ಬರ್ಮಿಂಗ್‌ಹ್ಯಾಮ್: ಇಂದು (ಶನಿವಾರ) ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ವೇಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿದ್ದು ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ವೇಟ್ ಲಿಪ್ಟಿಂಗ್‌ನಲ್ಲಿ ಒಟ್ಟು 248 ಕೆಜಿ ಎತ್ತುವುದರ ಮೂಲಕ ಸಂಕೇತ್ ಸರ್ಗರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದು,ಕಾಮನ್ ವೆಲ್ತ್ ಗೇಮ್ 2022ರಲ್ಲಿ ಭಾರತ ಬೆಳ್ಳಿಯೊಂದಿಗೆ ತನ್ನ ಖಾತೆ ತೆಗೆಯುವಂತೆ ಮಾಡಿದ್ದಾರೆ.
ಸ್ನ್ಯಾಚ್‌ನಲ್ಲಿ 113 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 135 ಕೆಜಿ ಎತ್ತಿದ ಸಂಕೇತ್, ಕ್ಲೀನ್ ಮತ್ತು ಜರ್ಕ್ ನ ಕೊನೆಯ ಎರಡು ಪ್ರಯತ್ನಗಳಲ್ಲಿ ಅವರು ವಿಫಲರಾದರು. ಮೊದಲ ಪ್ರಯತ್ನದಲ್ಲಿ 107 ಕೆಜಿ ಮತ್ತು ಎರಡನೇ ಪ್ರಯತ್ನದಲ್ಲಿ 111 ಕೆಜಿ ಎತ್ತಿದ್ದು, ಮೂರನೇ ಯತ್ನದಲ್ಲಿ 113 ಕೆ.ಜಿ ಭಾರ ಎತ್ತುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ ಸರ್ಗರ್ 135 ಭಾರ ಎತ್ತಿದರೆ, ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ ಅವರು 139 ಕೆಜಿ ತೂಕ ಎತ್ತುವ ಪ್ರಯತ್ನದಿಂದ ಹಿಂದೆ ಸರಿದರು. ಆದರೆ ಮಲೇಷ್ಯಾ ಆಟಗಾರ ಕೊನೆಯ ಪ್ರಯತ್ನದಲ್ಲಿ 142 ಕೆಜಿ ಭಾರ ಎತ್ತಿದರು. ಕೊನೆಗೆ ಸ್ನ್ಯಾಚ್‌ನಲ್ಲಿ ಮಲೇಷ್ಯಾದ ಬಿನ್ 107 ಕೆಜಿ ಭಾರ ಎತ್ತಿದರು. ಹೀಗಾಗಿ ಸರ್ಗರ್ ಒಟ್ಟು 248 ಕೆಜಿ ಎತ್ತಿದರೆ, ಮಲೇಷ್ಯಾದ ಬಿನ್ ಕಸ್ದನ್ ಒಟ್ಟು 249 ಕೆಜಿ ಎತ್ತಿ, ಒಂದು ಕಿಲೋ ತೂಕದ ಅಂತರದಿಂದ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.