ಜಗದೀಪ್ ಧನಕರ್ ಉಪರಾಷ್ಟ್ರತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಧನಕರ್ ಅವರ ಅನಿರೀಕ್ಷಿತ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.
ಆರೋಗ್ಯದ ಕಾರಣಗಳಿಂದ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದರೂ, ಅದು ಕಾರಣವಾಗಿರಲಾರದು ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಬಗ್ಗೆ ಅವರು ಮಂಗಳವಾರ X ವೇದಿಕೆಯಲ್ಲಿ ಪೋಸ್ಟ್ ಹಾಕಿದ್ದಾರೆ. ‘ಧನಕರ್ ಸೋಮವಾರ ಮಧ್ಯಾಹ್ನ 12:30ಕ್ಕೆ ಬಿಸಿನೆಸ್ ಅಡ್ವೈಸರಿ ಕಮಿಟಿಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವರು ಇದಕ್ಕೆ ಹಾಜರಾಗಿದ್ದರು. ಚರ್ಚೆಯ ನಂತರ ಸಂಜೆ 4:30ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಲಾಯಿತು. ಆದರೆ, ಆ ಸಭೆಗೆ ಸಭೆಗೆ ರಿಜಿಜು, ನಡ್ಡಾ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಧನಕರ್, ಸಭೆಯನ್ನು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಿದರು. ಇದನ್ನು ನೋಡಿದರೆ ನಿನ್ನೆ ಮಧ್ಯಾಹ್ನ 1 ಗಂಟೆಯಿಂದ 4:30ರ ನಡುವೆ ಏನೋ ದೊಡ್ಡ ವಿಷಯವೇ ನಡೆದಿದೆ.
ರಿಜಿಜು, ನಡ್ಡಾ ಉದ್ದೇಶಪೂರ್ವಕವಾಗಿ ಸಭೆಗೆ ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಧನಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಕಾರಣಗಳಿಂದ ರಾಜೀನಾಮೆ ನಿಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ನಾವು ಅದನ್ನು ಗೌರವಿಸಬೇಕು. ಆದರೆ, ಇದಕ್ಕೆ ಬಹಳ ಗಂಭೀರವಾದ ಕಾರಣಗಳಿರುವಂತೆ ತೋರುತ್ತದೆ’ ಎಂದು ರಮೇಶ್ ಬರೆದುಕೊಂಡಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಧನಕರ್ ರೈತರ ಕಲ್ಯಾಣದ ಬಗ್ಗೆ ನಿರ್ಭಯವಾಗಿ ಮಾತನಾಡುತ್ತಿದ್ದರು ಎಂದು ರಮೇಶ್ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಕಾನೂನು ಹೊಣೆಗಾರಿಕೆ ಮತ್ತು ಸಂಯಮದ ಬಗ್ಗೆ ಅವರು ದೃಢವಾಗಿ ಮಾತನಾಡಿದರು. ಅವರು ನಿಯಮಗಳು ಮತ್ತು ಶಿಷ್ಟಾಚಾರಗಳಿಗೆ ಬದ್ಧರಾಗಿದ್ದರು ಎಂದರು.
ಇನ್ನು, ಸೋಮವಾರ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಮೊದಲ ದಿನದ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಿದ ಧನಕರ್ ರಾತ್ರಿ ಅನಿರೀಕ್ಷಿತವಾಗಿ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದಾರೆ. ಆರೋಗ್ಯ ಕಾರಣಗಳಿಂದ ತಾನು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಅದರಲ್ಲಿ ತಿಳಿಸಿದ್ದಾರೆ.
2022ರ ಆಗಸ್ಟ್ 11ರಂದು ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಧನಕರ್ 2027ರ ತನಕ ವರೆಗೆ ಅಧಿಕಾರಾವಧಿ ಹೊಂದಿದ್ದರು. ಆದರೆ ಈಗ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಧನಕರ್ ಅವರ ರಾಜೀನಾಮೆಯಿಂದ ರಾಜ್ಯಸಭೆ ಅಧಿವೇಶನಗಳನ್ನು ಸದ್ಯ ಉಪಾಧ್ಯಕ್ಷರಾಗಿರುವ ಜೆಡಿಯು ನಾಯಕ ಹರಿವಂಶ್ ನಡೆಸಲಿದ್ದಾರೆ.