ಹಾಸನ : ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಟಿಇಎಸ್) ಆಡಳಿತ ಮಂಡಳಿಯ ಸಭೆಯಲ್ಲಿ ಭಾರೀ ಗೊಂದಲ ಉಂಟಾಗಿ, ಹಾಲಿ ಅಧ್ಯಕ್ಷ ಆರ್.ಟಿ. ದೇವೇಗೌಡರ ನೇತೃತ್ವದ ತಂಡ ಸೋಲು ಅನುಭವಿಸಿದೆ. ನಮ್ಮ ಬಣವು ಬಹುಮತದಿಂದ ಗೆಲುವು ಸಾಧಿಸಿದೆ. ಈ ಕುರಿತಂತೆ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ಇಂದಿನ ಸಭೆಯಲ್ಲಿ ಹಾಲಿ ಅಧ್ಯಕ್ಷರ ವಿರುದ್ಧ ನಾವು ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ. ಆದರೆ ಅವರೆ ಸ್ವತಃ ಅಧ್ಯಕ್ಷತೆ ವಹಿಸಿಕೊಂಡಿದ್ದರು. ‘ನಿಮ್ಮ ವಿರುದ್ಧವೇ ಅವಿಶ್ವಾಸ ಮಂಡನೆ ಇರುವಾಗ, ನೀವು ಸಭೆ ನಡೆಸಲು ಸಾಧ್ಯವಿಲ್ಲ’ ಎಂದು ನಾವು ತಿಳಿಸಿದ್ದೇವೆ. ಅದಕ್ಕೆ ಅವರು ಒಪ್ಪದೆ ಸಭೆ ಮುಂದುವರಿಸಿದರು. ಇನ್ನು ಮೂವರನ್ನು ಅವರು ಮೊದಲು ಅಮಾನತು ಮಾಡಿದ್ದರು. ಆದರೆ ಅಧ್ಯಕ್ಷರಿಗಾಗಲಿ, ಕಾರ್ಯದರ್ಶಿಗಾಗಲಿ ಸಸ್ಪೆಂಡ್ ಮಾಡುವ ಅಧಿಕಾರವಿಲ್ಲ. ಕಾರ್ಯಕಾರಿ ಸಭೆಯಲ್ಲಿ ಮಾತ್ರ ಅಂತಹ ನಿರ್ಣಯ ಸಾಧ್ಯ. ಆದ್ದರಿಂದ ಅವರ ಅಮಾನತು ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ” ಎಂದು ಆರೋಪಿಸಿದರು. ಚುನಾವಣೆಯಲ್ಲಿ ನಾವು ಗೆದ್ದು ಅಧಿಕಾರಕ್ಕೆ ಬಂದ ನಂತರ, ೧೫-೨೦ ವರ್ಷ ಹಳೆಯ ಪ್ರಕರಣದ ಆಧಾರದ ಮೇಲೆ ಈಗ ಅಮಾನತು ಮಾಡುವುದು ಸರಿಯಲ್ಲ ಎಂದು ನಾವು ತಿಳಿಸಿದ್ದೇವೆ. ಆದರೆ ಅದನ್ನು ಅವರು ಒಪ್ಪಲಿಲ್ಲ. ನಂತರ ಪುಸ್ತಕದಲ್ಲಿ ‘ಅವಿಶ್ವಾಸಕ್ಕೆ ಅವಕಾಶವಿಲ್ಲ’ ಎಂದು ಬರೆದುಕೊಂಡಿದ್ದಾರೆ. ಅದನ್ನು ನಾವು ತಿರಸ್ಕರಿಸಿದ್ದೇವೆ” ಎಂದರು. ಅಶೋಕ್ ಹಾರನಹಳ್ಳಿ ಬಣದ ಪ್ರಕಾರ, ೧೩ ಮಂದಿ ತಮ್ಮ ಪರವಾಗಿದ್ದು, ವಿರೋಧವಾಗಿ ೧೧ ಮಂದಿ ಇದ್ದರು. “ನಾವು ಬೇರೆ ಪ್ರೊಸೀಡಿಂಗ್ ಮಾಡಿ, ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿ ಪಾಸಾಗಿದ್ದೇವೆ. ಇದರ ಫಲವಾಗಿ ಹಾಲಿ ಅಧ್ಯಕ್ಷ ಆರ್.ಟಿ. ದೇವೇಗೌಡ, ಕಾರ್ಯದರ್ಶಿ ಜಗದೀಶ್ ಹಾಗೂ ಖಜಾಂಚಿ ಪಾರ್ಶ್ವನಾಥ್ ಅವರು ಪದಚ್ಯುತಿ ಹೊಂದಿದ್ದಾರೆ. ನಂತರ ನಡೆದ ಚುನಾವಣೆಯಲ್ಲಿ ಬಿ.ಆರ್. ಗುರುದೇವ್ ಅವರನ್ನು ಹೊಸ ಅಧ್ಯಕ್ಷರಾಗಿ, ಜಿ.ಟಿ. ಕುಮಾರ್ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಶ್ರೀಧರ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಿದ್ದೇವೆ” ಎಂದು ಘೋಷಿಸಿದರು.
ನಮ್ಮ ವಿರೋಧಿ ಬಣ ಅವಿಶ್ವಾಸ ನಿರ್ಣಯ ಮಾನ್ಯವಲ್ಲ ಎಂದು ಹೇಳಿ ಸಭೆಯಿಂದ ಎದ್ದು ಹೊರಟರು. ಆದರೆ ನಮ್ಮ ಬಳಿ ಬಹುಮತ ಇರುವುದರಿಂದ ನಾವು ಸ್ಪಷ್ಟವಾಗಿ ಗೆಲುವು ಸಾಧಿಸಿದ್ದೇವೆ. ವೀಕ್ಷಕರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರವೇ ತೀರ್ಮಾನ ಕೈಗೊಳ್ಳಲಿದೆ. ಆದರೆ ನಾವೇ ಬಹುಮತ ಹೊಂದಿದ್ದೇವೆ ಎಂಬುದು ಸ್ಪಷ್ಟ” ಎಂದರು.
ಈ ಬೆಳವಣಿಗೆಯಿಂದ ಎಂಟಿಇಎಸ್ ಸಂಸ್ಥೆಯೊಳಗಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಹಾಲಿ ಅಧ್ಯಕ್ಷ ದೇವೇಗೌಡರ ತಂಡ ಮತ್ತು ಅಶೋಕ್ ಹಾರನಹಳ್ಳಿ ಬಣ ಪರಸ್ಪರ ವಿರೋಧಿ ನಿಲುವು ತೆಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಈ ವಿವಾದ ನ್ಯಾಯಾಲಯ ಹಾಗೂ ಪ್ರಾಧಿಕಾರದ ಮಟ್ಟಕ್ಕೆ ಏರಲಿದ್ದು, ಸಂಸ್ಥೆಯ ಭವಿಷ್ಯದ ಆಡಳಿತ ಯಾರ ಕೈ ಸೇರಲಿದೆ ಎಂಬ ಕುತೂಹಲ ಮೂಡಿಸಿದೆ.