ಹವಾಮಾನ ವೈಪರೀತ್ಯ ನಡುವೆ ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡ ಸಂತೆ ಶಿವರ ಬಸವರಾಜು ಮಾದರಿ
ಹಾಸನ : ಹಾಸನ ಜಿಲ್ಲೆಯಲ್ಲಿ ಸುಮಾರು 40 ಲಕ್ಷ ತೆಂಗಿನ ಮರಗಳು ವಿವಿಧ ಬಗೆಯ ರೋಗಗಳಿಗೆ ತುತ್ತಾಗಿ, ತೆಂಗಿನ ಇಳುವರಿ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮವಾಗಿ ಸಾವಿರಾರು ತೆಂಗು ಬೆಳೆಗಾರರು ಗಂಭೀರ ಸಂಕಷ್ಟಕ್ಕೆ ಸಿಲುಕಿರುವುದು ಚರ್ಚೆಯಾಗಿದೆ. ರೈತರು ಸಂಕಷ್ಟದಲ್ಲಿ ಇರುವಾಗ ಹವಾಮಾನ ವೈಪರೀತ್ಯ ನಡುವೆ ನೃಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡ ಸಂತೆ ಶಿವರ ಬಸವರಾಜು ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೆಂಗಿನ ಮರಗಳು ವಿವಿಧ ಬಗೆಯ ರೋಗಗಳಿಗೆ ತುತ್ತಾಗಿ, ತೆಂಗಿನ ಇಳುವರಿ ತೀವ್ರವಾಗಿ ಕುಸಿದಿದೆ. ಈ ಬಗ್ಗೆ ದಿಶಾ ಸಭೆಯಲ್ಲಿ ಚರ್ಚೆಯ ಪ್ರಮುಖ ವಿಷಯವಾಯಿತು. ನವೆಂಬರ್ 17 ರಂದು ನಡೆದ ಈ ಸಭೆಯಲ್ಲಿ ಕೃಷಿ ವಿಜ್ಞಾನಿಗಳು ತುರ್ತು ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆ ನೀಡಿದ್ದು, ರೋಗ ನಿಯಂತ್ರಣಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ವ್ಯಕ್ತವಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದರಿಂದ, ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ತೆಂಗಿನ ಬೆಳೆಯಲ್ಲಿ ಕಂಡು ಬರುತ್ತಿರುವ ಇಳುವರಿ ಕುಸಿತಕ್ಕೆ ಇದೇ ಪ್ರಮುಖ ಕಾರಣವೆಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಇದಕ್ಕೆ ಪರಿಹಾರವಾಗಿ ಸಮಗ್ರ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಜೀವಚೈತನ್ಯ ಕೃಷಿ ಮೊದಲಾದ ವಿಧಾನಗಳನ್ನು ರೈತರು ಅಳವಡಿಸಿಕೊಳ್ಳುವುದು ಕಾಲದ ಅವಶ್ಯಕತೆಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ, ನವೀನ ಪ್ರಯೋಗಗಳೊಂದಿಗೆ ಯಶಸ್ಸಿನ ಮಾದರಿ ನಿರ್ಮಿಸಿರುವ ರೈತರೆಂದರೆ ಚನ್ನರಾಯಪಟ್ಟಣ ತಾಲೂಕು, ನುಗ್ಗೆಹಳ್ಳಿ ಹೋಬಳಿ, ಸಂತೆ ಶಿವರ ಗ್ರಾಮದ ಬಸವರಾಜು. ಐದು ದಶಕಗಳಿಗೂ ಹೆಚ್ಚು ಕಾಲ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರ ತೋಟ ಈಗ ರಾಜ್ಯದ ರೈತರಿಗೆ ಮಾದರಿಯಾಗಿದೆ.5.5 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ತೋಟದಲ್ಲಿ ೨೨೦ ತೆಂಗಿನ ಮರಗಳು, 960 ಅಡಿಕೆ ಮರಗಳು, ಮಧ್ಯೆ ಬಾಳೆ ಮುಖ್ಯ ಬೆಳೆ ಆಗಿದ್ದು, ಜೊತೆಗೆ ಕಾಳು ಮೆಣಸು ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಹವಾಮಾನ ವೈಪರೀತ್ಯ ನಡುವೆ ನೃಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡ ಸಂತೆ ಶಿವರ ಬಸವರಾಜು ಮಧ್ಯಮದೊಂದಿಗೆ ಮಾತನಾಡಿ, ಕಳೆದ 35 ವರ್ಷಗಳಿಂದ ಯಾವುದೇ ಉಳುಮೆ ಮಾಡದೇ ಇರುವ ಕೃಷಿ ವಿಧಾನ, 30 ವರ್ಷಗಳ ಹಿಂದೆ ನೆಟ್ಟ ಬಾಳೆಯಿಂದಲೇ ನಿರಂತರ ಉತ್ಪಾದನೆ, ಗೊಬ್ಬರ, ನೀರಿನ ಸಮತೋಲನಿತ ನಿರ್ವಹಣೆ, ರಾಸಾಯನಿಕ ಗೊಬ್ಬರದ ಬದಲು ಸಹಜ ವಿಧಾನಗಳ ಬಳಕೆ ತೋಟದಲ್ಲಿ ವರ್ಷಕ್ಕೆ ಸಿಗುವ ಉತ್ಪಾದನೆ ಬಗ್ಗೆ ಹೇಳಿದರು. ತೆಂಗಿನ ಮರಗಳಿಂದ 30,೦೦೦ ತೆಂಗು, 50-70 ಕ್ವಿಂಟಲ್ ಕೊಬ್ಬರಿ, 960 ಅಡಿಕೆ ಮರಗಳಿಂದ ಹೋದ ವರ್ಷ 11 ಟನ್ ಹಸಿ ಕಾಯಿ, ಈ ವರ್ಷ 13ಟನ್ ನಿರೀಕ್ಷೆಯಿದೆ. ಎಲ್ಲಕ್ಕೂ ಮಿಗಿಲಾಗಿ, ಇವರ ತೋಟದ ನಿರ್ವಹಣೆಗೆ ಬೇಕಾಗುವ ವೆಚ್ಚ ಅತ್ಯಲ್ಪ! ಸಹಜ ನೈಸರ್ಗಿಕ ಕೃಷಿಯ ಅನುಭವಗಳನ್ನು ರೈತರಿಗೆ ಹಂಚಿಕೊಳ್ಳುವ ಮೂಲಕ ಅವರು ಹಲವರಿಗೆ ಪ್ರೇರಣೆ ನೀಡಿದ್ದಾರೆ. ಈ ಯಶಸ್ವಿ ಮಾದರಿಗಳನ್ನು ಹಾಸನದ ರೈತರು ಅಳವಡಿಸಿಕೊಂಡರೆ, ತೆಂಗಿನ ರೋಗ, ಇಳುವರಿ ಸಮಸ್ಯೆಗಳಿಗೆ ಉತ್ತಮ ಪರ್ಯಾಯ ಪರಿಹಾರ ಸಾಧ್ಯವೆಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ, ಬಾಲರಾಜು, ಅಬ್ದೂಲ್ ನಯಾಜ್ ಇತರರು ಉಪಸ್ಥಿತರಿದ್ದರು.
