Home ಬೆಂಗಳೂರು ಬ್ಯಾಂಕಿನಿಂದ ಮೋಸ: ವಿಧಾನಸೌಧದ ಎದುರು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ದಂಪತಿ

ಬ್ಯಾಂಕಿನಿಂದ ಮೋಸ: ವಿಧಾನಸೌಧದ ಎದುರು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ದಂಪತಿ

0

ಬೆಂಗಳೂರು: ಬ್ಯಾಂಕ್ ವಂಚನೆ ಆರೋಪದ ಮೇಲೆ ಇಲ್ಲಿನ ವಿಧಾನಸೌಧದ ಎದುರು ಮುಸ್ಲಿಂ ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಡೆಸಿದ ಯತ್ನವನ್ನು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.

ದಂಪತಿಯನ್ನು ಜೆಜೆ ನಗರದ ನಿವಾಸಿಗಳಾದ 48 ವರ್ಷದ ಶಾಹಿಸ್ತಾ ಬಾನು ಮತ್ತು ಆಕೆಯ ಪತಿ ಮೊಹಮ್ಮದ್ ಮುನಯೀದ್ ಉಲ್ಲಾ ಎಂದು ಗುರುತಿಸಲಾಗಿದೆ.

ಬೆಂಗಳೂರು ಸಹಕಾರಿ ಬ್ಯಾಂಕ್‌ನಿಂದ ವಂಚನೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ನಿಮಿತ್ತ ಅವರು ವಸತಿ, ಮುಜರಾಯಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪರ್ಕಿಸಲು ಅವರು ಮಾಡಿದ ಪ್ರಯತ್ನಗಳು ವ್ಯರ್ಥವಾಗಿದ್ದವು.

ದಂಪತಿ ತಮ್ಮ ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಸ್ಥಳಕ್ಕೆ ಬಂದಿದ್ದರು. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಬಳಿಕ ದಂಪತಿ ಏಕಾಏಕಿ ಸೀಮೆಎಣ್ಣೆ ಇದ್ದ ಬಾಟಲಿಗಳನ್ನು ತೆಗೆದು ತಲೆ ಮೇಲೆ ಸುರಿದುಕೊಂಡಿದ್ದಾರೆ.

ಮುಂದಿನ ಕ್ರಮಕೈಗೊಳ್ಳುವ ಮುನ್ನವೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರ ಕಾರ್ಯವನ್ನು ತಡೆದು ವಶಕ್ಕೆ ತೆಗೆದುಕೊಂಡರು.

ಶಾಹಿಸ್ತಾ ತನ್ನ ಕುಟುಂಬವನ್ನು ಬ್ಯಾಂಕಿನವರು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬ್ಯಾಂಕ್ 3 ಕೋಟಿ ಮೌಲ್ಯದ ತಮ್ಮ ಕಟ್ಟಡವನ್ನು ಕೇವಲ 1.41 ಕೋಟಿಗೆ ಹರಾಜು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. “ನಮಗೆ ನ್ಯಾಯ ಬೇಕು. ಬ್ಯಾಂಕ್ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ. ಎರಡು ವರ್ಷಗಳಿಂದ ನಾವು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಲು ಅಲೆಯುತ್ತಿದ್ದೇವೆ, ನಮಗೆ ನ್ಯಾಯ ಸಿಕ್ಕಿಲ್ಲ” ಎಂದು ಅವರು ಹೇಳಿದರು.

ಶುಂಠಿ ಬೆಳೆಯಲು ಬ್ಯಾಂಕ್‌ನಿಂದ 50 ಲಕ್ಷ ರೂಪಾಯಿ ಸಾಲ ಮಾಡಿ ಸುಮಾರು 90 ಲಕ್ಷ ರೂಪಾಯಿಯನ್ನು ಬ್ಯಾಂಕ್‌ಗೆ ಪಾವತಿಸಿರುವುದಾಗಿ ಅವರು ತಿಳಿಸಿದ್ದಾರೆ.

ಹೈ ಡ್ರಾಮಾದ ನಂತರ, ಪೊಲೀಸರು ದಂಪತಿಗಳ ವಿರುದ್ಧ ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆಗೆ ಯತ್ನ ಮತ್ತು 290ರ ಅಡಿ ಸಾರ್ವಜನಿಕ ತೊಂದರೆಯನ್ನು ಸೃಷ್ಟಿಸಿದ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ದಂಪತಿಯಿಂದ ಇನ್ನು ಇಂತಹ ಪ್ರಯತ್ನ ಮಾಡುವುದಿಲ್ಲವೆನ್ನುವ ಭರವಸೆ ಪಡೆದು ನಂತರ ಬಂಧನದಿಂದ ಬಿಡುಗಡೆ ಮಾಡಿದರು.

You cannot copy content of this page

Exit mobile version