ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕದ ಪಡೆಗಳು ಅಪಹರಿಸಿದ ರೀತಿಯನ್ನೇ ಖಂಡಿಸಿರುವ ಕೊಲಂಬಿಯಾ ಅಧ್ಯಕ್ಷ ಪೆಟ್ರೊ, “ಬಂದು ನನ್ನನ್ನು ಬಂಧಿಸು, ನಾನು ನಿನಗಾಗಿ ಕಾಯುತ್ತಿದ್ದೇನೆ” ಎಂದು ಡೊನಾಲ್ಡ್ ಟ್ರಂಪ್‌ಗೆ ನೇರ ಸವಾಲು ಎಸೆದಿದ್ದಾರೆ. ಅಮೆರಿಕದ ಇಂತಹ ಕ್ರಮಗಳು ಸಾರ್ವಭೌಮ ರಾಷ್ಟ್ರಗಳ ಮೇಲೆ ನಡೆಸುವ ದೌರ್ಜನ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಅಮೆರಿಕ ಕೊಲಂಬಿಯಾದ ಮೇಲೆ ದಾಳಿ ಮಾಡಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೆಟ್ರೊ ಎಚ್ಚರಿಸಿದ್ದಾರೆ. “ನಿಮ್ಮ ಬಳಿ ಬಾಂಬ್‌ಗಳಿದ್ದರೆ, ನಮ್ಮ ಬೆಟ್ಟಗಳಲ್ಲಿ ಸಾವಿರಾರು ಗೆರಿಲ್ಲಾ ಹೋರಾಟಗಾರರು ಹುಟ್ಟಿಕೊಳ್ಳುತ್ತಾರೆ. ಜನರು ಪ್ರೀತಿಸುವ ಮತ್ತು ಗೌರವಿಸುವ ಅವರ ಅಧ್ಯಕ್ಷರನ್ನು ಬಂಧಿಸಲು ಬಂದರೆ, ಪ್ರತಿಯೊಬ್ಬ ನಾಗರಿಕನೂ ಚಿರತೆಯಂತೆ ನಿಮ್ಮ ಮೇಲೆರಗುತ್ತಾನೆ” ಎಂದು ಅವರು ಗುಡುಗಿದ್ದಾರೆ.
ಇನ್ನೊಂದೆಡೆ, ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷರ ಭವನದ ಸಮೀಪ ಸೋಮವಾರ ರಾತ್ರಿ ಭಾರಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಸೈನ್ಯವು ನಿರ್ಬಂಧಿಸಿದ ಎರಡು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಲ್ಲಿನ ಸರ್ಕಾರಿ ಮೂಲಗಳು ತಿಳಿಸಿವೆ.
