ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೇಲೆ ಅವಹೇಳನಕಾರಿ ಪದ ಪ್ರಯೋಗ ಮಾಡಿದ ಬಿಜೆಪಿ ಎಂಎಲ್ಸಿ ರವಿಕುಮಾರ್ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ. ಶಾಲಿನಿ ರಜನೀಶ್ ಬಗ್ಗೆ ಮಾತನಾಡಿದ ಅವಹೇಳನಕಾರಿ ಮಾತಿಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಎಂಎಲ್ ಸಿ ರವಿಕುಮಾರ್ ವಿರುದ್ಧ ಪರಿಷತ್ ಸಭಾಪತಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿದೆ.
ಈ ಹಿಂದೆ ಕಲಬುರಗಿ ಡಿಸಿ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿದ್ದರು. ರವಿಕುಮಾರ್ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಎಂಎಲ್ ಸಿ ಸ್ಥಾನದಿಂದ ರವಿಕುಮಾರ್ ರನ್ನು ವಜಾಗೊಳಿಸುವಂತೆ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಮನೋಹರ್ ನೇತೃತ್ವದ ಕಾಂಗ್ರೆಸ್ ನಿಯೋಗ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರು ನೀಡಿ ಮನವಿ ಮಾಡಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ನಂತರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರನ್ನು ಕೊಡಲು ಹೋದಾಗ, ಸರ್ಕಾರಿ ಕೆಲಸದ ಕಾರಣ ಬಿಜೆಪಿ ನಿಯೋಗಕ್ಕೆ ಸಿಕ್ಕಿರಲಿಲ್ಲ. ಇದನ್ನೇ ಗುರಿಯಾಗಿಸಿಕೊಂಡು ಎಂಎಲ್ ಸಿ ರವಿಕುಮಾರ್, ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದರು.
ಕೆಲ ದಿನಗಳ ಹಿಂದೆ ರವಿ ಕುಮಾರ್ ಕಲಬುರಗಿ ಡಿಸಿ ಫೌಜಿಯಾ ತರನ್ನಮ್ ವಿರುದ್ಧವೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ರವಿಕುಮಾರ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಸಿಎಸ್ ಶಾಲಿನಿ ರಜನೀಶ್ ಅವರನ್ನು ಅವಮಾನಿಸಿದ್ದು, ಕಾಂಗ್ರೆಸ್ ಸಭಾಪತಿ ಹೊರಟ್ಟಿ ಅವರಿಗೆ ದೂರು ನೀಡಿದೆ.