ಬೆಂಗಳೂರು: ಎದ್ದೇಳು ಕರ್ನಾಟಕ ಸಂಘಟನೆಯಿಂದ ದಾವಣಗೆರೆಯಲ್ಲಿ ಏ026ರಂದು ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದೆ ಎಂದು ಸಂಘಟನೆಯ ಸಂಚಾಲಕಿ ಪ್ರಕಟಣೆಯಲ್ಲಿ ಶ್ರೀಗೌರಿ ಹೇಳಿದ್ದಾರೆ.
ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ ಮೇರೆಯುತ್ತಿದೆ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ದಿ, ಸೋದರತ್ವದ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ಹಾಕಿ ಕೊಡುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಕುಸಿಯುತ್ತಿವೆ. ಇವುಗಳೆಲ್ಲದ ಅದರ ಜಾಗೃತಿ ಮೂಡಿಸುವುದಕ್ಕಾಗಿ ಸಮಾವೇಶ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ವರನ್ನು ಒಳಗೊಂಡ ಬಹುತ್ವದ ಭಾರತವನ್ನು ಉಳಿಸಿಕೊಳ್ಳಲು ರಾಜ್ಯದ ಪ್ರತಿ ಊರು, ಕೇರಿ, ಹಾಡಿ, ಮೊಹಲ್ಲಾಗಳಲ್ಲಿ ಎದ್ದೇಳು ಕರ್ನಾಟಕದ ವತಿಯಿಂದ “ಸಂವಿಧಾನ ಸಂರಕ್ಷಣಾ ಪಡೆ” ಕಟ್ಟುವ ಮಹಾಯಾನಕ್ಕೆ ಚಾಲನೆಯಾಗಿ ದಾವಣಗೆರೆಯಲ್ಲಿ “ಸಂವಿಧಾನ ಸಂರಕ್ಷಕರ ಮಹಾ ಸಮಾವೇಶ” ಹಮ್ಮಿಕೊಳ್ಳಲಾಗುತ್ತಿದೆ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿದ್ದ ದಾವಣಗೆರೆ ಹೊಸ ತಲೆ ಮಾರಿನ ಮಹಾಯಾನಕ್ಕೆ ವೇದಿಕೆಯಾಗುತ್ತಿದೆ. ಏಪ್ರಿಲ್ 26ರಂದು ಶನಿವಾರ ದಾವಣಗೆರೆಯ ಕೇಂದ್ರ ನಗರಿಯ ಹೈಸ್ಕೂಲ್ ಫೀಲ್ಡ್ ಬಳಿಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂವಿಧಾನ ಈ ದೇಶದ ದುಡಿಯುವ ಜನರಾದ ರೈತ, ಕೂಲಿ, ಕಾರ್ಮಿಕ, ಸಾಮಾನ್ಯ ಜನರಿಗೆ ನೀಡಿದ್ದ ಹಕ್ಕುಗಳನ್ನೆಲ್ಲಾ ವೇಗಗತಿಯಲ್ಲಿ ರದ್ದುಗೊಳಿಸಲಾಗುತ್ತಿದೆ. ಈ ದೇಶದ ದಮನಿತ ಸಮುದಾಯಗಳಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ, ಅತಿಹಿಂದುಳಿದ, ಮಹಿಳಾ, ಲೈಂಗಿಕ ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳಿಗೆ ಸಾಮಾಜಿಕವಾಗಿ ಮುಂದೆ ಬರಲು ನೀಡಲಾಗಿದ್ದ ಅವಕಾಶಗಳ ಮಾರ್ಗಗಳನ್ನೆಲ್ಲಾ ಮುಚ್ಚಲಾಗುತ್ತಿದೆ. ಸರ್ಕಾರಿ ಶಿಕ್ಷಣ, ಸರ್ಕಾರಿ ಚಿಕಿತ್ಸೆ ಕಣ್ಮರೆಯಾಗುತ್ತಿವೆ. ಇವು ಲೂಟಿಕೋರ ದಂಧೆಗಳಾಗಿ ಪರಿವರ್ತನೆಯಾಗಿವೆ. ನಿರುದ್ಯೋಗ ವೇಗಗತಿಯಲ್ಲಿ ಹೆಚ್ಚಾಗುತ್ತಿದೆ. ಉದ್ಯೋಗ ಸಿಕ್ಕರೂ ಘನತೆಯಿಂದ ಬದುಕುವ ವೇತನವಿಲ್ಲ. ಜನಸಾಮಾನ್ಯರು ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿ ಬೆಳೆಯುತ್ತಿವೆ, ಜಾತಿ ಧರ್ಮದ ಹೆಸರಿನಲ್ಲಿ ನೆತ್ತರು ಹರಿದಾಡುತ್ತಿದೆ. “ನಾಡಲ್ಲವೋ ಇದು ವಿಷದ ಸಮುದ್ರ” ಎಂಬಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀಗೌರಿ ಹೇಳಿದ್ದಾರೆ.
ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಿದೆ. ಸ್ವಾತಂತ್ರ್ಯದ ದೀವಿಗೆ ಈಗ ನಮ್ಮ ಕೈಯಲ್ಲಿದೆ. ಅದನ್ನು ಹಿಡಿದುಕೊಂಡು ನಾಡಿಗೆ ಬೆಳಕು ನೀಡಬೇಕಿದೆ. ಆ ನಿಟ್ಟಿನಲ್ಲಿ ದೊಡ್ಡ ಪ್ರಯತ್ನವಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಅವರು ಕೋರಿದ್ದಾರೆ.