ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಂತರ ಎದ್ದ ಗದ್ದಲದಲ್ಲಿ ಹಲವಾರು ತಲೆಬುಡವಿಲ್ಲದ ಊಹಾಪೋಹಗಳನ್ನು ಹರಡಿ ಬಿಡಲಾಯಿತು.
ಆಗಸ್ಟ್ 9ರಂದು ವೈದ್ಯೆಯ ಶವ ಪತ್ತೆಯಾದ ಕೂಡಲೇ, ಇಬ್ಬರು ಕಿರಿಯ ವೈದ್ಯರ ಹೆಸರುಗಳನ್ನು ಹರಿಬಿಟ್ಟು – ಅರ್ಶಿಯಾನ್ ಆಲಂ ಮತ್ತು ಗೋಲಂ ಅಜಮ್ – ‘ಇವರೇ ನಿಜವಾದ ಅಪರಾಧಿಗಳು’ ಎಂದು ಸಾರಲಾಯಿತು. ಕೆಲವರು ಇವರಿಬ್ಬರು ಅಪರಾಧ ಎಸಗಿ ದೇಶ ಬಿಟ್ಟು ಹೋಗಿದ್ದಾರೆ ಎಂದೂ ಸಾಧಿಸತೊಡಗಿದರು.
ಆದರೆ ಸತ್ಯ ಪರಿಶೋಧನೆ ನಡೆಸುವ ವೆಬ್ಸೈಟ್ ಆಗಿರುವ ಆಲ್ಟ್ ನ್ಯೂಸ್ ಈ ಸುದ್ದಿಗಳ ಹಿಂದಿ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಅದು ಸಂಪೂರ್ಣ ಸುಳ್ಳು ಸುದ್ದಿ ಎಂದು ಘೋಷಿಸಿದೆ.
altnews.in ಪ್ರಕಾರ ಆ ದಿನ ಅರ್ಷಿಯಾನ್ ಅವರ ಮನೆಯಲ್ಲಿದ್ದರು; ಗೋಲಂ ತಮ್ಮ ಹಾಸ್ಟೆಲ್ಲಿನಲ್ಲಿದ್ದರು. ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಸುದ್ದಿ ಕೂಡಾ ಸುಳ್ಳು.
ಇತ್ತೀಚೆಗೆ ಈ ಅಪರಾಧ ಎಸಗಿದ ನಿಜವಾದ ಅಪರಾಧಿಗಳು ಎಂದು ಹೇಳಿ ನ್ನೂ ಕೆಲವು ಹೆಸರುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು WhatsApp ಸಂದೇಶಗಳಲ್ಲಿ ಹಂಚಿಕೊಳ್ಳಲಾಗಿದೆ. ಅವರಲ್ಲಿ ಒಬ್ಬರು ತಾನಿಯಾ ಯಾಸ್ಮಿನ್/ತಾನಿಯಾ ಯಾಸ್ಮಿನ್ ಖಾತೂನ್. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಪಾದಿತ ಅತ್ಯಾಚಾರ ಮತ್ತು ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ತಾನಿಯಾರ ಫೋಟೊಗಳನ್ನು ಸಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
@rajasolanki71070 ಎನ್ನುವ ಹೆಸರಿನ ಬಳಕೆದಾರ ಅತ್ಯಾಚಾರ ಸಂತ್ರಸ್ತೆಯ ಫೋಟೋವನ್ನು ಹಸಿರು ಸ್ಕ್ರಬ್ ಮತ್ತು ಮಾಸ್ಕ್ ಧರಿಸಿರುವ ಮಹಿಳೆಯ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ ಮತ್ತು ಆ ಮಹಿಳೆಯು ಸಂತ್ರಸ್ತೆಯ ಸ್ನೇಹಿತೆ ತಾನಿಯಾ ಯಾಸ್ಮಿನ್ ಎಂದು ಹೇಳಿಕೊಂಡಿದ್ದಾರೆ. ಈತ ತನ್ನ ಟ್ವೀಟಿನಲ್ಲಿ ʼವೈದ್ಯೆಯ ಮಾನವನ್ನು ಹರಣ ಮಾಡುತ್ತಿರುವಾಗ ನೀಡುತ್ತಿರುವಾಗ ಆಕೆಯ ಸ್ನೇಹಿತೆಯಾದ ಡಾಕ್ಟರ್ ತಾನಿಯಾ ವೈದ್ಯೆಯ ಕೈಯನ್ನು ಮಿಸುಕಾಡದಂತೆ ಹಿಡಿದುಕೊಂಡಿದ್ದಳು. ʼಇಂತಹ ಹುಡುಗಿಯರೊಂದಿಗೆ ಹಿಂದೂ ಸಹೋದರಿಯರು ಸ್ನೇಹ ಬೆಳೆಸದಿರಿʼ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಕೆಲವರು ತಾನಿಯಾ ಅವರ ಫೋಟೊ ಜೊತೆಗೆ ಡಾ. ಶಹಬಾಜ್ ಖಾನ್ ಎನ್ನುವವರ ಫೋಟೊವನ್ನು ಕೊಲಾಜ್ ಮಾಡಿ ಶೇರ್ ಮಾಡಲಾಗಿದೆ. ಈ ಫೋಟೊಗಳ ಜೊತೆಗೆ ಅಪರಾಧದಲ್ಲಿ ಭಾಗಿಯಾಗಿರುವ ಹಿರಿಯ ವೈದ್ಯರಲ್ಲಿ ಶಹಬಾಜ್ ಖಾನ್ ಕೂಡ ಒಬ್ಬ ಎಂದು ಕ್ಯಾಪ್ಷನ್ ಬರೆಯಲಾಗಿದೆ.
ಆದರೆ, ಈ ಚಿತ್ರಗಳನ್ನು ರಿವರ್ಸ್ ಇಮೇಜ್ ಸರ್ಚಿಂಗ್ ಮತ್ತು ಕೀವರ್ಡ್ ಸರ್ಚಿಂಗ್ ಮೂಲಕ ಹುಡುಕಿದಾಗ ಈ ಚಿತ್ರಗಳನ್ನು ಕಿಡಿಗೇಡಿಗಳು ಶಹಬಾಜ್ ಖಾನ್ ಮತ್ತು ತಾನಿಯಾ ಯಾಸ್ಮಿನ್ ಎಂಬ ವ್ಯಕ್ತಿಗಳ ಲಿಂಕ್ಡ್‌ಇನ್ ಪ್ರೊಫೈಲ್‌ಗಳಿಂದ ಎತ್ತಿಕೊಂಡಿರುವುದು ತಿಳಿದುಬಂದಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.
ಈ ವ್ಯಕ್ತಿಗಳ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಶಹಬಾಜ್ ಕೋಲ್ಕತ್ತಾದ ಕಾಲೇಜು ವಿದ್ಯಾರ್ಥಿ. ತಾನಿಯಾ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಪರೇಷನ್-ಥಿಯೇಟರ್ ತಂತ್ರಜ್ಞೆ. ಇವರ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಹೆಚ್ಚಿನ ವಿವರಗಳನ್ನು ನಾವು ಪ್ರಸಾರ ಮಾಡುತ್ತಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿಕೊಂಡಿದೆ.
ಮೊದಲಿಗೆ ಯಾರೋ ಒಬ್ಬರು ತಾನಿಯಾ ಯಾಸ್ಮಿನ್ ಅವರ ಫೋಟೋವನ್ನು ಗೂಗಲ್ ಸರ್ಚ್ ಮೂಲಕ ಪಡೆದುಕೊಂಡು ಈ ರೀತಿಯಾಗಿ ಹರಿಬಿಟ್ಟು ನಂತರ ಅದು ವೈರಲ್ ಆಗಿದೆ.
ಆಲ್ಟ್ ನ್ಯೂಸ್ ಈ ಕುರಿತು ತಾನಿಯಾ ಯಾಸ್ಮಿನ್ ಅವರನ್ನು ಮಾತನಾಡಿಸಿದ್ದು, ಮೂಲತ ಹೂಗ್ಲಿಯವರಾದ ಅವರು ಪ್ರಸ್ತುತ ಕೊಲ್ಕತ್ತಾದಲ್ಲಿ ವಾಸವಿದ್ದಾರೆ. ಆದರೆ ಈ ಟ್ವೀಟುಗಳಲ್ಲಿ ಹೇಳಿರುವಂತೆ ಅವರು ವೈದ್ಯೆಯಲ್ಲ. ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಾನಿಯಾ ಫೆಬ್ರವರಿ 2021ರಿಂದ ಮೇ 2023ರವರೆಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್ (OT ಟೆಕ್ನಿಷಿಯನ್) ಓದಿದ್ದಾರೆ.
ಅವರು ಹೇಳುವಂತೆ ಅವರು ಕೊನೆಯ ಬಾರಿ RG ಆಸ್ಪತ್ರೆಗೆ ಹೋಗಿದ್ದು 2023ರ ಡಿಸೆಂಬರ್ ತಿಂಗಳಿನಲ್ಲಿ. ತಮ್ಮ ಡಿಪ್ಲೋಮಾ ಸರ್ಟಿಫಿಕೇಟ್ ಪಡೆಯಲೆಂದು.
“ನಾನು ಆಗಸ್ಟ್ 9ರಂದು ನಾನು ಕೆಲಸಕ್ಕೆ ಹೋಗಿದ್ದೆ, ಆ ರಾತ್ರಿ ನಾನು ನನ್ನ ಪಿಜಿಯಲ್ಲಿದ್ದೆ. ಘಟನೆಯ ಕುರಿತು ನನಗೆ ತಿಳಿದಿದ್ದು ಮಾರನೇ ದಿನ. ನನಗೆ ಸಂತ್ರಸ್ತೆಯ ಪರಿಚಯ ಇತ್ತೇ ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ” ಎಂದು ತಾನಿಯಾ ಹೇಳಿದ್ದಾರೆ.
ಕೆಲವು ದಿನಗಳ ನಂತರ, ನನ್ನ ಹೆಸರು ಮತ್ತು ಫೇಸ್‌ಬುಕ್ ಪ್ರೊಫೈಲ್ ಲಿಂಕನ್ನು ಕೆಲವು ಬಳಕೆದಾರರು ಶೇರ್ ಮಾಡುತ್ತಿರುವುದು ನನಗೆ ತಿಳಿಯಿತು. ಅಲ್ಲಿ ಅವರು ನಾನು ಸಂತ್ರಸ್ತೆಯ ಸ್ನೇಹಿತೆಯಾಗಿದ್ದೆ ಮತ್ತು ಪ್ರಸ್ತುತ ನಾನು ದೇಶ ತೊರೆದಿದ್ದೇನೆ ಎಂದೂ ಬರೆಯಲಾಗಿತ್ತು.
ಇದರ ನಂತರ ನನಗೆ ಫೇಸ್ಬಕ್ಕಿನಲ್ಲಿ ನಿಂದನೆ ಹಾಗೂ ಬೆದರಿಕೆಗಳಿಂದ ಕೂಡಿದ್ದ ಸಂದೇಶಗಳು ಬರಲಾರಂಭಿಸಿದವು. ಇದಾದ ನಂತರ ನಾನು ಕೋಲ್ಕತ್ತಾ ಪೊಲೀಸರ ಸೈಬರ್ ಸೆಲ್‌ಗೆ ದೂರು ನೀಡಿದೆ ಎಂದು ತಾನಿಯಾ ಹೇಳಿದ್ದಾರೆ.
ತಾನಿಯಾ ಫೇಸ್‌ಬುಕ್ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಆಲ್ಟ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪಟುಲಿ ಪೊಲೀಸ್ ಠಾಣೆಯಲ್ಲಿ ಕೋಲ್ಕತ್ತಾ ಪೊಲೀಸರ ಸೈಬರ್ ಕ್ರೈಮ್ ಸೆಲ್‌ಗೆ ನೀಡಿದ ದೂರಿನ ಪ್ರತಿಯನ್ನು ಸಹ ನಾವು ನೋಡಿದ್ದೇವೆ. ದೂರಿನಲ್ಲಿ ಹೆಸರಿಸಲಾದ ಬಳಕೆದಾರರು ಸುದೀಪ್ತ ಕರ್ ಮತ್ತು ಐಶ್ವರ್ಯಾ ಸರ್ಕಾರ್ ಎಂದು ಆಲ್ಟ್ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.
ಈ ಕುರಿತು ಆಲ್ಟ್ ನ್ಯೂಸ್ ಆರ್‌ಜಿ ಆಸ್ಪತ್ರೆಯ ಕೆಲವು ವಿದ್ಯಾರ್ಥಿಗಳ ಬಳಿಯೂ ನಿಮಗೆ ತಾನಿಯಾ ಪರಿಚಯವಿದೆಯೇ ಎಂದು ವಿಚಾರಿಸಿದ್ದು ಅವರೆಲ್ಲರೂ ಇಲ್ಲ ಎಂದೇ ಉತ್ತರಿಸಿದ್ದಾರೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೊಳಪಡಿಸಿದ ಇತರ ನಾಲ್ವರು ಕಿರಿಯ ವೈದ್ಯರ ಹೆಸರೂ ಆಲ್ಟ್ ನ್ಯೂಸ್‌ಗೆ ತಿಳಿದಿದ್ದು, ಇವುಗಳಲ್ಲಿ ತಾನಿಯಾ ಯಾಸ್ಮಿನ್ ಅಥವಾ ತಾನಿಯಾ ಯಾಸ್ಮಿನ್ ಖಾತೂನ್ ಎಂಬ ಯಾವುದೇ ವ್ಯಕ್ತಿಯ ಹೆಸರಿಲ್ಲ ಎಂದು ಅದು ಹೇಳಿದೆ.
ಮಾಹಿತಿ: ಶಿಂಜಿನಿ ಮಜುಂದಾರ್ ಮತ್ತು ಓಶಾನಿ ಭಟ್ಟಾಚಾರ್ಯ
ಮೂಲ ವರದಿ: ಇಂದ್ರದೀಪ್ ಭಟ್ಟಾಚಾರ್ಯ