Home ರಾಜ್ಯ ಮಂಡ್ಯ ಧರ್ಮಸ್ಥಳ ಸಂಘದವರ ಕಾಟ: ಸಾಲ ಕಟ್ಟಲಾಗದೆ ಮಹಿಳೆ ಆತ್ಮಹತ್ಯೆ!

ಧರ್ಮಸ್ಥಳ ಸಂಘದವರ ಕಾಟ: ಸಾಲ ಕಟ್ಟಲಾಗದೆ ಮಹಿಳೆ ಆತ್ಮಹತ್ಯೆ!

0

ಮಳವಳ್ಳಿ: ತಾಲ್ಲೂಕಿನ ಮಲಿಯೂರು ಎನ್ನುವಲ್ಲಿ ಮಹಿಳೆಯೊಬ್ಬರು ಸಂಘದ ಸಾಲ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಾಸಗಿ ಫೈನಾನ್ಸ್‌ ಸಂಸ್ಥೆಗಳು ಹಾಗೂ ಮೈಕ್ರೋ ಫೈನಾನ್ಸುಗಳು ಹಳ್ಳಿಗಳ ಮಹಿಳೆಯರ ಜೀವವನ್ನೇ ಹಿಂಡುತ್ತಿವೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ವೃದ್ಧ ದಂಪತಿಯ ಮನೆಗೆ ಬೀಗ ಹಾಕಿದ್ದ ಘಟನೆ ನಡೆದಿತ್ತು. ಹಾಗೆ ಬೀಗ ಹಾಕುವಾಗ ಅವರು ಅವರ ಬಳಿಯಿದ್ದ ಎರಡು ಮೇಕೆಗಳೂ ಒಳಗೆ ಸಿಕ್ಕಿಹಾಕಿಕೊಂಡಿದ್ದವು. ನಂತರ ಊರ ಜನರು ಬೀಗ ಒಡೆದು ಆಕ್ರೋಶ ತೋರಿಸಿದ್ದರು. ಇದರ ಹಿಂದೆ ಇದ್ದಿದ್ದು ಜನ ಸ್ಮಾಲ್‌ ಫೈನಾನ್ಸ್‌ ಎನ್ನುವ ಕಂಪನಿ.

ಇದೀಗ ಮಳವಳ್ಳಿಯಲ್ಲಿ ಇನ್ನೊಂದು ಘಟನೆ ನಡೆದಿದ್ದು ಇಲ್ಲೊಬ್ಬ ಮಹಿಳೆ ಸಂಘದವರ ಕಾಟ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಹಾಲಕ್ಷ್ಮಿ (45) ಎಂದು ಗುರುತಿಸಲಾಗಿದೆ.

ಮಹಿಳೆಯರೇ ಮುಖ್ಯವಾಗಿ ಭಾಗವಹಿಸುವ ಸ್ವಸಹಾಯ ಸಂಘಗಳು ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಆಶಯದೊಂದಿಗೆ ಶುರುವಾಗಿದ್ದವು. ಸರ್ಕಾರವೂ ಸಂಜೀವಿನಿ ಎನ್ನುವ ಸ್ವಸಹಾಯ ಸಂಘವನ್ನು ನಡೆಸುತ್ತದೆ. ಅದರೊಂದು ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸ್ವಸಹಾಯ ಸಂಘಗಳನ್ನು ನಡೆಸುತ್ತಿದೆ. ಇಂತಹ ಸಂಘಗಳಲ್ಲಿ ಬ್ಯಾಂಕುಗಳಂತೆ ಸಾಲ ನೀಡುವಾಗ ದಾಖಲೆಗಳಿಗಾಗಿ, ಶ್ಯೂರಿಟಿಗಳಿಗಾಗಿ ಅಲೆದಾಡಿಸುವುದಿಲ್ಲವಾದ ಕಾರಣ ಮಹಿಳೆಯರು ಇವುಗಳ ಸದಸ್ಯರಾಗಿ ಸಾಲವನ್ನು ಪಡೆಯುತ್ತಾರೆ.

ಆದರೆ ಕೃಷಿಯನ್ನೇ ನಂಬಿ ಬದುಕುವ ಸಾಕಷ್ಟು ಮಹಿಳೆಯರ ಆದಾಯ ಅವರು ಅಂದುಕೊಂಡಂತೆ ಇರುವುದಿಲ್ಲ. ಮಳೆ, ಬಿಸಿಲು, ಕೀಟ ಇತ್ಯಾದಿ ಕಾರಣಗಳಿಂದ ಬೆಳೆದ ಬೆಳೆ ಕೈಗೆ ಬಾರದಿರುವುದು, ಬೆಳೆಗೆ ಬೆಲೆ ಇಲ್ಲದಿರುವುದು ಇವೆಲ್ಲ ಸೇರಿ ಒಮ್ಮೊಮ್ಮೆ ಅವರ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ಸಂಕಷ್ಟಕ್ಕೆ ದೂಡುತ್ತವೆ. ಇನ್ನು ಕೂಲಿಗೆ ಹೋಗುವ ಮಹಿಳೆಯರಿಗೆ ಕೆಲಸ ಸಿಗುವ ಖಾತರಿಯಿರುವುದಿಲ್ಲ.

ಆದರೆ ಪಡೆದ ಸಾಲಕ್ಕೆ ವಾರದ ಕಂತು ಕಟ್ಟಲೇಬೇಕಿರುತ್ತದೆ. ಸಂಘದ ಅಧಿಕಾರಿಗಳು ಒಂದು ವಾರ ಕಟ್ಟಿಲ್ಲವೆಂದರೂ ಮನೆಯ ಮುಂದೆ ಬಂದು ನಿಲ್ಲುತ್ತಾರೆ. ಒಬ್ಬ ಮಹಿಳೆ ಕಟ್ಟಿಲ್ಲವೆಂದರೆ ಅದಕ್ಕೆ ಸಂಘದ ಸದಸ್ಯರನ್ನೆಲ್ಲ ಜವಾಬ್ದಾರಿ ಮಾಡುತ್ತಾರೆ.

ಮಹಾಲಕ್ಷ್ಮೀಯವರೂ ಸಂಘದಿಂದ ಸಾಲ ಪಡೆದಿದ್ದು ಸರಿಯಾಗಿ ಕಂತು ಕಟ್ಟಲು ಸಾಧ್ಯವಾಗಿಲ್ಲ. ಅವರು ಅದಕ್ಕಾಗಿ ಒಂದಷ್ಟು ಸಮಯ ಕೇಳಿದ್ದಾರೆ. ಆದರೆ ಅಧಿಕಾರಿಗಳು ಅದಕ್ಕೆ ಒಪ್ಪದೆ ಮನೆ ಬಾಗಿಲಿಗೆ ಬರುತ್ತಿದ್ದ ಕಾರಣ ಈಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಷಯವಾಗಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳ ಸಂಘದವರು ದೇವರ ಹೆಸರಿನಲ್ಲಿ ಸಂಘ ನಡೆಸುತ್ತಾ 30-40 ಪರ್ಸೆಂಟ್‌ ಬಡ್ಡಿ ಪಡೆಯುತ್ತಿದ್ದಾರೆ, ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರು ಸರ್ಕಾರದ ಸಂಜೀವಿನಿ ಸಂಘಗಳಿಗೆ ಮಾತ್ರ ಸೇರುವಂತೆ ಮಹಿಳೆಯರ ಬಳಿ ಮನವಿ ಮಾಡಿದ್ದಾರೆ.

You cannot copy content of this page

Exit mobile version