Home ಬ್ರೇಕಿಂಗ್ ಸುದ್ದಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುತ್ತಿರುವುದು ಬೆಳವಣಿಗೆ – ಎಚ್ ಡಿ ರೇವಣ್ಣ

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುತ್ತಿರುವುದು ಬೆಳವಣಿಗೆ – ಎಚ್ ಡಿ ರೇವಣ್ಣ

ದಸರಾ ಮಹೋತ್ಸವ ಉದ್ಘಾಟನೆಗೆ ಬಾನು ಮುಸ್ತಾಕ್ ಯಾರೂ ವಿರೋಧಿಸ ಬೇಡಿ: ಹೆಚ್.ಡಿ. ರೇವಣ್ಣ


ಹಾಸನ : ಹಿಂದೂ–ಮುಸ್ಲಿಂ ಎಂದು ಬೇರ್ಪಡಿಸುವುದು ಸರಿಯಲ್ಲ. ನಾವೆಲ್ಲರೂ ಒಂದೇ. ಯಾರಾದರೂ ವಿರೋಧ ವ್ಯಕ್ತಪಡಿಸಿದರೂ, ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆಗೆ ಬಾನು ಮುಸ್ತಾಕ್ ಅವರಿಗೆ ಅವಕಾಶ ನೀಡಿರುವುದನ್ನು ಯಾರೂ ವಿರೋಧಿಸಬಾರದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬೆಂಬಲ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವುದು ವಿಚಾರವಾಗಿ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅವರು ನಮ್ಮ ಜಿಲ್ಲೆಯ ಮಹಿಳೆ, ಹೋರಾಟಗಾರ್ತಿ. ಅವರ ಕೈಯಲ್ಲಿ ಉದ್ಘಾಟನೆ ನಡೆಯುವುದು ನನಗೆ ಸಂತೋಷದ ವಿಷಯ. ಇದರಲ್ಲಿ ಹಿಂದೂ–ಮುಸ್ಲಿಂ ಬೇಧ ಮಾಡುವುದು ಸರಿಯಲ್ಲ. ನಾವು ಎಲ್ಲರೂ ಒಂದೇ ಭಾರತೀಯರು. ನನಗೆ ಧಾರ್ಮಿಕ ಬೇಧಾಭಿಪ್ರಾಯವಿಲ್ಲ,” ಎಂದರು.

“ನೀವು ಚಾಮುಂಡೇಶ್ವರಿ ತಾಯಿ ಎಂದು ಕರೆಯಿರಿ, ನಾನು ಅದನ್ನು ಗೌರವಿಸುತ್ತೇನೆ. ಕೆಲವರು ಇದನ್ನು ನಾಡಹಬ್ಬವೆಂದು ಕರೆಯುತ್ತಾರೆ, ಅದನ್ನೂ ನಾನು ಗೌರವಿಸುತ್ತೇನೆ. ನಾಡಹಬ್ಬವಾಗಲಿ, ಚಾಮುಂಡೇಶ್ವರಿ ತಾಯಿ ಹಬ್ಬವಾಗಲಿ – ಇದು ನಮ್ಮ ಸಂಸ್ಕೃತಿಯ, ನಾಡಿನ ಭಾಗ. ನನಗೂ ಇದು ಅಷ್ಟೇ ಪ್ರಿಯವಾದ ಹಬ್ಬ. ನಾನು ಗೌರವದಿಂದ, ಪ್ರೀತಿಯಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತೇನೆ,” ಎಂದು ಹೇಳಿದರು.

“ನಾನು ತಂದೆ–ತಾಯಿಯವರ ಜೊತೆ ಅನೇಕ ಬಾರಿ ಜಂಬೂಸವಾರಿ ನೋಡಲು ಹೋಗಿದ್ದೆ. ಈಗ ನನಗೆ ದಸರಾ ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತೋಷದ ವಿಷಯ,” ಎಂದರು.

ಜಿಲ್ಲೆಯ ಅಭಿವೃದ್ಧಿ ವಿಷಯಕ್ಕೆ ಬಂದಾಗ, “ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈಗಾದರೂ ಕೆಲಸ ನಡೆಯಲಿ ಎಂಬ ಆಶೆಯಿದೆ. ನಾಲ್ಕು ವರ್ಷಗಳಿಂದ ಜಿ.ಪಂ., ತಾ.ಪಂ. ಚುನಾವಣೆಗಳು ನಡೆದಿಲ್ಲ,” ಎಂದು ದೂರಿದರು.

“ನಾನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮುಸ್ಲಿಂ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದೇನೆ. ಅದನ್ನು ಮತಗಳಿಗಾಗಿ ಮಾಡಲಿಲ್ಲ. 40 ವರ್ಷಗಳಿಂದ ಕಾಂಗ್ರೆಸ್ ಏಕೆ ಆ ಕೆಲಸ ಮಾಡಲಿಲ್ಲ? ಶಾಸಕರಾಗಿ ಅದು ನನ್ನ ಜವಾಬ್ದಾರಿ. ಯಾರೇ ಮತ ಕೊಟ್ಟರೂ ಅಥವಾ ಕೊಡದಿದ್ದರೂ, ನನ್ನ ಜೀವಮಾನವಿರುವವರೆಗೂ ಜಿಲ್ಲೆಯ ಜನರನ್ನು ಮರೆತೇ ಮರೆತೇ ಬಿಡುವುದಿಲ್ಲ,” ಎಂದು ತಿಳಿಸಿದರು.

“ರಾಜಕೀಯದಲ್ಲಿ ಏಳು–ಬೀಳು ಇರುತ್ತವೆ. ಆದರೆ, ಜಿಲ್ಲೆಯ ಮಹಿಳೆಗೆ ಒಂದು ಅವಕಾಶ ನೀಡಲಾಗಿದೆ. ಬಾನು ಮುಸ್ತಾಕ್ ಅವರು ದೇವೇಗೌಡರ ಕಾಲದಿಂದಲೇ ಹೋರಾಟ ಮಾಡುತ್ತಿರುವವರು. ಇದರಲ್ಲಿ ರಾಜಕೀಯವನ್ನು ಬಿಟ್ಟು ನೋಡಬೇಕು. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿರಲಿಲ್ಲವೇ? ಆಗ ದೇವೇಗೌಡರು ಅವರನ್ನು ಹೇಗೆ ನಡೆಸಿಕೊಂಡರು ನೋಡಿ,” ಎಂದು ಪ್ರಶ್ನಿಸಿದರು.

ಧರ್ಮಸ್ಥಳದ ವಿಚಾರ ಕೇಳಿದಾಗ, “ಅದರ ಬಗ್ಗೆ ನಾನು ಈಗ ಹೇಳುವುದಿಲ್ಲ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಎರಡು ಸರ್ಕಾರಗಳು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಧರ್ಮಸ್ಥಳದ ಬಗ್ಗೆ ನಮಗಿರುವ ಗೌರವ ಅಸಾಧಾರಣ. ಆದರೆ, ಕೆಲವರು ಅದನ್ನು ಹಾಳುಮಾಡಲು ಪ್ರಯತ್ನಿಸಿದ್ದಾರೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದಿತ್ತು. ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳವನ್ನು ಸದಾ ಸಮನಾಗಿ, ರಾಜಕೀಯವಿಲ್ಲದೆ ನಡೆಸಿಕೊಂಡು ಬಂದಿದ್ದಾರೆ. ತಪ್ಪು ಮಾಡಿದವರು ಧರ್ಮಸ್ಥಳಕ್ಕೆ ಬಂದು ಸತ್ಯಪ್ರಮಾಣ ಮಾಡುತ್ತಾರೆ. ನಾನೂ ಅದನ್ನು ನೋಡಿದ್ದೇನೆ. ಮಂಜುನಾಥಸ್ವಾಮಿಯ ಶಕ್ತಿ ಅಪಾರ. ಆ ದೇವರ ಶಕ್ತಿಯ ಬಗ್ಗೆ ನಾನು ಮಾತಾಡಲಾರೆ,” ಎಂದರು.

You cannot copy content of this page

Exit mobile version