ಬರ್ಮಿಂಗ್ ಹ್ಯಾಮ್: ಹತ್ತು ಕಿ.ಮಿ. ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ ಮತ್ತು ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದು ಕೊಂಡಿದ್ದಾರೆ. ಪ್ರಿಯಾಂಕ ಉತ್ತರ ಪ್ರದೇಶದವರು.
ಪ್ರಿಯಾಂಕ ಗೋಸ್ವಾಮಿಯವರು ಕಾಮನ್‌ವೆಲ್ತ್ ಕೂಟದಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಅವರು 43ನಿಮಿಷ 38 ಸೆಕೆಂಡ್ಸ್ ನಲ್ಲಿ ಗುರಿ ತಲಪಿದರು. ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ 42ನಿಮಿಷ 34ಸೆಕೆಂಡ್ಸ್‌ನಲ್ಲಿ ಗುರಿ ತಲಪಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಕೀನ್ಯಾದ ವಮುಸ್ಯಿ ಎನ್‌ಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಪುರುಷರ ಸ್ಟೀಪಲ್ ಚೇಸ್ ಪಂದ್ಯದಲ್ಲಿ ಭಾರತದ ಅವಿನಾಶ ಮುಕುಂದ್ ಸಬ್ಲೆ ಅವರು ಬೆಳ್ಳಿ ಪದಕ ಜಯಿಸಿದ್ದಾರೆ. 3,000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ರಾಷ್ಟ್ರೀಯ ದಾಖಲೆಯನ್ನು 9ನೇ ಬಾರಿಗೆ ಮುರಿದು 8.11.20 ರಲ್ಲಿ ಗುರಿ ತಲಪಿದರು. ಆ ಮೂಲಕ ಭಾರತದ ಮೊತ್ತ ಮೊದಲ ಸ್ಟೀಪಲ್ ಚೇಸ್ ಪದಕವನ್ನು ಜಯಿಸಿದರು.
ಇದೀಗ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದೆ. ಭಾರತ ಇದುವರೆಗೆ ಒಟ್ಟು ಒಂಭತ್ತು ಚಿನ್ನ, ಹತ್ತು ಬೆಳ್ಳಿ ಮತ್ತು ಒಂಭತ್ತು ಕಂಚಿನ ಪದಕ ಗೆದ್ದುಕೊಂಡಿದೆ.