ಸುಲ್ತಾನ್‌ಪುರ (ಯುಪಿ): ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದ ವೇಳೆ ಬಿಆರ್ ಅಂಬೇಡ್ಕರ್ ಅವರ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸುಲ್ತಾನ್‌ಪುರದ ಸಂಸದ-ಶಾಸಕರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ವಿಶೇಷ ಮ್ಯಾಜಿಸ್ಟ್ರೇಟ್ ಶುಭಂ ವರ್ಮಾ ಅವರು ಪ್ರಕರಣದ ವಿಚಾರಣೆಯನ್ನು ಜನವರಿ 15ಕ್ಕೆ ನಿಗದಿಪಡಿಸಿದ್ದಾರೆ ಎಂದು ಫಿರ್ಯಾದಿ ಪರ ವಕೀಲರು ತಿಳಿಸಿದ್ದಾರೆ.
ಶಾ ಅವರ ಹೇಳಿಕೆಯು “ತೀವ್ರ ಆಕ್ಷೇಪಾರ್ಹ” ಮತ್ತು “ಕೋಟ್ಯಂತರ ಜನರ ಭಾವನೆಗಳನ್ನು ಘಾಸಿಗೊಳಿಸಿದೆ” ಎಂದು ಬಂಕೇಪುರ ಸರಯ್ಯ ಮೂಲದ ದೂರುದಾರರಾದ ರಾಮ್ ಖೇಲಾವನ್ ಹೇಳಿದ್ದಾರೆ.
ಡಿಸೆಂಬರ್ 17, 2024ರಂದು ಲೋಕಸಭೆಯ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡಾ.ಭೀಮರಾವ್ ಅಂಬೇಡ್ಕರ್ ಅವರ ಬಗ್ಗೆ ಪ್ರತಿಕ್ರಿಯಿಸಿ, ‘ಅಂಬೇಡ್ಕರ್-ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿದೆ, ಅದರ ಬದಲು ಅಷ್ಟೇ ಬಾರಿ ದೇವರ ಹೆಸರು ಹೇಳಿದ್ದರೆ ಅವರೆಲ್ಲ ಸ್ವರ್ಗಕ್ಕಾದರೂ ಹೋಗುತ್ತಿದ್ದರು’ ಎಂದು ಅಮಿತ್ ಶಾ ಸದನದಲ್ಲಿ ಹೇಳಿದ್ದರು.
ಲಕ್ಷಾಂತರ ಬಡ ಕಾರ್ಮಿಕರು ದೇವರೆಂದು ಪರಿಗಣಿಸುವ ಅಂಬೇಡ್ಕರ್ ಅವರ ವಿರುದ್ಧದ ಈ ಮಾತು ಆಕ್ಷೇಪಾರ್ಹ ಎಂದು ದೂರುದಾರ ಹೇಳಿದ್ದಾರೆ.
ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ, ಹೀಗಾಗಿ ರಾಮಖೇಲಾವನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರ ವಕೀಲ ಜೈಪ್ರಕಾಶ್ ಹೇಳಿದ್ದಾರೆ.