Saturday, April 27, 2024

ಸತ್ಯ | ನ್ಯಾಯ |ಧರ್ಮ

ಉಸುಕಿನಲ್ಲಿ ಊರಿದ ಹೆಜ್ಜೆಗಳು

ಅಂಡಮಾನ್‌ ಡೈರಿ 1

ನಮ್ಮ ದೇಶದ ಬೇರೆ ಬೇರೆ ಪ್ರಾಂತ್ಯಗಳಿಂದ ವಿಭಿನ್ನ ಸನ್ನಿವೇಶಗಳಲ್ಲಿ ಅಪರಾಧಿಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೊಳಗಾಗಿ ಸುಲಲಿತ ಬದುಕಿನಿಂದ ವಂಚಿತರಾದ ಹೆಣ್ಣು ಮಕ್ಕಳ ಕಥನ ಗಾಥೆಯಿದು. ರಾಜಲಕ್ಷ್ಮಿ ಎನ್‌ ಕೆ ಇವರು ಬರೆಯುತ್ತಿರುವ  ಅಂಡಮಾನ್‌ ಡೈರಿಯ ಮೊದಲ ಕಥನ ಇಲ್ಲಿದೆ

ಸಾಮಾನ್ಯವಾಗಿ ದೇಶಗಳ ಇತಿಹಾಸ ಯಾ ಚರಿತ್ರೆಯನ್ನು ಓದುವಾಗ ನಾವು ಅದು ಆ ದೇಶದ ಎಲ್ಲ ಜನರನ್ನು ಒಳಗೊಂಡ ಒಂದು ಸಮಗ್ರವಾದ ಒಳನೋಟ ನೀಡುತ್ತದೆ ಎಂದು ಭಾವಿಸುತ್ತೇವೆ. ಆದರೆ ಅದು ಹಾಗಿರುವುದಿಲ್ಲ. ನಾವಿಲ್ಲಿ ಹೆಚ್ಚಾಗಿ ಗಮನಿಸದೇ ಇರುವ ಒಂದು ಅಂಶವೇನೆಂದರೆ ದೇಶಗಳ, ಸಾಮ್ರಾಜ್ಯಗಳ ಚರಿತ್ರೆಯ ಕಥನಗಳು ಬಹುಪಾಲು ಪ್ರಭುತ್ವದ ಸುತ್ತವೇ ಗಿರಕಿ ಹೊಡೆಯುತ್ತ ನಾಡ ಪ್ರಭುಗಳ ನಾಯಕತ್ವವನ್ನು ಮಂಡಿಸುತ್ತಾ ಸಾಗುತ್ತದೆ. ಚರಿತ್ರೆಯ ಪುಟಗಳಲ್ಲಿ ಪ್ರಭುತ್ವಕ್ಕೆ ಪೂರಕ ಹಾಗೂ ಮಾರಕರಾದವರ ಸಾಲು ಸಾಲು ಮೆರವಣಿಗೆ ಕಾಣಬರುತ್ತದೆ. ದೇಶಗಳನ್ನ, ಸಾಮ್ರಾಜ್ಯಗಳನ್ನ ಪರಿಚಯಿಸುವಲ್ಲಿ ಪ್ರಾಯಶಃ ಈ ರೂಪದ ಕಥನಗಳು ಅನಿವಾರ್ಯವೂ ಇರಬಹುದಾದರೂ, ಒಂದು ಕಾಲಘಟ್ಟದ ಸಮಾಜವನ್ನು ಪರಿಚಯಿಸುವಲ್ಲಿ ಇವು ಸೋಲುತ್ತವೆ ಎಂದೇ ಹೇಳಬಹುದು. ಪ್ರಭುತ್ವದ ದೃಷ್ಟಿಯಿಂದ ಪರಿಚಯವಾಗುವ ಸಮಾಜ ಪರಿಪೂರ್ಣವಾಗಿರಲು ಈ ಕಾರಣದಿಂದ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ನೀಡುವ ವಿವರಗಳಿಗಿಂತ ನೀಡದ ವಿವರಗಳೇ ಹೆಚ್ಚು.

ಒಂದರ್ಥದಲ್ಲಿ ಇದು ಎಲ್ಲರನ್ನೂ ಒಳಗೊಳಿಸುವ ಪ್ರಯತ್ನ ಮಾಡಿದರೂ ‘ಈ ಎಲ್ಲರೂ’ ಎನ್ನುವುದನ್ನು ವ್ಯಾಖ್ಯಾನಿಸಿದ ರೀತಿಯೇ ಜನ ಸಾಮಾನ್ಯರಿಂದ ದೂರವಿದ್ದು ಬಿಡುತ್ತದೆ. ಆದರೆ ಸಾಹಿತ್ಯಕ್ಕೆ ಹೆಚ್ಚಿನ ಸಂದರ್ಭದಲ್ಲಿ ‘ಕಾಲ್ಪನಿಕ’ ಎಂಬ ಹಣೆಪಟ್ಟಿ ಹಾಕಿ ಅದು ನೀಡುವ ನೇರ ಸಂಜ್ಞಾರ್ಥದ ಸಂಕೇತಾರ್ಥದಲ್ಲಿರುವ ಮಾಹಿತಿಗಳು ನಗಣ್ಯವಾಗುವ ಸಂದರ್ಭಗಳೇ ಜಾಸ್ತಿ. ಈ ಕಾರಣದಿಂದಲೇ ನಾವು ಪ್ರಭುತ್ವದ ಭಾಷೆಯೊಂದನ್ನೇ ಅವಲಂಬಿಸದೇ ಆಯಾಯ ಕಾಲದ ಯಾ ಸಮಕಾಲೀನ ಸಮಾಜದ ಜನಸಾಮಾನ್ಯರ ಭಾಷೆಯನ್ನು ಒಳಗೊಂಡ ಇತರ ಆಕರಗಳನ್ನು ಆಶ್ರಯಿಸಬೇಕಾಗುತ್ತದೆ.  ಆರೋಗ್ಯಕರ ಸಮಾಜಕ್ಕೆ ಪ್ರಭುತ್ವದ ಭಾಷೆಯೊಂದೇ ಸಾಲದು. ಜನಸಾಮಾನ್ಯರ ಭಾಷೆಯೂ ಪೂರಕವಾಗಿ ಇರಬೇಕಾಗುತ್ತದೆ. ಈ ದಿಸೆಯಲ್ಲಿ ಮುಖ್ಯವಾಹಿನಿಯ ಚರಿತ್ರೆಯಲ್ಲಿ ದಾಖಲಾಗದ ಇತರ ಮೂಲಗಳಾದ  ಸರಕಾರದ – ಆಡಳಿತದ ಇತರ ದಾಖಲೆಗಳಲ್ಲಿ ನಮೂದಿಸಲ್ಪಟ್ಟ ಹೋರಾಟದ ಬದುಕು ನಡೆಸಿ, ಒಂದು ಸಮಾಜದ ಸಂಕೀರ್ಣತೆಯನ್ನು ಪರಿಚಯಿಸಿದವರನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಈ ಪರಿಚಯ ನಮಗೆ ಒಂದು ಕಾಲಘಟ್ಟದ ಬದುಕನ್ನು, ಅದರ ಸಂಕೀರ್ಣತೆಯನ್ನು, ಚೌಕಟ್ಟನ್ನು, ಪ್ರಶ್ನೆಗಳನ್ನು ನಮ್ಮ ಮುಂದಿಡಬಲ್ಲದು. ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನದ ಮೂಲಕ ಚರಿತ್ರೆಯ ಆಳ ಅಗಲಗಳು ವಿಸ್ತರಿಸುವ ಸಾಧ್ಯತೆ ಇರುತ್ತದೆ.

ನಮ್ಮ ದೇಶದ ಚರಿತ್ರೆಯಲ್ಲಿ 1857ರ ಸಿಪಾಯಿ ದಂಗೆಯನ್ನು ನಾವು ಪ್ರಥಮ ಸ್ವಾತಂತ್ರ್ಯ ಹೋರಾಟವೆಂದು ಗುರುತಿಸುತ್ತೇವೆ. ತದನಂತರದಲ್ಲಿ ಹೋರಾಟವು ಬಿಸುಪು ಹೆಚ್ಚಿಸಿಕೊಂಡು, ಹೋರಾಟಗಾರರು ವಿಭಿನ್ನವಾದ ಶಿಕ್ಷೆಗಳಿಗೆ ಒಳಗಾಗುತ್ತಾರೆ. ಈ ಶಿಕ್ಷೆಗಳಲ್ಲಿ ಸೆಲ್ಯುಲಾರ್ ಜೇಲ್‌ನ ಕಾರಾಗೃಹ ವಾಸವು ಅತ್ಯಂತ ಕಠಿಣ ಹಾಗೂ ದುರದೃಷ್ಟಕರ ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪೋರ್ಟ್‌ಬ್ಲೇರ್‌ಗೆ ರಾಜಕೀಯ ಖೈದಿಗಳು ಸ್ಥಳಾಂತರಗೊಂಡ ಸಂದರ್ಭದಲ್ಲೇ, ಸಮಾನಾಂತರವಾಗಿ ವೈಯಕ್ತಿಕ ಬದುಕಿನ ಹೋರಾಟದಲ್ಲಿ ತಿಳಿದೋ ತಿಳಿಯದೆಯೋ ಅಪರಾಧಿಗಳಾದ ಬಹಳಷ್ಟು ಮಹಿಳಾ ಖೈದಿಗಳು ಕೂಡಾ ಪೋರ್ಟ್‌ಬ್ಲೇರ್‌ಗೆ ಸ್ಥಳಾಂತರಗೊಂಡರು. ದೇಶದ ದುರಂತಗಳು ದಾಖಲಾಗುತ್ತವೆ. ಆದರೆ ಸಮಾಜದ ದುರಂತಗಳು ದಾಖಲಾಗಬೇಕಿದ್ದರೆ ಅವುಗಳು ಹೋರಾಟಗಳಾಗಬೇಕು, ವಿಶ್ವದ ಗಮನ ಸೆಳೆಯಬೇಕು. ಆದರೆ ದುರ್ಬಲರಿಗೆ, ಅಸಹಾಯಕರಿಗೆ ಇಂತಹ ಅವಕಾಶಗಳು ಕಡಿಮೆ. ಹಾಗಂತ ಅವರು ನಗಣ್ಯರಲ್ಲ. ದೇಶದ ಚರಿತ್ರೆಗೆ ಸಮಾನಾಂತರವಾಗಿ ಅಂತರ ಗಂಗೆಯಾಗಿ ಹರಿದ ಕೆಲವು ಮಹಿಳೆಯರ ಚರಿತ್ರೆಯನ್ನ ನನ್ನ ಅಂಡಮಾನ್ ಪ್ರವಾಸದಲ್ಲಿ ಕಂಡುಕೊಂಡೆ. ಈ ಹಿನ್ನೆಲೆಯಲ್ಲಿ ಅವರ ಇರವನ್ನು ದಾಖಲಿಸುವುದು ಅಂದಿನ ಸಮಾಜವನ್ನು ತಿಳಿಯಲು ಅಗತ್ಯ ಎನ್ನುವುದು ನನ್ನ ಅಭಿಪ್ರಾಯ.

ನಮ್ಮ ದೇಶದ ಬೇರೆ ಬೇರೆ ಪ್ರಾಂತ್ಯಗಳಿಂದ ವಿಭಿನ್ನ ಸನ್ನಿವೇಶಗಳಲ್ಲಿ ಅಪರಾಧಿಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಶಿಕ್ಷೆಗೊಳಗಾಗಿ ಸುಲಲಿತ ಬದುಕಿನಿಂದ ವಂಚಿತರಾದ ಹೆಣ್ಣು ಮಕ್ಕಳ ಕಥನ – ಗಾಥೆಯಿದು.

ಇರ‍್ಕಮ್ಮ

ಆಂಧ್ರಪ್ರದೇಶದ ಅಂಕಪಲ್ಲೆಯವಳಾದ ಇರ‍್ಕಮ್ಮ ಅಪರಾಧಿ ಪಟ್ಟ ಪಡೆದದ್ದು ತನ್ನ ೧೨ನೇ ವಯಸ್ಸಿನಲ್ಲಿ. ಆಕೆ ತನ್ನ ಓರಗೆಯವರೊಂದಿಗೆ ಗಿಲ್ಲಿದಾಂಡು ಆಡುತ್ತಿದ್ದ ಎಳಸು ಪ್ರಾಯದ ಆಕೆ ಆ ದಿನ ಆಟದಲ್ಲಿ ತಲ್ಲೀನಳಾಗಿ ದಾಂಡಿನಿಂದ ಗಿಲ್ಲಿಯನ್ನು ಕುಟ್ಟಿ ರಭಸದಿಂದ ಹೊಡೆದಳು. ಗಿಲ್ಲಿಯನ್ನು ಹಿಡಿದರೆ ಆಕೆಯ ಆಟ ಮುಗಿಯಿತು. ಸುತ್ತ ನಿಂತು ಮಕ್ಕಳೆಲ್ಲ ತವಕದಿಂದ ಹಿಡಿಯಲು ಪ್ರಯತ್ನಿಸಬೇಕೆನಿಸುವಷ್ಟರಲ್ಲಿ ಕುಟ್ಟಿ ಬಾಲಕನೊಬ್ಬನ ದವಡೆಗೆ ಹೊಡೆದು ಆತ ಸ್ಥಳದಲ್ಲೇ ಅಸುನೀಗುತ್ತಾನೆ. ಪುಟ್ಟ ಹುಡುಗಿ ಅಪರಾಧಿಯಾಗಿ ಜೈಲು ಸೇರುವುದನ್ನು ತಪ್ಪಿಸಲು ಆಕೆಯ ಭಾವ ತಪ್ಪನ್ನು ತನ್ನ ಮೇಲೆಳೆದುಕೊಳ್ಳಲು ಬಯಸುತ್ತಾನೆ. ಆದರೆ ಆಕೆಯ ಕುಟುಂಬದವರಾರೂ ಇದಕ್ಕೆ ಒಪ್ಪುವುದಿಲ್ಲ. ಆಕೆ ತನ್ನ ತಪ್ಪನ್ನು ಪೊಲೀಸರಲ್ಲಿ ಒಪ್ಪಿಕೊಳ್ಳುತ್ತಾಳೆ. ಆಕೆಯನ್ನು ಕೊಲೆಗಾರ್ತಿಯೆಂದು ದಾಖಲೆಗಳಲ್ಲಿ ನಮೂದಿಸಲಾಗುತ್ತದೆ. ಕುಟುಂಬಸ್ಥರು ಅವಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಆಕೆ ಆಂಧ್ರಪ್ರದೇಶದ ಸೆರೆಮನೆಯಲ್ಲಿ ನಾಲ್ಕು ವರ್ಷ ಕಳೆದ ನಂತರ ಉಳಿದ ಸಜೆಯನ್ನು ಅನುಭವಿಸಲು ಒಪ್ಪಿ ತನ್ನ ಹದಿನಾರನೇ ವಯಸ್ಸಿನಲ್ಲಿ ಪೋರ್ಟ್‌ಬ್ಲೇರ್‌ಗೆ ಸ್ಥಳಾಂತರಗೊಳ್ಳುತ್ತಾಳೆ. ಆಕೆಯ ಶಿಕ್ಷಾವಧಿ ಪೂರ್ಣಗೊಂಡ ನಂತರ ಚಿಟ್ಟಿಕುಟ್ಟಿ ಸಿಂಹಾಚಲಮ್ ನಾಯ್ಡುವನ್ನು ವಿವಾಹವಾಗುತ್ತಾಳೆ. ಗಂಡ – ಹೆಂಡತಿಯರಿಬ್ಬರೂ ಹೊಲದಲ್ಲಿ ಶ್ರಮವಹಿಸಿ ದುಡಿದು ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದರೆ ಸಿಂಹಾಚಲಮ್ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಮರಣಿಸುತ್ತಾನೆ. ಇರ‍್ಕಮ್ಮ ಛಲಗಾತಿ. ಆಕೆಗೊಬ್ಬ ಮಗ, ಮುತ್ತುಸ್ವಾಮಿ. ತನ್ನ ಮಗನ ಪಾಲನೆ ಪೋಷಣೆಯ ಜವಾಬ್ದಾರಿಯನ್ನ ಸ್ವಂತ ಉದ್ದಿಮೆ ಪ್ರಾರಂಭಿಸಿ ನಿಭಾಯಿಸುತ್ತಾಳೆ. ಮಗ ಆಕೆಯ ಉದ್ದಿಮೆಯಲ್ಲಿ ಕೈ ಜೋಡಿಸಿ, ಉದ್ದಿಮೆಯನ್ನು ಗಟ್ಟಿಗೊಳಿಸುತ್ತಾನೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ದ್ವೀಪದಲ್ಲಿ ಅರಾಜಕತೆಯುಂಟಾಗುತ್ತದೆ. ಇರ‍್ಕಮ್ಮ ದುರಾದೃಷ್ಟವಂತೆ. ಆಕೆಯ ಸಂಪತ್ತೆಲ್ಲವೂ ಲೂಟಿಯಾಗುತ್ತದೆ. ಜಪಾನ್ ಆಕ್ರಮಿತ ಅಂಡಮಾನ್, ಆಕೆಗೆ ದುರಾದೃಷ್ಟಕರವಾಗಿ ಪರಿಣಮಿಸುತ್ತದೆ. ಮುತ್ತುಸ್ವಾಮಿ ಸೆರೆಮನೆಗೆ ತಳ್ಳಲ್ಪಡುತ್ತಾನೆ. ಅಲ್ಲಿ ಭೀಕರ ಚಿತ್ರಹಿಂಸೆಗೊಳಪಟ್ಟು ಸಾವಿಗೀಡಾಗುತ್ತಾನೆ. ಈ ವಿಷಯ ಆಕೆಗೆ ತಲುಪುವಾಗಲೇ ಆತನನ್ನು ಕ್ರಿಶ್ಚಿಯನ್ನರ ರುದ್ರಭೂಮಿಯಲ್ಲಿ ಹೂತುಹಾಕಿ ಹಲವಾರು ದಿನಗಳು ಸಂದಿರುತ್ತದೆ. ಆಕೆಯ ಮೊಮ್ಮಗ ನಾರಾಯಣರಾವ್. ಆತ ಬ್ರಿಟಿಷರ ಪರವಾಗಿ ಬೇಹುಗಾರಿಕೆ ನಡೆಸಿದನೆಂಬ ಆಪಾದನೆಗೆ ಗುರಿಯಾಗಿ ಜಪಾನ್ ಸೈನಿಕರಿಂದ ಗುಂಡೇಟು ತಿಂದು ಕೊಲ್ಲಲ್ಪಡುತ್ತಾನೆ. ಇರ‍್ಕಮ್ಮ ಗಂಡ, ಮಗ ಹಾಗೂ ಮೊಮ್ಮಗನನ್ನು ಕಳೆದುಕೊಂಡು ಛಿದ್ರ ಹೃದಯಿಯಾಗಿ ತನ್ನ ಉಳಿದ ಜೀವನವನ್ನ ನಡೆಸುತ್ತಾಳೆ. ನಾಡಲ್ಲದ ನಾಡಲ್ಲಿ ಬಂದು ದುರಂತಗಳ ಸರಮಾಲೆಯನ್ನು, ಬದುಕನ್ನು ಎದುರಿಸಿದ ಈ ಹೆಣ್ಣುಮಗಳು ಯಾವ ರಾಣಿಯರಿಗಿಂತ ಕಡಿಮೆ ಛಲಗಾತಿ?.

ಅಲ್ಮೋರದಾ ಹೆಣ್ಣುಮಗಳು

ಸಾವಿರದ ಎಂಟುನೂರ ಅರವತ್ತೆಂಟರಲ್ಲಿ ಕೊಲೆಗಾರ್ತಿಯೆಂದು ಶಿಕ್ಷೆಗೊಳಗಾಗಿ ಪೋರ್ಟ್‌ಬ್ಲೇರ್‌ಗೆ ಬಂದ ಅಲ್ಮೋರದಾ ಹೆಣ್ಣುಮಗಳ ಕಥೆ ಹೃದಯ ವಿದ್ರಾವಕ. ಆಕೆ, ಎಳೇ ವಯಸ್ಸಿನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ತರುಣಿ. ಆಕೆ ತೆರೆದ ಬಾವಿಯ ಬಳಿ ತನ್ನ ಗೆಳತಿಯರೊಂದಿಗೆ ಆಟವಾಡುತ್ತಿದ್ದಾಗ, ಆಕೆಯಂತೆಯೇ ಅಲ್ಲಿ ಆಟವಾಡುತ್ತಿದ್ದ ಹುಡುಗಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ತೆರೆದ ಬಾವಿಯೊಳಗೆ ಬಿದ್ದು ಅಸುನೀಗುತ್ತಾಳೆ. ಆಕೆಗೂ ಮರಣವನ್ನಪ್ಪಿದ ಹುಡುಗಿಯ ಸಾವಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಆ ಇಬ್ಬರು ಹುಡುಗಿಯರ ತಂದೆಯಂದಿರ ನಡುವೆ ವೈಷಮ್ಯವಿರುತ್ತದೆ. ಹಾಗಾಗಿ ಆಕೆಯೇ ಈ ಸಾವಿಗೆ ಕಾರಣ ಎಂದು ಸುಳ್ಳು ಆಪಾದನೆಯನ್ನು ಹೊರಿಸಿ ಆಕೆಗೆ ಸೆರೆವಾಸವನ್ನು ವಿಧಿಸಲಾಗುತ್ತದೆ. ಆಕೆ ತನ್ನ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ, ತನ್ನಂತೆಯೇ ಖೈದಿಯಾಗಿದ್ದು ಶಿಕ್ಷೆ ಪೂರ್ಣಗೊಳಿಸಿದ್ದ ಮೌಲಾನ ಜಾಫರ್ ತನೆಸಾರಿಯನ್ನು ಮದುವೆಯಾಗುತ್ತಾಳೆ. ಬ್ರಿಟೀಷ್ ವಸಾಹತುಶಾಹಿ ಆಡಳಿತವು ಅನ್ಯಧರ್ಮೀಯರೊಂದಿಗೆ ವಿವಾಹವನ್ನು ನಿಷೇಧಿಸಿದ್ದರಿಂದ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನೆಸಾರಿಯನ್ನು ಮದುವೆಯಾಗುತ್ತಾಳೆ. ಅವರು ಮತ್ತೆ ಅಲ್ಮೋರಾಕ್ಕೆ ಹಿಂತಿರುಗಿ ತಮ್ಮ ಜೀವನ ನಡೆಸುತ್ತಾರೆ.

ಜೀವನಿ

ಜೀವನಿ ಪಂಜಾಬ್‌ನ್ ಆಮೃತಸರದಲ್ಲಿ ಸಂಸಾರ ಹೂಡಿದ್ದಳು. ಆಕೆಗೆ ಮನೆಕೆಲಸಗಳು ಮತ್ತು ತನ್ನ ಗಂಡ ಹಾಗೂ ಮಗುವೇ ಪ್ರಪಂಚ. ತಾಯಿ ಮನೆಗೆಲಸದಲ್ಲಿ ನಿರತಳಾಗಿದ್ದಾಗ ಮಗುವಿನ ಹಠ ಅಳು ತೂಗಿಸುವುದು ಸುಲಭವಲ್ಲ. ಅಳುವ ಮಕ್ಕಳನ್ನು ಇತರರು ಸಂಭಾಳಿಸುವ ರೀತಿಯನ್ನ ಆಕೆ ನೋಡಿ ಕಲಿತಿದ್ದಳು. ಆಗಿನ ಕಾಲದ ವಾಡಿಕೆಯೂ ಇದೇ ಆಗಿತ್ತು. ರಚ್ಚೆ ಹಿಡಿದ ಮಗುವನ್ನು ನಿದ್ರಿಸುವಂತೆ ಮಾಡಲು ತುಸುವೇ ತುಸು ಅಫೀಮನ್ನು ಮಗುವಿಗೆ ನೀಡಿದರಾಯಿತು. ತಾಯಿ ತನ್ನ ಕೆಲಸ ಮುಗಿಸುವವರೆಗೆ ಮಗು ಸುಖವಾಗಿ ನಿದ್ರಿಸುತ್ತದೆ. ಜೀವನಿಯೂ ಹಾಗೇ ತನ್ನ ಅಳುವ ಮಗುವನ್ನು ಸಂಭಾಳಿಸುತ್ತಿದ್ದಳು. ದುರಾದೃಷ್ಟವಶಾತ್ ಒಂದು ದಿನ ಆಕೆ ನೀಡಿದ ಅಫೀಮಿನ ಅಂಶ ಜಾಸ್ತಿಯಾಗಿ ಮಗು ಚಿರನಿದ್ರೆಗೆ ತೆರಳುತ್ತದೆ. ಮಗುವಿನ ಸಾವಿನ ದುಃಖದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾಳೆ. ಆಕೆಗರಿವಿಲ್ಲದೇ ತನ್ನ ಪುಟ್ಟ ವಯಸ್ಸಿನ ಭಾವನನ್ನು ಬಾವಿಗೆ ನೂಕುತ್ತಾಳೆ. ತಾನು ತಪ್ಪನ್ನು ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾಳೆ. ಆಕೆಯ ಪತಿ ಹಸನ್ ಆಲಿ ಈ ದುರಂತ ಘಟಿಸಿದ್ದು ಆಕೆಯ ಮಾನಸಿಕ ಸ್ಥಿತಿಯಿಂದ ಉಂಟಾದ ಆಕಸ್ಮಿಕವೆಂದು ವಾದಿಸಿದರೂ ಪ್ರಯೋಜನವಾಗದೇ ಆಕೆ ಕಾರಾಗೃಹದ ಪಾಲಾಗುತ್ತಾಳೆ. ಸ್ವಇಚ್ಛೆಯಿಂದ ಆಕೆ ಪೋರ್ಟ್‌ಬ್ಲೇರ್‌ನ ಕಾರಾಗೃಹಕ್ಕೆ ತೆರಳಲು ಒಪ್ಪುತ್ತಾಳೆ. ಆಕೆಯ ಶಿಕ್ಷಾವಧಿ ಪೂರ್ಣಗೊಂಡ ನಂತರ ಅಮೃತಸರಕ್ಕೆ ಹಿಂತಿರುಗಲು ಇಚ್ಛಿಸದೆ ಹಸನ್ ಆಲಿಯನ್ನು ಅಲ್ಲಿಗೆ ಬರಮಾಡಿಕೊಳ್ಳುತ್ತಾಳೆ. ಅವರು ಅಂಗಡಿಯನ್ನು ತೆರೆದು ವ್ಯಾಪಾರ ನಡೆಸಿ, ಸಮಾಜದಲ್ಲಿ ಅಂತಸ್ತು ಹಾಗೂ ಗೌರವ ಗಳಿಸುತ್ತಾರೆ. ತನ್ನ ಮಕ್ಕಳನ್ನು ನೀತಿಯುತವಾಗಿ ಹಾಗೂ ಮೌಲ್ಯಯುತವಾಗಿ ಬೆಳೆಸುವುದರಲ್ಲಿ ಸಫಲಳಾಗುತ್ತಾಳೆ. ಆಕೆಯ ಹಿರಿಯ ಮಗ ಫರ್ಜಾನ್ ಆಲಿ ಶ್ರಮಜೀವನದಿಂದ ಶ್ರೀಮಂತಿಕೆ ಗಳಿಸಿದ. ಆದರೆ ಎಂದೂ ಅಹಂ ಹೊಂದಲಿಲ್ಲ. ತನ್ನ ಸಂಪತ್ತನ್ನು ಬುದ್ಧಿವಂತಿಕೆಯಿಂದ ವಿನಿಯೋಗಿಸಿದವನು. ೧೯೩೩ ರಲ್ಲಿ ಫರ್ಜಾನ್ ಆಲಿ ಮಾರ್ಕೆಟನ್ನು ಸ್ಥಾಪಿಸಿ, ಅದರಿಂದ ಬಂದ ಲಾಭದಿಂದ ಟ್ರಸ್ಟೊಂದನ್ನು ಪ್ರಾರಂಭಿಸಿ ತನ್ನ ಟ್ರಸ್ಟ್ ಮೂಲಕ ದುರ್ಬಲ ವರ್ಗದ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುತ್ತಾನೆ. ಜಾತಿ, ಧರ್ಮ, ಇತ್ಯಾದಿಗಳನ್ನು ಗಮನಿಸದೇ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಇವರ ಸೇವೆಯನ್ನು ಗುರುತಿಸಿ ಸರಕಾರವು ಫರ್ಜಾನ್ ಆಲಿಗೆ ‘ಖಾನ್ ಸಾಹೇಬ್’ ಎಂಬ ಬಿರುದನ್ನು ನೀಡಿ ಗೌರವಿಸುತ್ತದೆ.

ಲಕ್ಷ್ಮೀ

ಆಕಸ್ಮಿಕ ಅವಘಡಗಳಿಂದ ಕಾರಾಗೃಹ ಸೇರಿದ ಹೆಣ್ಣು ಮಕ್ಕಳು ಕೆಲವರಾದರೇ ತಮ್ಮ ಗೌರವ ರಕ್ಷಣೆಗಾಗಿ ಅಪರಾಧಿಗಳಾದವರು ಹಲವರು. ಆಂಧ್ರಪ್ರದೇಶದ ಕಾಕಿನಾಡದ ಲಕ್ಷ್ಮೀಮೈಸೂರಿನ ವಾಸುದೇವರನ್ನು ವಿವಾಹವಾದಳು. ಆಕೆ ಸೌಂದರ್ಯದ ಖನಿ. ಈ ಸೌಂದರ್ಯವೇ ಆಕೆಗೆ ಮುಳುವಾಗಬಹುದೆಂದು ಆಕೆ ಯೋಚಿಸಿಯೇ ಇರಲಿಲ್ಲ. ಆಕೆಯ ಮೈದುನ ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಕಾಮುಕ ದೃಷ್ಟಿಯಿಂದ ನೋಡಲಾರಂಭಿಸುತ್ತಾನೆ. ಈ ವಿಷಯವನ್ನು ತನ್ನ ಗಂಡನಲ್ಲಿ ಹೇಳಲು ಧೈರ್ಯ ಸಾಲದೇ ತನ್ನ ಅತ್ತೆಯಲ್ಲಿ ಹೇಳುತ್ತಾಳೆ. ಆಕೆ ಸೊಸೆಯನ್ನೇ ಅನುಮಾನಿಸಿ ಕೋಪಗೊಂಡು ತನ್ನ ಮಗನ ಹಾಗೂ ಕುಟುಂಬದ ಗೌರವವನ್ನು ಹಾಳುಗೆಡಹುತ್ತೀಯ ಎಂದು ದೂಷಿಸುತ್ತಾಳೆ. ಒಂದು ದಿನ ಮನೆಯವರೆಲ್ಲ ಶ್ರೀಗಂಧ ತರಲೆಂದು ಹೊರಗೆ ಹೋಗಿರುತ್ತಾರೆ. ಮನೆಯಲ್ಲಿ ಆಕೆಯೊಬ್ಬಳೆ ಅಕ್ಕಿ ಕುಟ್ಟುತ್ತ ಮನೆಗೆಲಸದಲ್ಲಿ ತಲ್ಲೀನಳಾಗಿರುತ್ತಾಳೆ. ಆಕೆಯೊಬ್ಬಳೇ ಇರುವುದನ್ನು ತಿಳಿದಿದ್ದ ಆಕೆಯ ಮೈದುನ ಅವಳ ಮೇಲೆರಗುವ ಪ್ರಯತ್ನ ಮಾಡಿದಾಗ ತನ್ನ ಕೈಯಲ್ಲಿದ್ದ ಕಬ್ಬಿಣದ ಒನಕೆಯಿಂದ ಆತನ ತಲೆಗೆ ಹೊಡೆಯುತ್ತಾಳೆ. ಆತ ಸಾವಿಗೀಡಾಗುತ್ತಾನೆ. ಕಾನೂನಿನ ದೃಷ್ಟಿಯಲ್ಲಿ ಆಕೆ ಅಪರಾಧಿ, ಆದರೆ ವಾಸುದೇವನಿಗೆ ಆಕೆಯ ಸ್ಥಿತಿ ಅರ್ಥವಾಗುತ್ತದೆ. ಆತನ ಪ್ರಕಾರ ಆಕೆ ಅಪರಾಧಿಯಲ್ಲ. ಆಕೆಗೆ ಶಿಕ್ಷೆಯಾಗುತ್ತದೆ. ಹಲವು ಮಹಿಳಾ ಖೈದಿಗಳು ಪೋರ್ಟ್‌ಬ್ಲೇರ್‌ನ ಸೆರೆಮನೆಗೆ ಸ್ಥಳಾಂತರಗೊಂಡಾಗ ಆಕೆಯು ತನ್ನ ಸ್ಥಳಾಂತರಕ್ಕೆ ಸಮ್ಮತಿ ಸೂಚಿಸುತ್ತಾಳೆ. ತನ್ನ ಶಿಕ್ಷಾವಧಿ ಮುಗಿದ ನಂತರ ಹಿಂತಿರುಗಿ ತನ್ನೂರಿಗೆ ಬರಲು ಇಚ್ಛಿಸದೆ, ವಾಸುದೇವರನ್ನು ದ್ವೀಪಕ್ಕೇ ಬರಮಾಡಿಕೊಳ್ಳುತ್ತಾಳೆ. ತದನಂತರದಲ್ಲಿ ಆಕೆ ಐದು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ತಾಯಿಯಾಗುತ್ತಾಳೆ. ತನ್ನ ಸಂಸಾರದೊಂದಿಗೆ ಗೌರವಯುತ ಬದುಕನ್ನು ಆಕೆ ಸಂಪಾದಿಸುವಲ್ಲಿ ಸಫಲಳಾಗುತ್ತಾಳೆ. ಆಕೆಯ ಮೊಮ್ಮಗ ಶ್ರೀ ಕೆ. ಆರ್. ಗಣೇಶ್ ಶ್ರೀಮತಿ ಇಂದಿರಾ ಗಾಂಧಿಯವರ ಕ್ಯಾಬಿನೆಟ್‌ನಲ್ಲಿ ಇಂಧನ ಹಾಗೂ ರಾಸಾಯನಿಕ ಮಂತ್ರಿಯಾಗಿ ಸೇವೆ ಸಲ್ಲಿಸಿದಂತಹ ವ್ಯಕ್ತಿಯಾಗಿ ಚರಿತ್ರೆಯಲ್ಲಿ ದಾಖಲಾಗಿದ್ದಾರೆ.

ಗೌರ

ಈಗ ಉತ್ತರಪ್ರದೇಶವಾಗಿರುವ ಅಂದಿನ ಯುನೈಟೆಡ್ ಪ್ರಾವಿನ್ಸ್ ನ ಸೀತಾಪುರದ ಗೌರಳ ಕಥೆ ಉಳಿದವರಿಗಿಂತ ತುಸು ಭಿನ್ನ. ಆಕೆ ತನ್ನ ಗಂಡನ ಆಪ್ತ ಸ್ನೇಹಿತನನ್ನ ಕೊಲೆಗೈಯುತ್ತಾಳೆ. ಗೌರ ಗಟ್ಟಿಗಿತ್ತಿ ರಜಪೂತ ಹೆಣ್ಣುಮಗಳು. ಕೂಡು ಕುಟುಂಬದಲ್ಲಿ ಅತ್ತೆ, ಮಾವ, ಗಂಡ, ಮಗನೊಂದಿಗೆ ಆಕೆಯ ಜೀವನ. ಉಳಿದ ಕೈದಿಗಳಂತೆ/ಅಪರಾಧಿಗಳಂತೆ ಎಳೆಹರೆಯದವಳಲ್ಲ. ನಡುವಯಸ್ಸಿನವಳು. ನಲ್ವತ್ತರ ಆಸುಪಾಸು ಎನ್ನಬಹುದು. ಆಕೆಯ ಗಂಡನ ಆಪ್ತ ಸ್ನೇಹಿತನಿಗೆ ಕುಟುಂಬದೊಡನೆ ಹಲವಾರು ವರ್ಷಗಳ ಸಂಪರ್ಕ, ಬಾಂಧವ್ಯ. ಮನೆಯವರಲ್ಲಿ ಒಬ್ಬನೆನ್ನುವಷ್ಟು ಸಲುಗೆ, ಸ್ವಾತಂತ್ರ್ಯವಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಆತ ಗೌರಳೊಡನೆ ಆಗಾಗ್ಗೆ ಸಭ್ಯತೆಯ ಎಲ್ಲೆ ಮೀರಲು ಪ್ರಾರಂಭಿಸುತ್ತಾನೆ. ಆಕೆ ಅವನಿಗೆ ಸಭ್ಯವಾಗಿಯೇ ಹದ್ದು ಮೀರದಂತೆ ಎಚ್ಚರಿಸುತ್ತಾಳೆ, ಗದರುತ್ತಾಳೆ. ಆತ ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಒಂದು ರಾತ್ರಿ ಆತ ಅವರ ಮನೆಯ ಅಂಗಣದಲ್ಲಿ ನಿದ್ರಿಸುತ್ತಿದ್ದಾಗ ಗೌರ ಹರಿತ ಕತ್ತಿಯಿಂದ ಆತನ ಕುತ್ತಿಗೆ ಸೀಳುತ್ತಾಳೆ. ನಂತರ ಮನೆಯವರನ್ನೆಲ್ಲ ಎಬ್ಬಿಸಿ ತಾನು ಕೊಲೆ ಮಾಡಿದುದನ್ನು ತಿಳಿಸುತ್ತಾಳೆ. ಇತರರಿಗೆ ಇದು ತಿಳಿಯದಿರುವ ಕಾರಣ ಕುಟುಂಬದವರು ಈ ವಿಷಯವನ್ನು  ಗುಟ್ಟಾಗಿಡುವ ಎಂದು ತೀರ್ಮಾನಿಸುತ್ತಾರೆ. ಆದರೆ ಗೌರ ಅದಕ್ಕೆ ಸಮ್ಮತಿಸುವುದಿಲ್ಲ. ಆತನ ತಪ್ಪಿಗೆ ಆತನನ್ನು ನಾನು ಶಿಕ್ಷಿಸಿದ್ದೇನೆ. ನನ್ನ ಅಪರಾಧಕ್ಕೂ ಶಿಕ್ಷೆಯಾಗಲೇ ಬೇಕೆಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾಳೆ. ತನ್ನ ಮಗ ಬಾಲಕರಣನ ಬಗ್ಗೆಯೂ ಚಿಂತಿಸುವುದಿಲ್ಲ. ಆಕೆಗೆ ಜೈಲುವಾಸ ವಿಧಿಸಲಾಗುತ್ತದೆ. ಆಕೆ ಸ್ವಇಚ್ಚೆಯಿಂದ ಪೋರ್ಟ್‌ಬ್ಲೇರ್‌ ಕಾರಾಗೃಹದಲ್ಲಿರುತ್ತಾಳೆ. ಶಿಕ್ಷಾವಧಿ ಮುಗಿದ ನಂತರ ಊರಿಗೆ ಹಿಂತಿರುಗುವುದಿಲ್ಲ. ತನ್ನಂತೆಯೇ ಖೈದಿಯಾಗಿದ್ದು ನಂತರದಲ್ಲಿ ಸ್ವತಂತ್ರನಾದ ಗುಲಾಬ್ ಸಿಂಗ್ ಕಂಡೆಲನನ್ನು ಮದುವೆಯಾಗುತ್ತಾಳೆ. ತನ್ನ ಜೀವಿತದ ಕೊನೆಯ ದಿನಗಳನ್ನು ದೇವಸ್ಥಾನದಲ್ಲಿ ಕಳೆಯುತ್ತಾಳೆ.

ಜೀವನಿ, ಗೌರ, ಲಕ್ಷ್ಮೀ, ಇರ‍್ಕಮ ಮತ್ತು ಇಲ್ಲಿ ಹೆಸರಿಸದ ಇನ್ನೊಂದಷ್ಟು ಹೆಣ್ಣುಮಕ್ಕಳ ಕಣ್ಣೀರು ಪೋರ್ಟ್‌ಬ್ಲೇರ್‌ನ ಸಾಗರದಲ್ಲಿ ಕಡಲತೀರದ ಬೆಣ್ಣೆಯ ಮರಳಲ್ಲಿ ಉಪ್ಪಿನ ಹರಳಾಗಿದೆ. ಹತ್ತೊಂಬತ್ತನೆಯ ಶತಮಾನದ ಕೊನೆ ಹಾಗೂ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸಮಾಜದ, ಕಾನೂನಿನ ಕೈಗನ್ನಡಿಯಾದ ಇವರು ಅಸಹಾಯಕರಾದರೂ ಗಟ್ಟಿ ಗಿತ್ತಿಯರು, ಛಲಗಾತಿಯರು ಛಾತಿಯಿಂದ ಕತ್ತಲೆಯನ್ನ ಎದುರಿಸಿ ಹಿರಿದವರು. ಆತ್ಮಹತ್ಯೆಗೆ ಶರಣಾಗದೇ ಚದುರಿ ಹೋದ, ದುರ್ಬಲ ದಾರಗಳ ತುಂಡುಗಳನ್ನೇ ಆಯ್ದು, ತಮಗೆ ತೋಚಿದಂತೆ ನೇಯ್ದು ಬದುಕ ಬಟ್ಟೆಯನ್ನ ತೊಟ್ಟವರು.

ಇತಿಹಾಸದ ಬಗೆಗೆ ಚಾಲ್ತಿಯಲ್ಲಿರುವ ರಮ್ಯ, ರುದ್ರ ಕಥಾನಕಗಳು ಮೇಲೆ ಹೇಳಿದ ಸಾಮಾನ್ಯರು, ತಮ್ಮ ಬದುಕಿನ ಉಳಿವಿಗೆ ನಡೆಸುವ ಹೋರಾಟಗಳನ್ನು ಒಳಗೊಂಡಿರುವುದು ಕಡಿಮೆ. ಇಂದು ಇತಿಹಾಸವನ್ನು ಮರು ಓದುವ, ಮರು ಸಂದರ್ಶಿಸುವ ಉತ್ಸಾಹ ಕಂಡು ಬರುತ್ತದೆ. ಇಂತಹ ಮರು ಓದು, ಮರು ಸಂದರ್ಶನ ಯಾವ ಕಡೆಗಿದೆ? ಎನ್ನುವುದು ಒಂದು ಪ್ರಶ್ನೆಯಾದರೆ, ಇತಿಹಾಸದ ಎಲ್ಲಾ ಕೋನಗಳನ್ನು ನೋಡುವುದು ಎಂದಿಗಾದರೂ ಪೂರ್ಣವಾಗಬಹುದೇ? ಅಥವಾ ಇಂತಹ ಪ್ರಯತ್ನ ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಲು ನೀಡಬಹುದಾದ ಕೊಡುಗೆಯಾದರೂ ಏನು ಎನ್ನುವ ಕುರಿತು ವಿವೇಕಯುತವಾಗಿ ಯೋಚಿಸುವುದು ಅಗತ್ಯ ಎನ್ನುವುದು ನನ್ನ ಮನದಿಂಗಿತ.

ರಾಜಲಕ್ಷ್ಮಿ ಎನ್‌ ಕೆ

ನಿವೃತ್ತ ಉಪನ್ಯಾಸಕರು

ಇದನ್ನೂ ಓದಿ-“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

Related Articles

ಇತ್ತೀಚಿನ ಸುದ್ದಿಗಳು