ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ JNU ನ ಒಂದು ಗುಂಪಿನ ವಿದ್ಯಾರ್ಥಿಗಳು ಉಮರ್ ಖಾಲಿದ್ ಮತ್ತು ಶರ್ಜೀಲ್ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಆಂದೋಲನ ನಡೆಸಿದರು. ಈ ವೇಳೆ ದೇಶವಿರೋಧಿ ಘೋಷಣೆಗಳು ಕೇಳಿಬಂದಿವೆ ಎಂದು ಆರೋಪಿಸಿ ಎಬಿವಿಪಿ (ABVP) ಕಾರ್ಯಕರ್ತರು ಪ್ರತಿಭಟನೆಯನ್ನು ತಡೆದರು. ಇದರಿಂದ ಉಭಯ ಸಂಘಟನೆಗಳ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ಘರ್ಷಣೆ ಉಂಟಾಗಿ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ವೈಭವ್ ಮೀನಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಆರೋಪಿಗಳ ಪರವಾಗಿ ಘೋಷಣೆ ಕೂಗುವುದು ನಾಚಿಕೆಗೇಡಿನ ಸಂಗತಿ ಮತ್ತು ಇದು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನ. ಇಂತಹ ಕೃತ್ಯಗಳಿಂದ ವಿಶ್ವವಿದ್ಯಾಲಯದ ಘನತೆ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ, ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಸಾಕ್ಷ್ಯಾಧಾರಗಳಿರುವುದರಿಂದಲೇ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.
ಮತ್ತೊಂದೆಡೆ, ಜೆಎನ್‌ಯು ವಿದ್ಯಾರ್ಥಿ ನಾಯಕಿ ಅದಿತಿ ಮಿಶ್ರಾ ಈ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಪ್ರತಿ ವರ್ಷ ನಾವು ದೆಹಲಿ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ. ಈಗ ನಡೆದಿರುವುದು ಸೈದ್ಧಾಂತಿಕವಾಗಿ ನಡೆಯುವ ಸಾಮಾನ್ಯ ಪ್ರತಿಭಟನೆಗಳೇ ಹೊರತು, ನಿರ್ದಿಷ್ಟವಾಗಿ ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
