ಬೆಂಗಳೂರು : ಮೇಕೆದಾಟು ಅಣೆಕಟ್ಟು (Mekedatu project) ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ರೈತರು (Farmers protest) ಕೋಳಿ ಹಾಗೂ ಮಸಾಲೆ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, “ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಹೇಳಿಯೇ ಅಧಿಕಾರಕ್ಕೆ ಬಂದವರು, ಈಗ ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳದೆ ಮೀನ ಮೇಷ ಎಣಿಸುತ್ತಿದ್ದಾರೆ. ಈಗಾಗಲೇ ಸರ್ಕಾರದ 3 ವರ್ಷಗಳ ಅವಧಿ ಪೂರ್ಣಗೊಂಡಿದ್ದು, ಉಳಿದ 2 ವರ್ಷಗಳಲ್ಲಿ ಅಣೆಕಟ್ಟು ನಿರ್ಮಿಸುತ್ತಾರೋ ಇಲ್ಲವೋ ಎಂಬ ದೊಡ್ಡ ಆತಂಕ ರೈತರಲ್ಲಿ ಮೂಡಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಕೋಳಿ ಮತ್ತು ಮಸಾಲೆ ಪ್ರದರ್ಶಿಸಿ ಪ್ರತಿಭಟನೆ ಏಕೆ?
ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಯು ರಾಜ್ಯದ ಪರವಾಗಿದ್ದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಅಣೆಕಟ್ಟು ಕಟ್ಟಲು ಹಸಿರು ನಿಶಾನೆ ತೋರಿವೆ. ಇಷ್ಟಾದರೂ ಮೇಕೆದಾಟು ಅಣೆಕಟ್ಟು ಕಟ್ಟಲು ಮುಂದಾಗದ ರಾಜ್ಯ ಸರ್ಕಾರ ಕಾಲಹರಣ ಮಾಡಿದ್ದಾರೆ. ಯಾವುದೇ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರದ ರಾಜ್ಯ ಸರ್ಕಾರವು ಸಮಸ್ಯೆಗೆ ಮಸಾಲೆಯನ್ನೇ ಅರೆಯುತ್ತಿಲ್ಲ. ಈ ಕಾರಣದಿಂದಲೇ ಪ್ರತಿಭಟನೆಯಲ್ಲಿ ಕೋಳಿಗಳನ್ನು ಹಾಗೂ ಮಸಾಲೆಯನ್ನು ತೋರಿಸಿ ರಾಜ್ಯ ಸರ್ಕಾರದ ಗಮನ ಸೆಳೆಯಲಾಯಿತು ಎಂದು ತಿಳಿಸಿದರು.
ನಮ್ಮಲ್ಲೇ ಜಲವನ್ನು ಸಂರಕ್ಷಿಸಬೇಕು. ಸಮುದ್ರಕ್ಕೆ ಪೋಲಾಗಿ ಹರಿದು ಹೋಗುವ ನೀರನ್ನು ಶೇಖರಣೆ ಮಾಡಿ ಅಣೆಕಟ್ಟನ್ನು ನಿರ್ಮಿಸಲು ತಮಿಳುನಾಡಿನ ಅನುಮತಿ ಬೇಕಾಗಿಲ್ಲ ಎಂಬುದನ್ನು ಸರ್ಕಾರ ತೋರಿಸಬೇಕು ಎಂಬುದು ನಮ್ಮ ಒತ್ತಾಯ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಮ್ ಪಾಷ ಪಟ್ಟರೆಡ್ಡಿಪಾಳ್ಯ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹೊಸದುರ್ಗ, ಮುಖಂಡರಾದ ಶ್ರೀನಿವಾಸ್ ಇನ್ನಿತರರು ಪಾಲ್ಗೊಂಡಿದ್ದರು.
