ಗೊಂಡಾ (ಉತ್ತರ ಪ್ರದೇಶ): ಕಳೆದ ವರ್ಷ ಜನವರಿಯಲ್ಲಿ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ. ಕಾಂಗ್ರೆಸ್ ಷಡ್ಯಂತ್ರದ ಭಾಗವಾಗಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಇವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಕಾಂಗ್ರೆಸ್ ಜುಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಅವರನ್ನು ಕಣಕ್ಕಿಳಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಳೆದ ವರ್ಷ ಜನವರಿಯಲ್ಲಿ (ಜನವರಿ 18, 2023) ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟಿಸಿದರು. ಕ್ರೀಡಾ ಪಟುಗಳ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಹೇಳಿದ್ದೇನೆ. ಕಾಂಗ್ರೆಸ್ ಷಡ್ಯಂತ್ರದ ಭಾಗವಾಗಿ ಕುಸ್ತಿಪಟುಗಳು ನಮ್ಮ ವಿರುದ್ಧ ಪ್ರತಿಭಟನೆ ನಡೆಸಿದರು. ವಿಶೇಷವಾಗಿ ಹಿರಿಯ ಕಾಂಗ್ರೆಸ್ ನಾಯಕರಾದ ಭೂಪೇಂದರ್ ಹೂಡಾ, ದೀಪೇಂದರ್ ಹೂಡಾ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಜಗಾಂಧಿ ನೇತೃತ್ವದಲ್ಲಿ ಕುಸ್ತಿಪಟುಗಳು ನಂತರ ಪ್ರತಿಭಟನೆ ನಡೆಸಿದರು ಎಂದು ಹೇಳಿದ್ದಾರೆ.
ವಿನೇಶ್ ಮತ್ತು ಬಜರಂಗ್ ಪುನಿಯಾ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭೂಪೇಂದರ್ ಹೂಡಾ ಮತ್ತು ದೀಪೇಂದರ್ ಹೂಡಾರಿಂದ ಹರಿಯಾಣದ ಹೆಣ್ಣುಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ವಿಶೇಷವಾಗಿ ಹರಿಯಾಣದ ಜನತೆಗೆ ಹೇಳಲು ಬಯಸುತ್ತೇನೆ ಬಜರಂಗ್ ಮತ್ತು ವಿನೇಶ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ… ಅವರ ಹೋರಾಟ ಹೆಣ್ಣುಮಕ್ಕಳ ಗೌರವಕ್ಕಾಗಿ ಅಲ್ಲ… ರಾಜಕೀಯ ಲಾಭಕ್ಕಾಗಿ. ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ ಕಾಂಗ್ರೆಸ್ ಮುಂದೊಂದು ದಿನ ಇದಕ್ಕಾಗಿ ಪಶ್ಚಾತ್ತಾಪಪಡಲಿದೆ ಎಂದು ಹೇಳಿದ್ದಾರೆ.