ಕಾಂಗ್ರೆಸ್ ಸೇರಲಿದ್ದಾರಾ YSV ದತ್ತಾ? ದತ್ತಾ ಅವರ ಸಾಮಾಜಿಕ ಮತ್ತು ರಾಜಕೀಯ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹದ್ದೊಂದು ಪ್ರಶ್ನೆ ಎದುರಾಗೋದು ಸಹಜ. ರಾಜಕೀಯವೆಂಬ ಆಟದಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಯಾವುದೂ ಅಸಾಧ್ಯ ಎನ್ನುವಂತಿಲ್ಲ. ಆದರೆ YSV ದತ್ತಾ ಎಂಬ ಒಂದು ಕಾಲದ ಜೆಡಿಎಸ್ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ, ಬದ್ಧತೆಯ ರಾಜಕಾರಣಿ ಎಲ್ಲಕ್ಕಿಂತ ಹೆಚ್ಚಾಗಿ ದೇವೇಗೌಡರ ಮಾನಸ ಪುತ್ರನಂತಿದ್ದ ವ್ಯಕ್ತಿಯ ಕಳೆದೆರಡು ಮೂರು ವರ್ಷಗಳ ಈಚೆಗಿನ ನಡೆಯನ್ನು ಗಮನಿಸಿದಾಗ ಹೀಗೊಂದು ಅನುಮಾನ ಸೃಷ್ಟಿಯಾಗುತ್ತದೆ.
ಇಂತಹ ಅನುಮಾನಕ್ಕೆ ಪುಷ್ಟಿ ಕೊಡುವಂತಹ ಮತ್ತೊಂದು ವೇದಿಕೆಯಲ್ಲಿ ದತ್ತಾ ಅವರು ಪ್ರತ್ಯಕ್ಷರಾಗಿದ್ದು ಆಗಸ್ಟ್ 7 ರಂದು ಕುಂದಾಪುರ ತಾಲ್ಲೂಕಿನ ಬ್ರಹ್ಮಾವರದಲ್ಲಿ. ಅದೂ ಸಹ ಹೇಳಿಕೇಳಿ ಜೆಡಿಎಸ್ ಪಕ್ಷದ ಕಡು ವೈರಿಯೆಂದೇ ಜೆಡಿಎಸ್ ಪಾಳಯದಲ್ಲಿ ಹೆಸರಾದ ಸಿದ್ದರಾಮಯ್ಯನವರ ಬಗೆಗಿನ ಕಾರ್ಯಕ್ರಮದಲ್ಲಿ. ಬ್ರಹ್ಮಾವರದ ಬಂಟರ ಭವನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಸಮಾನ ಮನಸ್ಕ ಗೆಳೆಯರ ವೇದಿಕೆಯ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ YSV ದತ್ತಾರವರು ಭಾಗಿಯಾಗಿ, ಸಿದ್ದರಾಮಯ್ಯನವರ ಬಗ್ಗೆ ಅತೀವ ಅಭಿಮಾನದಿಂದ ಮಾತನಾಡಿದ್ದು ಇಂತಹ ಎಲ್ಲಾ ಅನುಮಾನದ ಅಂಶಕ್ಕೆ ಪುಷ್ಟಿ ನೀಡಿದ್ದಾರೆ.
ವೇದಿಕೆಯಲ್ಲಿ ಬಿಜೆಪಿ ಪಕ್ಷದ ತಾರತಮ್ಯ ನೀತಿಯ ಬಗ್ಗೆ ಕಟುವಾಗಿ ಟೀಕಿಸಿದ ದತ್ತಾರವರು ‘ಬಿಜೆಪಿ ಮಲೆನಾಡು ಮತ್ತು ಕರಾವಳಿ ಭಾಗದ ಸಾಮಾಜಿಕ ವ್ಯವಸ್ಥೆಯನ್ನೇ ಹಾಳು ಮಾಡಿದೆ, ಎಲ್ಲೆಡೆ ಕೋಮುದ್ವೇಷದ ಭಾವನೆಯನ್ನ ಸೃಷ್ಟಿ ಮಾಡಿ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಸರಿದಾರಿಗೆ ನಡೆಯಲು ಸಿದ್ದರಾಮಯ್ಯನವರಂತಹ ವ್ಯಕ್ತಿಯ ನಿಲುವನ್ನು ರೂಢಿಸಿಕೊಳ್ಳಬೇಕು’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೊತೆಗೆ ಸಿದ್ದರಾಮಯ್ಯನವರ ಧ್ವನಿ ಮೊದಲು ತಲುಪಬೇಕಿರುವುದು ಈ ಭಾಗಕ್ಕೆ(ಕರಾವಳಿ, ಮಲೆನಾಡು). ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡಿರಲಿಲ್ಲ. ಆದರೆ ಬಿಜೆಪಿ ಹೆಜ್ಜೆ ಹೆಜ್ಜೆಗೂ ಪಕ್ಷಪಾತಿ ನಿಲುವನ್ನು ತಳೆದಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅವಶ್ಯಕತೆ ಈ ರಾಜ್ಯಕ್ಕೆ ಇದೆ ಎಂಬ ಮಾತನ್ನು ಆಡಿದ್ದಾರೆ. ಸಿದ್ದರಾಮಯ್ಯನವರ ಸಂವಿಧಾನ ಪರವಾದ ನಿಲುವು, ದೀನ ದಲಿತರ ಮೇಲಿನ ಅವರ ಕಾಳಜಿ, ಸಾಮಾಜಿಕ ನ್ಯಾಯದ ಮೇಲಿನ ಅವರ ಬದ್ಧತೆ ಮತ್ತು ಅವರ ವೈಚಾರಿಕ ಚಿಂತನೆ ಈ ರಾಜ್ಯಕ್ಕೆ ಅತ್ಯವಶ್ಯಕವಿದೆ ಎಂದೂ ಸಹ ದತ್ತಾ ಹೇಳಿದ್ದಾರೆ.
ಇದರ ಜೊತೆಗೆ ಪ್ರತೀ ಬಾರಿಯೂ ತಮ್ಮ ಮಾತಿನಲ್ಲಿ “ನಾನು ಮತ್ತು ಸಿದ್ದರಾಮಣ್ಣ ಸಧ್ಯಕ್ಕೆ ಬೇರೆ ಬೇರೆ ಪಕ್ಷದಲ್ಲಿದ್ದೇವೆ..” ಎಂದು ಪದೇಪದೇ “ಸಧ್ಯಕ್ಕೆ” ಎಂಬ ಪದವನ್ನು ಒತ್ತಿ ಒತ್ತಿ ಹೇಳುತ್ತಿದ್ದುದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ದತ್ತಾರವರು ಕಾಂಗ್ರೆಸ್ ಪಕ್ಷ ಸೇರುವುದು ನೂರಕ್ಕೆ ನೂರರಷ್ಟು ಸ್ಪಷ್ಟ ಎಂಬುದು ಸ್ಥಳೀಯ ಮೂಲಗಳಿಂದ ಸಿಕ್ಕ ಮಾಹಿತಿ. ಇನ್ನು ಇದೇ ವೇದಿಕೆಯಲ್ಲಿ ಭಾಗವಹಿಸಿದ್ದ ‘ಲಂಕೇಶ್ ಪತ್ರಿಕೆ ಕಟ್ಟೆ ಪುರಾಣ’ ಖ್ಯಾತಿಯ ಚಂದ್ರೇಗೌಡರೂ ಸಹ ದತ್ತಾರವರು ಕಾಂಗ್ರೆಸ್ ಗೆ ಬರಬೇಕು ಎಂದೂ ಬಹಿರಂಗವಾಗಿ ಆಹ್ವಾನಿಸಿದ್ದಾರೆ.
ಇನ್ನು ದತ್ತಾರವರು ಕಾಂಗ್ರೆಸ್ ಸೇರ್ಪಡೆ ಮೇಲಿರುವ ಅನುಮಾನದ ಬಗ್ಗೆ ಜೆಡಿಎಸ್ ಮೂಲಗಳನ್ನು ಪ್ರಶ್ನಿಸಿದಾಗ ‘ದತ್ತಾರವರ ಬಗ್ಗೆ ಪಕ್ಷಾತೀತವಾಗಿ ಎಲ್ಲರಲ್ಲೂ ಅಭಿಮಾನವಿದೆ. ಸ್ವತಃ ಕಡೂರು ಕ್ಷೇತ್ರದಿಂದ ಆರಿಸಿ ಹೋದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಕೂಡಾ ಸದನದಲ್ಲಿ ನಾನು ದತ್ತಾ ಅವರ ಕ್ಷೇತ್ರದವನು ಎಂದೇ ಗುರುತಿಸಿಕೊಳ್ಳುತ್ತಾರೆ. ಅವರ ವಯಕ್ತಿಕ ನಿಲುವನ್ನು ಹಂಚಿಕೊಳ್ಳಲು ಅವರು ಸ್ವತಂತ್ರರು. ಹಾಗೆಂದ ಮಾತ್ರಕ್ಕೆ ಏಕಾಏಕಿ ಕಾಂಗ್ರೆಸ್ ಸೇರಲು ಅಲ್ಲಿ ಅವರಿಗೆ ಪೂರಕ ವಾತಾವರಣ ಇದೆಯೇ? ಕೇವಲ ಸಿದ್ದರಾಮಯ್ಯ ಮುಖ ನೋಡಿಕೊಂಡು ಕಾಂಗ್ರೆಸ್ ಸೇರಲು ಆ ಪಕ್ಷ ಕೇವಲ ಸಿದ್ದರಾಮಯ್ಯರಿಗೆ ಮಾತ್ರ ಸೇರಿದ್ದೇ? ಹಾಗೊಂದು ವೇಳೆ ಸೇರಿದರೂ ದತ್ತಾರ ಸ್ವಕ್ಷೇತ್ರ ಕಡೂರಿನಲ್ಲಿ ಆಗುವ ರಾಜಕೀಯ ಪಲ್ಲಟಗಳನ್ನು ಎದುರಿಸಲು ದತ್ತಾ ಸಿದ್ದರಿದ್ದಾರೆಯೇ? ಅಲ್ಲಿರುವ ಕಾಂಗ್ರೆಸ್ ಆಕಾಂಕ್ಷಿ ಕುರುಬ ಸಮುದಾಯದ ಕುಮಾರ್ ತಮ್ಮ ಸ್ಥಾನ ಬಿಟ್ಟು ಕೊಡುವರೇ? ಅಥವಾ ದತ್ತಾ ಮೇಲಿನ ಸಿಟ್ಟಿಗೆ ಸ್ಥಳೀಯ ಜೆಡಿಎಸ್ ಅಭಿಮಾನಿಗಳು ಬಿಜೆಪಿಗೆ ಮತ ನೀಡಿ ದತ್ತಾರ ಸೋಲಿಸುವ ಸಾಧ್ಯತೆ ಇದೆಯಲ್ಲವೆ? ಅಥವಾ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಅಲ್ಲೂ ಶುರುವಾಗುವ ಸಂಭವ ಇದೆಯಲ್ಲವೆ..’ ಇಂತಹ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ದತ್ತಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎಷ್ಟೇ ಅನುಮಾನವಿದ್ದರೂ ದತ್ತಾರವರ ಹಾದಿ ಎಲ್ಲರೂ ಅಂದುಕೊಳ್ಳುವಷ್ಟು ಸಲೀಸು ಎಂದೂ ಹೇಳಲಾಗದು. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಬೇಕು. ಮುಂದಿನ ವಿಧಾನಸಭಾ ಆಕಾಂಕ್ಷಿಯ ಮನವೊಲಿಸಬೇಕು. ಜೊತೆಗೆ ತಿರುಗಿ ನಿಲ್ಲುವ ಜೆಡಿಎಸ್ ಕಾರ್ಯಕರ್ತರ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ YSV ದತ್ತಾ ಇನ್ನಷ್ಟು ಜಾಣತನದಿಂದ ಯೋಚಿಸಬೇಕಿದೆ. ಒಟ್ಟಾರೆ ಸಿದ್ದರಾಮಯ್ಯ ಪರವಾದ ನಿಲುವಿನಿಂದ ದತ್ತಾರವರು ಜೆಡಿಎಸ್ ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ ಎಂಬುದು ಮಾತ್ರ ಸ್ಪಷ್ಟ.