Wednesday, May 8, 2024

ಸತ್ಯ | ನ್ಯಾಯ |ಧರ್ಮ

ಮಣ್ಣಿನ ಜ್ವಾಲಾಮುಖಿಯೊಳಗಿನ ತಣ್ಣಗಿನ ಅಲೆಗಳು

ಅಂಡಮಾನ್ ದ್ವೀಪದ ಚರಿತ್ರೆಯನ್ನು ಓದಿಕೊಂಡು ಜೊತೆಗೆ ಮೌಖಿಕವಾಗಿ ಏನಾದರೂ ಲಭ್ಯವಿದೆಯೇ ಎನ್ನುವ ಆಲೋಚನೆಯೊಂದಿಗೆ ಅಲ್ಲಿನ ಟ್ಯಾಕ್ಸಿ ಚಾಲಕರನ್ನು, ಉಪಹಾರ ಗೃಹದ ಪರಿಚಾರಕರನ್ನು, ಅತಿಥಿ ಗೃಹದ ನೌಕರರನ್ನು ಮಾತಿಗೆಳೆದಾಗ ಒಂದಷ್ಟು ಮಾಹಿತಿ ಲಭಿಸಿತು. ಈ ಸಂಭಾಷಣೆಗಳು ಮೌಖಿಕ ಕಥಾನಕ. ಅಲ್ಲಿನ ಯುವಕ ಯುವತಿಯರಿಗೆ ಅವರ ತಂದೆ ತಾಯಿಯರು ಅಥವಾ ಅಜ್ಜ-ಅಜ್ಜಿಯರು ಅವರ ವಂಶಾವಳಿಯ ಬಗ್ಗೆ ಹೇಳಿದ ಕಥೆಗಳಿವು. ಈ ನೆಲೆಯ ಒಂದು ಎಳೆಯನ್ನು ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ – ರಾಜಲಕ್ಷ್ಮೀ ಎನ್‌ ಕೆ, ನಿವೃತ್ತ ಉಪನ್ಯಾಸಕರು.

ಮಂಗಳೂರಿನಿಂದ ಸರಿಸುಮಾರು 2140 ಕಿಲೋಮೀಟರ್ ದೂರವಿರುವ ಪೋರ್ಟ್ ಬ್ಲೇರ್  ನಲ್ಲಿ ನಾವು ಇದ್ದಷ್ಟು ಸಮಯವೂ ಸರಿ ಸುಮಾರು ಐದು ಮೂವತ್ತರ ಒಳಗೆ ಸೂರ್ಯೋದಯವಾಗುತ್ತಿತ್ತು. ಅಂತೆಯೇ ಸಂಜೆ ಐದು ಮೂವತ್ತರ ಒಳಗೆ ಕತ್ತಲಾಗುತ್ತಿತ್ತು. ಸಂಜೆ 7 ಗಂಟೆ ಆದರೂ ತುಸು ಬೆಳಕಿರುವ ಮಂಗಳೂರಿನಿಂದ ಹೋದ ನಮಗೆ ಸಂಜೆ ಬೇಗ ಕತ್ತಲಾಗುವುದನ್ನು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಸಂಜೆಯ ನಂತರ ತಿರುಗಾಡಿ ಅಲ್ಲಿನ ಒಂದಿಷ್ಟು  ಜನಜೀವನ ಪರಿಚಯ ಮಾಡಿಕೊಳ್ಳುವುದಕ್ಕೆ ಇದು ಅಡ್ಡಿಯಾಗಬಹುದೇನೋ ಅಂದುಕೊಂಡೆವು. ಟ್ಯಾಕ್ಸಿಯವನನ್ನು ಕೇಳಿದಾಗ ಅವನು “ಅಂಗಡಿ ಮುಗ್ಗಟ್ಟುಗಳು ಎಂಟು ಗಂಟೆಗೆಲ್ಲ ಮುಚ್ಚುತ್ತವೆ. ರಾತ್ರಿ 12 ಗಂಟೆಯಾದರೂ ಓಡಾಟಕ್ಕೆ ಭಯ ಇಲ್ಲ. ಸುರಕ್ಷಿತ ಊರು ಇದು. ಹೆಣ್ಣು ಮಕ್ಕಳು ಕೂಡ ಒಬ್ಬರೇ ಓಡಾಡಬಹುದು” ಎಂದ. ನಮ್ಮ ಒಂದೆರಡು ದಿನಗಳ ತಿರುಗಾಟದಲ್ಲಿ ನಾವು ಕಂಡಂತೆ, ಯಾವುದೇ ಮುಜುಗರ, ಅನಾವಶ್ಯಕ ಭಯವಿಲ್ಲದೆ ಹೆಣ್ಣು ಮಕ್ಕಳು ಅಂಗಡಿಗಳಲ್ಲಿ, ಉಪಹಾರ  ಗೃಹಗಳಲ್ಲಿ ಮುಗುಳ್ನಗೆಯಿಂದ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಹ್ಯಾವ್ ಲಾಕ್ ದ್ವೀಪದಲ್ಲಿ ನಾವಿಳಿದುಕೊಂಡಿದ್ದ ವಸತಿಗೃಹದಲ್ಲಿ  ಮಹಿಳಾ ಉದ್ಯೋಗಿಗಳದ್ದೇ ಪಾರಮ್ಯ. ಪುರುಷರ ಸಂಖ್ಯೆ ಬೆರಳೆಣಿಕೆ ಯಷ್ಟೆ. ರಾತ್ರಿ ೧೦ ಗಂಟೆಗೂ ನೇಪಾಳಿ ಹುಡುಗಿ ಒಬ್ಬಳು ಎಲ್ಲಾ ಕೊಠಡಿಗಳು ವ್ಯವಸ್ಥಿತವಾಗಿದೆಯೇ ಎಂದು ಪರೀಕ್ಷಿಸುತ್ತಿದ್ದಳು.  ಈ ದ್ವೀಪ ಸಮೂಹದಲ್ಲಿ ಮಹಿಳೆಯ ಸ್ಥಾನಮಾನ ಎಂದಿಗೂ ಹೀಗೆ ಇತ್ತೇ ಎಂಬ ಪ್ರಶ್ನೆ ಸಹಜವಾಗಿ ಮೂಡಿತು. ಯಾವುದೇ ತಾರತಮ್ಯ ಎದುರಿಸದೆ ಆಕೆ ಘನತೆಯಿಂದ ಸ್ವಾವಲಂಬಿ ಬದುಕನ್ನು ಕಂಡಿದ್ದಳೆ? ಗೌರವಾನ್ವಿತಳಾಗಿದ್ದಳೆ?

ಯಾವುದೇ ಪ್ರದೇಶದ ಸಮಾಜದ ಹುಟ್ಟು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳಲು ನಾವು ಚರಿತ್ರೆಯ ಪುಸ್ತಕಗಳ ಮೊರೆ ಹೋಗುತ್ತೇವೆ. ನಮಗೆಲ್ಲ ತಿಳಿದಿರುವಂತೆ ಯಾವುದೇ ಚರಿತ್ರೆಯ ಪುಸ್ತಕವು ಎಲ್ಲವನ್ನು ಹಿಡಿದಿಡುವುದು ಸಾಧ್ಯವಿಲ್ಲ. ಚರಿತ್ರಕಾರರ ಕಾಲಘಟ್ಟ, ಒಲವು, ನಿಲುವು  ಸ್ವಲ್ಪ ಮಟ್ಟಿಗಾದರೂ ಇಲ್ಲಿ ಜಾಗೃತವಾಗಿರುತ್ತದೆ. ಅಂತೆಯೇ ಪುಟದ ಮಿತಿ ಇತ್ಯಾದಿ  ಇತ್ಯಾದಿಗಳು ಕೂಡ ಹೇಳಬೇಕೆನಿಸುವ ಎಷ್ಟೋ ವಿಷಯಗಳನ್ನು ಹೇಳಗೊಡುವುದಿಲ್ಲ. ಆದರೂ ಚರಿತ್ರೆಯ ಪುಸ್ತಕಗಳ ಮತ್ತು ಇತರ ಪರಿಕರಗಳನ್ನು ಉಪಯೋಗಿಸಿಕೊಂಡು ಒಂದು ಕಾಲಘಟ್ಟದಲ್ಲಿ ಸಮಾಜ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗುತ್ತದೆ. ಈ  ದಿಸೆಯಲ್ಲಿ ಅಂಡಮಾನ್ ದ್ವೀಪದ ಚರಿತ್ರೆಯನ್ನು ಓದಿಕೊಂಡು ಜೊತೆಗೆ ಮೌಖಿಕವಾಗಿ ಏನಾದರೂ ಲಭ್ಯವಿದೆಯೇ ಎನ್ನುವ ಆಲೋಚನೆಯೊಂದಿಗೆ ಅಲ್ಲಿನ ಟ್ಯಾಕ್ಸಿ ಚಾಲಕರನ್ನು, ಉಪಹಾರ ಗೃಹದ ಪರಿಚಾರಕರನ್ನು, ಅತಿಥಿ ಗೃಹದ ನೌಕರರನ್ನು ಮಾತಿಗೆಳೆದಾಗ ಒಂದಷ್ಟು ಮಾಹಿತಿ ಲಭಿಸಿತು. ಈ ಸಂಭಾಷಣೆಗಳು ಮೌಖಿಕ ಕಥಾನಕ. ಅಲ್ಲಿನ ಯುವಕ ಯುವತಿಯರಿಗೆ ಅವರ ತಂದೆ ತಾಯಿಯರು ಅಥವಾ ಅಜ್ಜ-ಅಜ್ಜಿಯರು ಅವರ ವಂಶಾವಳಿಯ ಬಗ್ಗೆ ಹೇಳಿದ ಕಥೆಗಳಿವು. ಬಾಯಿಂದ ಬಾಯಿಗೆ, ನೆನಪಿನಿಂದ ನೆನಪಿಗೆ ಹಾದು ಬರುವಾಗ ಅನುಭವಗಳು ಕಥೆಗಳಾಗಿ, ಚದುರಿ ಹೋದ ಜೀವಗಳ ಎಳೆಯನ್ನೆಲ್ಲ ಹಿಡಿದಿಟ್ಟು  ಸುಂದರ ನೇಯ್ಗೆಯಾಗಿಸಿ, ನಿರ್ದಿಷ್ಟ ರೂಪ ಪಡೆದವು. ಜೀವನದ ಕೆಲವು ಘಟನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾತ್ರ ಮನಸ್ಸಿನಾಳದಲ್ಲಿ ಉಳಿಸಿ ತಮ್ಮ ಮಕ್ಕಳೊಂದಿಗೆ ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಓರಗೆಯವರೊಂದಿಗೆ ಮೆಲುಕು ಹಾಕುತ್ತಾ ಕನಸು ಕಂಗಳಿಂದ ಹರಟುತ್ತಿರುವ ಹಿರಿಯ ಜೀವಗಳು ಅಂಡಮಾನ್ ದ್ವೀಪ ಸಮೂಹದಲ್ಲಿ ಇವತ್ತಿಗೂ ಕಾಣ ಬರುತ್ತಾರೆ. ಈ ನೆಲೆಯ ಒಂದು ಎಳೆಯನ್ನು ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ.

ಹಿಂದಿನ ಲೇಖನದಲ್ಲಿ ರಾಜಕೀಯೇತರ ಮಹಿಳಾ ಕೈದಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದೆ. 1862 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಬಂದಿಳಿದ ಈ ಮಹಿಳೆಯರು ಸ್ವ ಇಚ್ಛೆಯಿಂದ ಸ್ಥಳಾಂತರ ಹೊಂದಿದವರು. ಆದರೆ ಇವರನ್ನು ಸ್ಥಳಾಂತರಿಸುವುದಕ್ಕೆ ಬ್ರಿಟಿಷ್ ವಸಾಹತುಶಾಹಿ ಸರಕಾರಕ್ಕೆ ಇದ್ದ ಕಾರಣವೇನು?  ಈ ದ್ವೀಪದಲ್ಲಿ ಅದಕ್ಕೂ ಮೊದಲು ಪುರುಷ ಅಪರಾಧಿಗಳನ್ನು ತಂದಿಳಿಸಿದಾಗಲೇ  ಸೆರೆಮನೆಯಾಗಲಿ, ವಾಸಯೋಗ್ಯ ವಸತಿಯಾಗಲಿ ಇರಲಿಲ್ಲ. ಬಟಾ ಬಯಲಿನಲ್ಲಿ ಈ ಕೈದಿಗಳನ್ನು ಹಿಡಿದಿಟ್ಟು ಕಠಿಣ ಪರಿಶ್ರಮಕ್ಕೆ ಒಡ್ಡುವುದರ ಹಿಂದೆ ಆಂಗ್ಲರ ಗಾಢವಾದ ನಂಬಿಕೆಯೊಂದು ಇತ್ತು. ಅಪರಾಧ  ಮಾಡುವವರು ನೈತಿಕತೆಯನ್ನು ಬಿಟ್ಟವರು. ಅವರು  ನೈತಿಕತೆಯನ್ನು ಹೊಂದುವಂತೆ ಮಾಡುವುದು ಅವಶ್ಯ. ಹಾಗಾಗಿ ತಮ್ಮ ಕುಟುಂಬಗಳಿಂದ, ತಮ್ಮ ಊರು ಮನೆಗಳಿಂದ ಬೇರ್ಪಟ್ಟು, ಏಕಾಂಗಿಯಾಗಿ, ದೈಹಿಕ ಶ್ರಮದ ಜೀವನ ನಡೆಸಿದಾಗ ಮನಸ್ಸು ನಿರ್ಮಲವಾಗುತ್ತದೆ, ದೈವಿಕವಾಗುತ್ತದೆ ಮತ್ತು ಅಪರಾಧ ಮಾಡುವ ಮನಸ್ಥಿತಿ ಬದಲಾಗಿ ವ್ಯಕ್ತಿ ನೈತಿಕತೆಯನ್ನು ಮೈಗೂಡಿಸಿಕೊಂಡು ಸಜ್ಜನನಾಗುತ್ತಾನೆ ಎಂಬ ಆಂಗ್ಲರ ನಂಬಿಕೆಯೇ ಕೈದಿಗಳನ್ನು ಸ್ಥಳಾಂತರಿಸುವುದಕ್ಕೆ ಕಾರಣವಾಗಿತ್ತು. ಆದರೆ ಅವರ ನಂಬಿಕೆ ಸುಳ್ಳಾಯಿತು. ಕೇವಲ ಪುರುಷರೇ ತುಂಬಿದ್ದ ದ್ವೀಪದಲ್ಲಿ ತಮ್ಮ ಲೈಂಗಿಕ ತೃಷೆ ಯನ್ನು  ಪೂರೈಸಿಕೊಳ್ಳಲು ಅವರು ಅನ್ಯ ಮಾರ್ಗಗಳನ್ನು ಅನುಸರಿಸಲಾರಂಭಿಸಿದರು. ಆಗಿನ ಕಾಲದಲ್ಲಿ ಸಲಿಂಗ ಚಟುವಟಿಕೆಗಳನ್ನು ಅನೈತಿಕವೆಂದು ಪರಿಗಣಿಸಲಾಗುತ್ತಿತ್ತು. ಹಾಗಾಗಿ ಪುರುಷ ಕೈದಿಗಳು ಸಲಿಂಗ ಚಟುವಟಿಕೆಗಳಲ್ಲಿ ಒಳಗೊಂಡದ್ದು ಅನೈತಿಕವೆಂದು, ಅಪರಾಧವೆಂದು ಪರಿಗಣಿಸಲ್ಪಟ್ಟಿತು. ನೈತಿಕವಾಗಿ ಸದೃಢರಾಗಬೇಕಾಗಿದ್ದ ಕೈದಿಗಳು ಹೆಚ್ಚು ಹೆಚ್ಚು ಅನೈತಿಕ ರಾಗುತ್ತಿದ್ದಾರೆ ಎಂಬ ಭಾವನೆ ಅಧಿಕಾರಿಗಳಲ್ಲಿ ಮೂಡಲಾರಂಭಿಸಿತು.  ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ  ಕೈದಿಗಳಿಗೆ ತಮ್ಮ ಹೆಂಡತಿ ಮಕ್ಕಳನ್ನು ತಮ್ಮ ಊರುಗಳಿಂದ ಕರೆಸಿಕೊಳ್ಳುವ ಅವಕಾಶವನ್ನು ನೀಡಲಾಯಿತು. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದ್ವೀಪಕ್ಕೆ ಬಂದರು. ‘ಕಾಲಾಪಾನಿ’ಯನ್ನು ದಾಟುವುದರ ಮೂಲಕ  ಜಾತಿ ಭ್ರಷ್ಟ ರಾಗುವುದು ಕೂಡ ಸಮಸ್ಯೆ ಎನಿಸಿ ಹೆಚ್ಚಿನವರು ದ್ವೀಪಕ್ಕೆ ಬರಲು ಹಿಂದೇಟು ಹಾಕಿದರು.

ಅಧಿಕಾರಿಗಳ ಮೊದಲ ಪ್ರಯತ್ನ ಸಫಲವಾಗದಿದ್ದಾಗ ಎರಡನೇ ಪ್ರಯತ್ನವಾಗಿ ಮಹಿಳಾ  ಕೈದಿಗಳನ್ನು ದ್ವೀಪಕ್ಕೆ ಸ್ಥಳಾಂತರಿಸಿದರು. ಆದರೆ ಈ ಮಹಿಳೆಯರಿಗೆ ತಾವು ಯಾವ ಕಾರಣಕ್ಕೆ ಸ್ಥಳಾಂತರವಾಗುತ್ತಿದ್ದೇವೆ ಎಂಬ ಅರಿವಿರಲಿಲ್ಲ. ಕಾನೂನಾತ್ಮಕವಾಗಿ ಪುರುಷ ಹಾಗೂ ಮಹಿಳಾ ಕೈದಿಗಳು ವಿವಾಹವಾಗುವುದಕ್ಕೆ ಅಧಿಕಾರಿ ವರ್ಗವು ಪರವಾನಗಿಯನ್ನು ನೀಡಿತು. ಹೀಗೆ ಸಂಸಾರಸ್ಥರಾದವರಿಗೆ  ಬಿತ್ತಿ ಬೆಳೆಯಲು ಭೂಮಿಯನ್ನು ನೀಡಲಾಯಿತು. ಮಹಿಳೆಯರು ದ್ವೀಪಕ್ಕೆ ಬರಲು ಪ್ರೋತ್ಸಾಹಿಸುವುದಕ್ಕೆ ಇದು ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ ದ್ವೀಪದ ಅಭಿವೃದ್ಧಿ. ದ್ವೀಪವನ್ನು ಅಭಿವೃದ್ಧಿಗೊಳಿಸಲು, ಅಲ್ಲಿನ ನಿವಾಸಿಗಳ ಸೌಕರ್ಯವನ್ನು ಪೂರೈಸಲು ದುಡಿಯುವ ಜನರ ಅವಶ್ಯಕತೆ ಇತ್ತು. ಶ್ರಮಜೀವಿ ಮಹಿಳೆಯರನ್ನು ಕುಟುಂಬದ ನೆಲೆಯಲ್ಲಿ ಉಪಯುಕ್ತವೆಂದು ಪರಿಗಣಿಸಿ ಅವರ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆಯನ್ನು ಬ್ರಿಟಿಷ್ ಸರಕಾರ ಗಮನಿಸಿತು. ಈ ಎರಡು ಕಾರಣಗಳಿಂದ ದ್ವೀಪಕ್ಕೆ ಮಹಿಳೆಯರು ಬಂದಿಳಿದು, ದುಡಿದು ಸಾಮಾಜಿಕ ಜೀವಿಗಳಾಗಿ ಬದುಕು ಕಟ್ಟಿಕೊಂಡರು. ಇಂದು ನಿರ್ಭೀತರಾಗಿ ದುಡಿಯುವ ಮಹಿಳೆಯರನ್ನು ನಾವು ಕಾಣುತ್ತಿರುವುದರ ಹಿಂದೆ  ಚಾರಿತ್ರಿಕ ಕಾರಣವೂ  ಪೂರಕವಾಗಿದೆಯೆಂದು ಹೇಳಬಹುದು.

ಆರಂಭಿಕ ಹಂತದಿಂದಲೂ ಈ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವಿತ್ತು. ಇಲ್ಲಿ ‘ಸತಿ’ ಪದ್ಧತಿ ಇರಲಿಲ್ಲ. ವೇಶ್ಯಾವಾಟಿಕೆಯೂ ಇರಲಿಲ್ಲ. ಅವರು ಪುರುಷರಿಗೆ ಸಮನಾಗಿ ಕೆಲಸಗಳನ್ನು ನಿರ್ವಹಿಸ ಬೇಕಿತ್ತಾದರೂ ಅವರ ಅನಿಸಿಕೆ ಮತ್ತು ಭಾವನೆಗಳಿಗೆ ಬೆಲೆ ಹಾಗೂ ಅವನ್ನು ವ್ಯಕ್ತಪಡಿಸುವ ಸ್ವಾತಂತ್ರ‍್ಯವಿತ್ತು. ಜೀವಾವಧಿ ಶಿಕ್ಷೆಗೊಳಗಾಗಿ ಇಲ್ಲಿ ಬಂಧಿಯಾಗಿದ್ದವರು ತಮ್ಮ ಶಿಕ್ಷೆಯ ಅವಧಿ ಮುಗಿದ ನಂತರ ತಮ್ಮ ಊರುಗಳಿಗೆ ಹಿಂತಿರುಗಿ ಹೋಗುವಂತಿರಲಿಲ್ಲ. ಅವರ ಕುಟುಂಬವನ್ನು ದ್ವೀಪಕ್ಕೆ ಕರೆಸಿಕೊಳ್ಳಬಹುದಾಗಿದ್ದರೂ ಹೆಚ್ಚಿನ ಕುಟುಂಬಗಳು ಬರಲು ಇಚ್ಛಿಸಲಿಲ್ಲ. ಹಾಗಾಗಿ ಈ ಮಹಿಳೆಯರು ಸ್ವಾಬಲಂಬಿಗಳಾಗಿ ದುಡಿದು ದ್ವೀಪವನ್ನು ಕಟ್ಟಿ ಬೆಳೆಸುವಲ್ಲಿ ಸಹಕಾರಿಯಾದರು. ದ್ವೀಪದ ಬೆಳವಣಿಗೆಯಲ್ಲಿ ಭಾಗವಹಿಸುವ ಮೂಲಕ ತಾವು ವಿನೂತನವಾದ ಚಾರಿತ್ರಿಕ ಪಾತ್ರವನ್ನು ವಹಿಸಿದ್ದೇವೆ ಎಂಬ ಅರಿವು ಕೂಡ ಅವರಿಗಿರಲಿಲ್ಲ.

 ಈ ಹೆಣ್ಣು ಮಕ್ಕಳ ಜೀವನವೇನೂ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ, ಕಲ್ಲು ಮುಳ್ಳುಗಳ ಹಾದಿ ಸವೆಸಿದ ಅವರಿಗೆ ಇದ್ದ ಆಶಾಕಿರಣವೆಂದರೆ -ಅಪರಾಧಿಗಳ ಪಟ್ಟ ಹೊರದೆ, ಶಿಕ್ಷೆಗೊಳಪಟ್ಟವರಾಗದೆ ,ಸ್ವತಂತ್ರ ಬದುಕನ್ನು ಬಾಳಬಲ್ಲ ಅವರ ಮಕ್ಕಳು ಮತ್ತು ಅವರ ಭವಿಷ್ಯ. ಈ ತಾಯಂದಿರು ತಮ್ಮ ಹಿಂದಿನ ಜೀವನವನ್ನು ಮತ್ತು ತಮಗಂಟಿಕೊಂಡಿದ್ದ “ಅಪರಾಧಿ”,  “ಶಿಕ್ಷೆಗೊಳಪಟ್ಟವಳು” ಎಂಬಿತ್ಯಾದಿ ಹಣೆ ಪಟ್ಟಿಯನ್ನು ಕಳಚಿಕೊಳ್ಳಲು ಸಾಧ್ಯವಿರಲಿಲ್ಲ. ಅವರ ಜೀವನದ ಮತ್ತೊಂದು ದುರಂತವೆಂದರೆ ಅವರೆಲ್ಲ ಹಿಂತಿರುಗಿ ತಮ್ಮೂರಿಗೂ ಮರಳಿ ತೆರಳುವಂತಿರಲಿಲ್ಲ, ಜೊತೆಗೆ ಇಲ್ಲಿನ ಹೊಸ ಜೀವನದ ಪ್ರಾರಂಭದಿಂದಲೂ ಅವರೆಲ್ಲರೂ “ಅವನತ ಹೆಣ್ಣು ಮಕ್ಕಳು”. ಆದರೆ ಪುರುಷರ ಪೂರ್ವಜೀವನದ ಬಗ್ಗೆ ಯಾರೂ ಕೆದಕುತ್ತಿರಲಿಲ್ಲ, ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮಹಿಳೆ ಮದುವೆಯಾದಲ್ಲಿ ತನ್ನ ಗಂಡನಿಗೆ ಸರಿಸಮನಾಗಿ ದುಡಿಯಬೇಕಿತ್ತು. ಕೆಲವೊಮ್ಮೆ ಆತನಿಗಿಂತಲೂ ಕಠಿಣವಾದ ದುಡಿಮೆ ಆಕೆಯ ಪಾಲಿನದಾಗಿರುತ್ತಿತ್ತು. ಈ ಹೊಸ ಜೀವನ ಎನ್ನುವುದು ದಟ್ಟ ಕಾಡಿನಲ್ಲಿ ಪುಟ್ಟ ವಸತಿ, ತನ್ನ ಗಂಡ ಮತ್ತು ಪ್ರಾಣಿಗಳು. ತಮ್ಮೂರಿನಲ್ಲಿ ಕೂಡು ಕುಟುಂಬದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ಬದುಕು ಮಾಡುತ್ತಿದ್ದ ಹುಡುಗಿಯರು ಇಲ್ಲಿ ಯಾವ ಆಸರೆಯೂ ಇಲ್ಲದೆ ಬದುಕನ್ನು ಎದುರಿಸಲೇಬೇಕಾದ ಅನಿವಾರ್ಯತೆ ಇತ್ತು. ಕಾಲಕ್ರಮೇಣ ಮಕ್ಕಳು ಮೊಮ್ಮಕ್ಕಳಾದಾಗ ಅವರು ಅವಿಭಕ್ತ ಕುಟುಂಬ, ಕೂಡು ಕುಟುಂಬವನ್ನು ಕಾಣಲು ಸಾಧ್ಯವಾಯಿತು.

ಕೆಲಸದಲ್ಲಿ ತೊಡಗಿ ಕೊಂಡಾಗ ನಡೆಯುವ ಆಕಸ್ಮಿಕ ಅಪಘಾತಗಳು ಹಾಗೂ ಅನಾರೋಗ್ಯ, ಅಧಿಕ ದುಡಿಮೆ ಇತ್ಯಾದಿಗಳಿಂದ ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಸಾವಿಗೀಡಾಗುತ್ತಿದ್ದರು. ವಿಧವಾ ವಿವಾಹ ಆಗುವುದಕ್ಕೆ ಕಾನೂನು ಹಾಗೂ ಸಮಾಜದ ಒಪ್ಪಿಗೆಯಿತ್ತು. ಪುರುಷರ ಸಂಖ್ಯೆ ಮಹಿಳೆಯರಿಗಿಂತ ಅಧಿಕವಾಗಿದ್ದರಿಂದ ಮರುಮದುವೆ ಕಷ್ಟವೇನು ಆಗಿರಲಿಲ್ಲ. ಆದರೆ ಸ್ವಜಾತಿ, ತಮ್ಮದೇ ಪಂಗಡ ಇಂತಹ ಆಯ್ಕೆಗಳು ಮಹಿಳೆಯರಿಗೆ ಇರಲಿಲ್ಲ. ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಂಡು ಮರು ವಿವಾಹ ಆಗಬೇಕಿತ್ತು. ವಿವಾಹ ನಂತರವೂ ಕೆಲವೊಮ್ಮೆ ಹೊಂದಾಣಿಕೆ ಅತೀ ಎನಿಸುವಷ್ಟು ಇರುತ್ತಿತ್ತು. ಹೆಂಡತಿಯ ಮನಸ್ಸು ಇರಾದೆಗಳನ್ನೆಲ್ಲ ನಿರ್ಲಕ್ಷಿಸಿ ಎಷ್ಟೋ ಗಂಡಸರು ತಮ್ಮ ಹೆಂಡತಿಯರನ್ನು ಬೇರೆ ಗಂಡಸಿನೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸುವುದು ಮತ್ತು ಈ ಸಂಬಂಧವಾಗಿ ಗಂಡ ಹೆಂಡತಿ ನಡುವೆ ಜಗಳಗಳಾಗುವುದು ಸಾಮಾನ್ಯವಾಗಿತ್ತು. ಕೆಲವೊಂದು ಸಂದರ್ಭದಲ್ಲಿ ಹೆಂಡತಿ ತನ್ನ ಗಂಡನ ಇರಾದೆಯನ್ನು ಕಟುವಾಗಿ ವಿರೋಧಿಸಿ ಆತನನ್ನು ಕೊಲೆ ಮಾಡಿದ್ದು ಕೂಡ ಇದೆ .ಆಂಗ್ಲ ಅಧಿಕಾರಿಗಳು ಇಲ್ಲಿನ ಸಮಾಜದ ಬಗ್ಗೆ ಕಾಲಾನುಕಾಲಕ್ಕೆ ಸರಿಯಾಗಿ ತಮ್ಮ ವರದಿಯನ್ನು ನೀಡಬೇಕಾದಾಗ ಆ ವರದಿಗಳಲ್ಲಿ ಹೆಣ್ಣು ಗಂಡಿನ ನಡುವಿನ ಅನುಪಾತ ಸಮಾನವಾಗಿಲ್ಲದಿರುವುದು ಈ ಸಮಾಜದ ನೈತಿಕ ಅಧಃ ಪತನಕ್ಕೆ ಕಾರಣ ಎಂದು ನಮೂದಿಸುತ್ತಿದ್ದರು. ಈ ವರದಿಯ ವ್ಯಂಗ್ಯವೇನೆಂದರೆ ಎಲ್ಲಿಯೂ ಕೂಡ ಈ ಸಮಾಜದ ಮಹಿಳೆಯ ಸ್ಥಿತಿ ಏನು ? ಅವಳ ಅನಿಸಿಕೆ ಏನು ಎಂಬುದರ ಬಗ್ಗೆ ಉಲ್ಲೇಖವೇ ಇಲ್ಲದಿರುವುದು.

ಎರಡನೆಯ ಮದುವೆ ಎಂಬುದನ್ನು ಇಲ್ಲಿನ ಸಮಾಜ ಸಹಜವಾಗಿ ಸ್ವೀಕರಿಸುತ್ತಿತ್ತು. ಅನಿವಾರ್ಯ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಎರಡನೇ ಮದುವೆಯನ್ನು ಆಯ್ಕೆಯಾಗಿ ಮಾಡಿಕೊಂಡಿದ್ದರು. ಆರ್ಥಿಕವಾಗಿ ಸಬಲರಾಗಿದ್ದ ಮಹಿಳೆಯರು ಮರು ಮದುವೆಯಿಂದ ದೂರ ಉಳಿಯುತ್ತಿದ್ದರು. ಉದಾಹರಣೆಗೆ ಶ್ರೀಮತಿ ರೂತ್ ಮೇಶಕ್ ಎಂಬಾಕೆ ಶಾಲೆಯಲ್ಲಿ ಅಧ್ಯಾಪಕನಾಗಿದ್ದ ಹೆನ್ರಿ ಮೇಶಕ್ ಎಂಬಾತನನ್ನು ಮದುವೆಯಾಗಿರುತ್ತಾಳೆ. ಆತ ಟೆನಿಸ್ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಶಾಲೆಯಲ್ಲಿ ಮೃತನಾಗುತ್ತಾನೆ. ಮರಣಾನಂತರ ಆತನ ಉದ್ಯೋಗವು  ರೂತ್ ಗೆ ದೊರೆಯುತ್ತದೆ. ಆರ್ಥಿಕ  ಸಬಲತೆ ದೊರೆತ ಆಕೆ ಮರು ಮದುವೆ ಆಗುವುದಿಲ್ಲ.

ರಾಮಿಯಮ್ಮ ಎಂಬಾಕೆಯ ಬದುಕು  ರೂತ್ ಮೇಶಕ್ ಗಿಂತ ತುಸು ಭಿನ್ನ. ರಾಮಿಯಮ್ಮ ತನ್ನ ಹದಿನಾರನೇ ವಯಸ್ಸಿನಲ್ಲಿ ರಾಜರತನ ಎಂಬಾತನನ್ನು ಮದುವೆಯಾಗುತ್ತಾಳೆ. ಮದುವೆಯಾಗಿ ನಾಲ್ಕನೇ ದಿನಕ್ಕೆ ಆಕೆಯ ಗಂಡನನ್ನು ಜಪಾನ್ ಸೈನಿಕರು ಬಂಧಿಸಿ  ಕಾರಾಗೃಹಕ್ಕೆ ತಳ್ಳುತ್ತಾರೆ. ಒಂದು ತಿಂಗಳ ನಂತರ ಇತರ ಕಾರಾಗೃಹವಾಸಿಗಳೊಂದಿಗೆ ಆತನನ್ನು ಹಾಂಫ್ರೀಗಂಜ್ ಎಂಬ ಸ್ಥಳಕ್ಕೆ  ಕರೆದೊಯ್ದು ಗುಂಡಿಟ್ಟು ಕೊಲ್ಲಲಾಗುತ್ತದೆ. ನವ ವಿವಾಹಿತ ರಾಮಿಯಮ್ಮ ವಿಧವೆಯಾಗುತ್ತಾಳೆ. ಆಕೆ ತನ್ನೆಲ್ಲ ಆಭರಣಗಳು, ವರ್ಣಮಯ ವಸ್ತ್ರಗಳನ್ನು  ತೊರೆದು, ಬಿಳಿ ಬಟ್ಟೆ ಧರಿಸಿ ತನ್ನ ಉಳಿದ ಜೀವನವನ್ನು ಇತರರ ಸೇವೆಯಲ್ಲಿ ಕಳೆಯುತ್ತೇನೆಂದು ನಿರ್ಧರಿಸುತ್ತಾಳೆ. ೧೫ ವರ್ಷಗಳ ನಂತರ ಇತರರ ಒತ್ತಡಕ್ಕೆ ಮಣಿದು ಕಡುಕಷ್ಟವಾಗಿದ್ದ ವಿಧವಾ ಜೀವನಕ್ಕೆ ಇತಿಶ್ರೀ ಹಾಡಿ ಪುನರ್ ವಿವಾಹವಾಗುತ್ತಾಳೆ. ಆದರೆ ತನ್ನ ಜೀವನದುದ್ದಕ್ಕೂ ಬಿಳಿಯ ವಸ್ತ್ರವನ್ನು ಮಾತ್ರ ಧರಿಸುತ್ತಾಳೆ.

ಮಹಿಳೆ ತನ್ನ ಕುಟುಂಬದ ಸ್ವಾಸ್ಥ್ಯಕ್ಕೆ ದುಡಿದಂತೆ ಸಮಾಜದ ಸ್ವಾಸ್ಥ್ಯಕ್ಕೂ ದುಡಿಯುತ್ತಾಳೆ. ಸಮಾಜದ ಅಭಿವೃದ್ಧಿಯಲ್ಲಿ ಆಕೆಯ ಕೊಡುಗೆ ಗಮನೀಯವಾದುದು. ಅಂಡಮಾನ್ ದ್ವೀಪಗಳಲ್ಲಿ “ಅವನತ ಮಹಿಳೆ” ಎಂಬ ಹಣೆಪಟ್ಟಿ ಯೊಂದಿಗೆ ಹಗಲು ರಾತ್ರಿ ದ್ವೀಪದ ಅಭಿವೃದ್ಧಿಗಾಗಿ ದುಡಿದ ಮಹಿಳೆಯರು ವಂದನೀಯರು. ಈ ಮಹಿಳೆಯರ ಬದುಕು ಮಣ್ಣಿನ ಜ್ವಾಲಾಮುಖಿಯಂತೆ….ಈ ಮಹಿಳೆಯರು ಸತತವಾಗಿ ನಿರಂತರವಾಗಿ ತಣ್ಣನೆಯ ಅಲೆಗಳನ್ನೆ ದ್ವೀಪದಲ್ಲಿ ಹರಡಿದ್ದಾರೆ.. ಹರಡುತ್ತಲೇ ಇದ್ದಾರೆ.

ರಾಜಲಕ್ಷ್ಮೀ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಅಂಡಮಾನ್‌ ಡೈರಿ -1 ಓದಿದ್ದೀರಾ? ಉಸುಕಿನಲ್ಲಿ ಊರಿದ ಹೆಜ್ಜೆಗಳು

Related Articles

ಇತ್ತೀಚಿನ ಸುದ್ದಿಗಳು