ಹಾಸನ : ದಸರಾ ಹಬ್ಬದ ವಿಚಾರವಾಗಿ ಜಾತಿ-ಧರ್ಮದ ರಾಜಕಾರಣ ನಡೆಸುತ್ತಿರುವ ಬಿಜೆಪಿ ಮುಖಂಡರು ಪ್ರತಾಪ್ ಸಿಂಹ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದ ಅವರು,“ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಚರ್ಚಿಸಿ, ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್ ಅವರಿಂದಲೇ ದಸರಾ ಹಬ್ಬ ಉದ್ಘಾಟನೆ ನಡೆಯಬೇಕು ಎಂದು ತೀರ್ಮಾನಿಸಿದ್ದಾರೆ. ಇದು ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಮೂಡಿಸುವ ನಿರ್ಧಾರ. ಭಾನು ಮುಸ್ತಾಕ್ ಅವರು ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರುವ ಸಾಹಸಿ ಮಹಿಳೆ. ಇಂತಹವರು ದಸರಾ ಉದ್ಘಾಟನೆ ಮಾಡುವುದು ಎಲ್ಲರಿಗೂ ಸಂತಸದ ವಿಷಯ,” ಎಂದು ಹೇಳಿದರು. “ಈ ನಿರ್ಧಾರವನ್ನು ವಿರೋಧಿಸಿ ಪ್ರತಾಪ್ ಸಿಂಹ ಅಸಂಬದ್ಧವಾಗಿ ಮಾತನಾಡಿದ್ದಾರೆ. ಸದಾ ಜಾತಿ-ಧರ್ಮದ ಮಾತು ಮಾಡುವುದು ಸರಿಯಲ್ಲ. ನಮ್ಮ ದೇಶ ಮತ್ತು ರಾಜ್ಯ ಜಾತ್ಯಾತೀತವಾಗಿದ್ದು, ಭಾನು ಮುಸ್ತಾಕ್ ಮೊದಲು ಒಬ್ಬ ಕನ್ನಡತಿ. ರಾಷ್ಟ್ರಪತಿ ಅಬ್ದುಲ್ ಕಲಾಂ ಹಾಗೂ ನಿಸಾರ್ ಅಹ್ಮದ್‌ರಂತೆ ಇವರು ಕೂಡ ದೇಶಕ್ಕೆ ಕೀರ್ತಿ ತಂದಿದ್ದಾರೆ. ನಮ್ಮ ಹಾಸನ ಜಿಲ್ಲೆಯವರಾಗಿರುವುದು ನಮ್ಮಿಗೆ ಮತ್ತಷ್ಟು ಹೆಮ್ಮೆಯ ವಿಚಾರ ಎಂದರು.
ಅವರು ಪ್ರತಾಪ್ ಸಿಂಹ ಹಾಗೂ ಯತ್ನಾಳ್‌ರನ್ನು ಉದ್ದೇಶಿಸಿ, “ಪದೇ ಪದೇ ಜಾತಿ-ಧರ್ಮದ ವಿಷಯ ಎತ್ತಿಕೊಂಡರೆ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ,” ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಹೊಸ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೃಷ್ಣ ಭೈರೇಗೌಡರಿಗೆ ಸ್ವಾಗತ ಕೋರಿದ ಅವರು,“ಅವರು ದಕ್ಷ ಹಾಗೂ ಪ್ರಾಮಾಣಿಕ ನಾಯಕರಾಗಿದ್ದು, ಈಗಾಗಲೇ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಗೌಡ, ರಘು ದಾಸರಕೊಪ್ಪಲು, ಚಂದ್ರಶೇಖರ್, ಮೊಹಮ್ಮದ್ ಆರೀಫ್, ಅನುಕುಮಾರ್, ಬೂದೇಶ್ ಹಾಗೂ ಇತರರು ಉಪಸ್ಥಿತರಿದ್ದರು.