ಇಂಫಾಲ್ ಪೂರ್ವ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಆರಂಭಿಸಲು ರಾಹುಲ್ ಗಾಂಧಿಗೆ ಅನುಮತಿ ನೀಡಲು ಮಣಿಪುರ ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಮಣಿಪುರ ಕಾಂಗ್ರೆಸ್ ಪಕ್ಷ ಇದು ಜನರ ಹಕ್ಕುಗಳ ಉಲ್ಲಂಘನೆ ಹಾಗೂ ದುರದೃಷ್ಟಕರ ಎಂದು ಬಣ್ಣಿಸಿದೆ.
‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 14 ರಿಂದ ಮಣಿಪುರ ರಾಜ್ಯದ ಇಂಪಾಲ್ ಪೂರ್ವ ಜಿಲ್ಲೆಯಾದ ಹಟ್ಟಾ ಕಾಂಗ್ಜೆಬುಂಗ್‌ನಿಂದ ಪ್ರಾರಂಭವಾಗಬೇಕಿತ್ತು. ಆದರೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂದೆ ಆಗಬಹುದಾದ ಅನಾಹುತಗಳ ನೆಪದಿಂದ ಮಣಿಪುರ ಸರ್ಕಾರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ನಿರಾಕರಿಸಿದೆ
“ನಾವು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಲ್ಲಿ ರ್ಯಾಲಿಯನ್ನು ಶುರು ಮಾಡಲು ನಿರ್ಧರಿಸಿರುವ ‘ಭಾರತ್ ಜೋರೋ ನ್ಯಾಯ್ ಯಾತ್ರೆ’ ಸ್ಥಳಕ್ಕೆ ಅನುಮತಿ ಕೋರಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಅದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಪರ್ಯಾಯ ಸ್ಥಳವನ್ನು ನಾವು ಹುಡುಕಲಿದ್ದೇವ’’ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಹೇಳಿದರು.
ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಎಐಸಿಸಿ ನಾಯಕರು ಇದರ ನೇತೃತ್ವ ವಹಿಸಲಿದ್ದಾರೆ. ಯಾತ್ರೆಯು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದ್ದು, 66 ದಿನಗಳಲ್ಲಿ 15 ರಾಜ್ಯಗಳಲ್ಲಿ 6700 ಕಿ.ಮೀ. ಈ ಯಾತ್ರೆಯು 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.