂಟ್‌ಗಳು) ಹಾಕಿಕೊಂಡು ಅತ್ಯಂತ ದಯನೀಯ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ.

You cannot copy content of this page

Exit mobile version