ಕೊಲೆಗೆ ಸಂಚು ರೂಪಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2021 ರಲ್ಲಿ ದಾಖಲಾಗಿ ತಣ್ಣಗಾಗಿದ್ದ ಪ್ರಕರಣವೊಂದು ಮತ್ತೆ ಜೀವ ಪಡೆದುಕೊಂಡಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚಿನ ಪ್ರಕರಣ ಈಗ ವಿಶ್ವನಾಥ್ ಅವರ ಮನವಿ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಾಸಕ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ವಿಶ್ವನಾಥ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿ ಕುಳ್ಳ ದೇವರಾಜ್ ಎಂಬುವವರು ಸೇರಿದಂತೆ ಪ್ರಮುಖರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಕುಳ್ಳ ದೇವರಾಜ್ ಮತ್ತಿತರರು ಅವರ ಮೇಲೆ ದಾಖಲಾಗಿದ್ದ FIR ನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ನಂತರ ವಿಚಾರಣೆ ನಡೆಸಿದ ನ್ಯಾಯಾಲಯ ಎಫ್ಐಆರ್ ರದ್ದು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿ ಶಾಸಕ ವಿಶ್ವನಾಥ್ ನ್ಯಾಯಾಲಯಕ್ಕೆ ಖಾಸಗಿ ಮೊಕದ್ದಮೆ ಹೂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್.ಆರ್.ವಿಶ್ವನಾಥ್ ಹೂಡಿದ ಮೊಕದ್ದಮೆಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಈಗ ಆರೋಪಿಗಳನ್ನು ಮರು ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ. ಈ ಸಂಬಂಧ ರಾಜಾನುಕುಂಟೆ ಪೊಲೀಸರು ಆರೋಪಿ ಕುಳ್ಳ ದೇವರಾಜ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.