Home ದೇಶ ರೈಲ್ವೆ ಟಿಕೆಟ್‌ಗಳ ಮೇಲೆ ಮೋದಿ ಚಿತ್ರದ ಜೊತೆ ಆಪರೇಷನ್ ಸಿಂಧೂರ್ ಪ್ರಚಾರ: ಕಾಂಗ್ರೆಸ್‌ ಆಕ್ಷೇಪ

ರೈಲ್ವೆ ಟಿಕೆಟ್‌ಗಳ ಮೇಲೆ ಮೋದಿ ಚಿತ್ರದ ಜೊತೆ ಆಪರೇಷನ್ ಸಿಂಧೂರ್ ಪ್ರಚಾರ: ಕಾಂಗ್ರೆಸ್‌ ಆಕ್ಷೇಪ

0

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತ್ತು.

ಇದೀಗ ರೈಲ್ವೆ ಇ-ಟೆಕೆಟ್ಟುಗಳಲ್ಲಿ ಆಪರೇಷನ್‌ ಸಿಂಧೂರ್‌ ಕುರಿತು ಪ್ರಚಾರ ಮಾಡಲಾಗುತ್ತಿದೆ. ಆದರೆ ಅದರಲ್ಲಿ ಮೋದಿ ಫೋಟೊ ಬಳಸಿರುವ ಕುರಿತು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಮಿಲಿಟರಿ ಕ್ರಮವನ್ನು ಬಳಸಿಕೊಳ್ಳುತ್ತಿದೆ ಎಂದು ಅದು ಆರೋಪಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಷ್ ಬಾಬೆಲ್ ಅವರು ಎಕ್ಸ್-ವೇದಿಕೆಯಲ್ಲಿ ಈ ಕುರಿತಾದ ಫೋಟೋ ಹಂಚಿಕೊಂಡಿದ್ದಾರೆ. ಮೋದಿಯವ ಚಿತ್ರವಿರುವ ಟಿಕೆಟಿನ ಚಿತ್ರ ಹಂಚಿಕೊಂಡಿರುವ ಅವರು, “ಮೋದಿ ಸರ್ಕಾರ ಜಾಹೀರಾತಿನಲ್ಲಿ ಎಷ್ಟು ಆಸಕ್ತಿ ಹೊಂದಿದೆ ಎಂಬುದಕ್ಕೆ ಇದು ಒಂದು ಉದಾಹರಣೆ” ಎಂದು ಟೀಕಿಸಿದ್ದಾರೆ.

ನಮ್ಮ ಮಿಲಿಟರಿಯ ಪರಾಕ್ರಮವನ್ನು ಒಂದು ಉತ್ಪನ್ನದ ಮಟ್ಟಕ್ಕೆ ಇಳಿಸಲಾಗಿದೆ. ಇದು ದೇಶಭಕ್ತಿಯಲ್ಲ. ಇದೊಂದು ಚೌಕಾಶಿ. ಮುಂಬರುವ ಬಿಹಾರ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಬಳಸುವುದು ಇದರ ಉದ್ದೇಶವಾಗಿದೆ. “ಇಂತಹ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಬಾಬೆಲ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಕುರಿತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಕುಂವರ್ ಡ್ಯಾನಿಶ್ ಅಲಿ ಕೂಡ ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದರು. ಪ್ರಧಾನಿ ಮೋದಿ ಸರ್ಕಾರ ಆಪರೇಷನ್ ಸಿಂಧೂರ್ ಅನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದೆ ಎಂದು ಅವರು ಆರೋಪಿಸಿದರು.

ರೈಲ್ವೆ ಮಂಡಳಿಯ ಅಧಿಕಾರಿ ಪ್ರತಿಕ್ರಿಯಿಸಿದರು..

ಕಾಂಗ್ರೆಸ್ ಮಾಡಿದ ಟೀಕೆಗೆ ರೈಲ್ವೆ ಮಂಡಳಿ ಅಧಿಕಾರಿ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ನಮ್ಮ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ನಮಗೆ ಹೆಮ್ಮೆ ಇದೆ. ಅವರ ಧೈರ್ಯಕ್ಕೆ ಇಡೀ ದೇಶ ಸಾಕ್ಷಿಯಾಗಿದೆ. ರೈಲ್ವೆ ಇಲಾಖೆಯು ಟಿಕೆಟ್‌ಗಳಲ್ಲಿ ಈ ಸಂದೇಶವನ್ನು ಹೈಲೈಟ್ ಮಾಡಲು ಮತ್ತು ಎಲ್ಲಾ ನಿಲ್ದಾಣಗಳಲ್ಲಿ ಆಪರೇಷನ್ ಸಿಂಧೂರ್ ಚಿತ್ರವನ್ನು ಹೊಂದಿರುವ ತ್ರಿವರ್ಣ ಧ್ವಜಗಳನ್ನು ಪ್ರದರ್ಶಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆ ವಿಷಯವನ್ನು ದೇಶದ ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕೆನ್ನುವುದು ನಮ್ಮ ಆಶಯ. ಇದರ ಹಿಂದೆ ರಾಜಕೀಯ ಲಾಭದ ಉದ್ದೇಶವಿಲ್ಲ” ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version