ಬೆಂಗಳೂರು : ಮುಂಗಾರು ಮಳೆ ( monsoon rain ) ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ(bengaluru) ಎದುರಾಗಿರುವ ಕುಡಿಯುವ ನೀರಿನ ಅಭಾವವನ್ನು ತಡೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಠಿಣ ಕ್ರಮಗಳಿಗೆ ಮುಂದಾಗಿದೆ.
ನಗರದಲ್ಲಿ ಕುಡಿಯುವ ನೀರಿನ ಅನಗತ್ಯ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಜಲಮಂಡಳಿಯ ನೂತನ ಆದೇಶದಂತೆ, ಕುಡಿಯುವ ನೀರನ್ನು ಬಳಸಿ ಕಾರು ಹಾಗೂ ಬೈಕ್ ಸಹಿತ ಯಾವುದೇ ವಾಹನಗಳನ್ನು ತೊಳೆಯುವುದು, ಉದ್ಯಾನವನಗಳಿಗೆ ನೀರು ಹಾಯಿಸುವುದು, ರಸ್ತೆ ಅಥವಾ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಈಜುಕೊಳಗಳಿಗೆ ತುಂಬಿಸುವುದು ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ಕೆಲಸಗಳಿಗೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು.
ಆದೇಶವನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ದುರುಪಯೋಗಪಡಿಸಿಕೊಂಡರೆ 5,000 ರೂಪಾಯಿ ದಂಡ ವಿಧಿಸಲಾಗುವುದು. ಉಲ್ಲಂಘನೆ ಮುಂದುವರಿದರೆ ಪ್ರತಿದಿನ 500 ರೂಪಾಯಿ ಹೆಚ್ಚುವರಿ ದಂಡ ಹಾಗೂ ಆ ಕಟ್ಟಡಕ್ಕೆ ನೀಡಲಾಗುವ ನೀರಿನ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ನೀರು ಉಳಿತಾಯದ ನಿಟ್ಟಿನಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ನಲ್ಲಿಗಳಿಗೆ ‘ವಾಟರ್ ಫ್ಲೋ ರೆಸ್ಟ್ರಿಕ್ಟರ್’ ಅಥವಾ ‘ಏರೇಟರ್’ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಬಳಸುವುದರಿಂದ ದಿನನಿತ್ಯ ಶೇಕಡಾ 30 ರಿಂದ 50 ರಷ್ಟು ನೀರಿನ ವ್ಯರ್ಥವನ್ನು ತಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
