ಓಕದಿನ ಸರಣಿಯಲ್ಲಿ ತವರಿನಲ್ಲೇ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ, ಟಿ 20 ಸರಣಿಯ ಆರಂಭಿಕ ಪಂದ್ಯದಲ್ಲೂ ಮುಗ್ಗರಿಸಿದೆ. ಯಾಕೋ ಈ ಸರಣಿಯಲ್ಲಿ ವಿಂಡೀಸ್ ಪಾಲಿಗೆ ಗೆಲುವು ಅನ್ನೋದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 68 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ವಿಂಡೀಸ್ ಗೆ ಭಾರತದ ಬ್ಯಾಟ್ಸ್ ಮನ್ ಗಳು ತಿರುಗೇಟು ಕೊಟ್ಟರು. ಭಾರತ 6 ವಿಕೆಟ್‌ಗೆ 190 ರನ್ ಗಳಿಸಿತು, ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಗಳಿಸಿದರೆ, ಎಂದಿನಂತೆ ಫಿನಿಷರ್ ಆಗಿ ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಅಲಜಾರಿ ಜೋಸೆಫ್ 46 ರನ್ನಿಗೆ 2 ವಿಕೆಟ್ ಕಬಳಿಸಿದರೆ, ಎಡಗೈ ಸ್ಪಿನ್ನರ್ ಅಕೆಲ್ ಹೊಸೆನ್ 4 ಓವರ್‌ಗಳಲ್ಲಿ 14 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಭಾರತ ತನ್ನ ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಅನ್ನು, ಭಾರತದ ಸ್ಪಿನ್ ಬೋಲರ್ ಗಳು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್‌ಗಳಿಗೆ ಸೀಮಿತಗೊಳಿಸಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಬಂದ ವಿಂಡೀಸ್ ತಂಡಕ್ಕೆ ಯಾವ ಹಂತದಲ್ಲೂ ಜೊತೆಯಾಟಗಳು ಸಿಗಲೇ ಇಲ್ಲ. ಪೂರನ್, ಪೊವೆಲ್, ಶಿಮ್ರಾನ್ ಹೆಟ್ಮೇಯರ್ ಭರವಸೆ ಮೂಡಿಸಿದರೂ ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಭುವಿ ಮತತು ಜಡೇಜಾ ತಲಾ ಒಂದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಪರ ಶಿಮಾರೋ ಬ್ರೂಕ್ಸ್ 20 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದರು. ಎರಡನೇ ಟಿ 20 ಪಂದ್ಯ ಆಗಸ್ಟ್ 1ರಂದು ನಡೆಯಲಿದೆ.