ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಕವಿತಾ ರೆಡ್ಡಿಯವರನ್ನು ಉಚ್ಛಾಟಿಸಿ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಆದೇಶಿಸಿದೆ.
2022 ರ ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಬೊಮ್ಮನಹಳ್ಳಿಯಿಂದ ಟಿಕೆಟ್ ಬಯಸಿದ್ದ ಕವಿತಾ ರೆಡ್ಡಿ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದರು. ಆ ನಂತರದಿಂದ ಆಗಾಗ್ಗೆ ಪಕ್ಷಕ್ಕೆ ಮುಜುಗರ ಹುಟ್ಟಿಸುವಂತಾ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಈ ಬಗ್ಗೆ ಪಕ್ಷದ ಹಿರಿಯರು ಒಮ್ಮೆ ಕರೆಸಿ ಎಚ್ಚರಿಕೆ ನೀಡಿದ್ದರು.
ಆ ನಂತರ ಪಕ್ಷದ ಒಳಗಿನ ಸ್ಥಾನಮಾನದ ಮೇಲೆ ಕಣ್ಣಿಟ್ಟಿದ್ದ ಕವಿತಾ ರೆಡ್ಡಿ, ಕೆಪಿಸಿಸಿ ಮಹಿಳಾ ಘಟಕಕ್ಕೆ ಸೌಮ್ಯಾ ರೆಡ್ಡಿ ನೇಮಕ ಹಾಗೂ ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ಸೇರಿದಂತೆ ಪಕ್ಷದ ಕೆಲ ಆಂತರಿಕ ವಿಚಾರಗಳ ಬಗ್ಗೆ ಕವಿತಾ ರೆಡ್ಡಿ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಕವಿತಾ ರೆಡ್ಡಿ ಅವರಿಗೆ ನೋಟಿಸ್ ನೀಡಿತ್ತು.
ಇಷ್ಟಾದರೂ ಮತ್ತೆ ಮತ್ತೆ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದ ಕವಿತಾ ರೆಡ್ಡಿ ಪಕ್ಷದ ನಾಯಕರ ವಿರುದ್ಧವೂ ಹೇಳಿಕೆ ನೀಡುತ್ತಲೇ ಬಂದಿದ್ದರು. ಈ ಎಲ್ಲಾ ಹಿನ್ನಲೆಯಲ್ಲಿ ಕವಿತಾ ರೆಡ್ಡಿಯವರನ್ನು ಪಕ್ಷದಿಂದ ಉಚ್ಛಾಟಿಸಿ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಹೊರಡಿಸಿದ ಆದೇಶದಲ್ಲಿ ಸೆಪ್ಟೆಂಬರ್ 5ರಂದು ನಡೆದ ಶಿಸ್ತುಪಾಲನಾ ಸಮಿತಿ ಸಭೆಯ ತೀರ್ಮಾನದಂತೆ ಕವಿತಾ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಲಾಗಿದ್ದು, ಅವರು ಪಕ್ಷದಲ್ಲಿ ಹೊಂದಿದ್ದ ಎಲ್ಲಾ ಹುದ್ದೆಗಳಿಂದಲೂ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.