ಕಾಂತಾರ ಸಿನೆಮಾದ ವರಹಾ ರೂಪಮ್ ಹಾಡಿಗೆ ಕೋಳಿಕೋಡ್ ಜಿಲ್ಲಾ ನ್ಯಾಯಾಲಯವು ತಡೆ ನೀಡಿ ಆದೇಶ ನೀಡಿದೆ. ಈ ಕುರಿತು ಕಾಂತಾರ ತಂಡದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.
ಇತ್ತೀಚೆಗೆ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಕಾರಣಗಳಿಗಾಗಿ ಸುದ್ದಿಯಾಗಿದ್ದ ಕಾಂತಾರ ಸಿನೆಮಾ ಈಗ ಮತ್ತೆ ಸದ್ದು ಮಾಡಿದೆ. ಆದರೆ ಈ ಬಾರಿ ಅದು ಸದ್ದು ಮಾಡಿರುವುದು ಅಷ್ಟೇನೂ ಒಳ್ಳೆಯ ಕಾರಣಕ್ಕಲ್ಲ.
ಕಾಂತಾರ ಚಿತ್ರ ನೋಡಿದವರಿಗೆ ʼವರಹಾ ರೂಪಮ್ʼ ಎಂದು ಆರಂಭಗೊಳ್ಳುವ ಹಾಡು ಕೂಡಾ ಗೊತ್ತಿರುತ್ತದೆ, ಈ ಹಾಡು ಇಡೀ ಚಿತ್ರದ ಆತ್ಮದಂತೆ ಕಂಗೊಳಿಸುತ್ತಿತ್ತು. ಈ ಹಾಡು ಬಿಡುಗಡೆಯಾದ ದಿನದಿಂದಲೂ ಒಂದಷ್ಟು ಜನರು ಇದು ತೈಕ್ಕುಡಮ್ ಬ್ರಿಡ್ಜ್ ಎನ್ನುವ ಬ್ಯಾಂಡ್ ನಿರ್ಮಿಸಿದ ನವರಸ ಎನ್ನುವ ಫ್ಯೂಷನ್ ಮ್ಯುಸಿಕ್ಕಿನ ಮಕ್ಕಿ ಕಾ ಮಕ್ಕಿ ಕಾಪಿ ಎಂದು ಹೇಳಿದ್ದರಾದರೂ, ಚಿತ್ರ ಮತ್ತು ಅದರ ಹಾಡುಗಳಿಗೆ ದೊರಕಿದ್ದ ದೊಡ್ಡ ಯಶಸ್ಸಿನಡಿ ಅಪ್ಪಚ್ಚಿಯಾಗಿತ್ತು.
ಆದರೆ ಈ ಕುರಿತು ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಅವರನ್ನು ಕೇಳಿದಾಗ ಅವರು, “ನಾವು ಕಾಪಿ ಮಾಡಿಲ್ಲ, ಸ್ಫೂರ್ತಿ ಪಡೆದಿದ್ದೇವಷ್ಟೇ. ರಾಗಗಳು ಒಂದೇ ರೀತಿಯಿರುವ ಕಾರಣ ಹಾಗೆ ಕೇಳಿಸುತ್ತದೆ,” ಎನ್ನುವ ಅರ್ಥದ ಮಾತುಗಳನ್ನಾಡಿದ್ದರು.
ಚಿತ್ರ ಇತರ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಾಣುವ ಹೊತ್ತಿನಲ್ಲೇ ಥೈಕ್ಕುಡಮ್ ಬ್ರಿಡ್ಜ್ ಈ ಹಾಡಿನ ವಿಷಯದಲ್ಲಿ ತಾನು ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟಿಗೆ ಹೋಗಿದ್ದ ಥೈಕ್ಕುಡಮ್ ತಂಡಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ. ಈ ಕೋರ್ಟು ತೈಕ್ಕುಡಮ್ ಬ್ರಿಡ್ಜ್‌ನ ಅನುಮತಿಯಿಲ್ಲದೆ ಈ ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದೆ ಎಂದು ತಂಡ ತನ್ನ ಫೇಸ್‌ಬುಕ್ ಪೇಜಿನಲ್ಲಿ ಪ್ರಕಟಿಸಿದೆ.
ಕೋಳಿಕ್ಕೋಡ್ ಜಿಲ್ಲಾ ಕೋರ್ಟ್ ನ್ಯಾಯಾಧೀಶರು ಹಾಡಿಗೆ ತಡೆಯಾಜ್ಞೆ ನೀಡಿ. ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಜೊತೆಗೆ Amazon, YouTube, Spotify, Wynk, ಸಂಗೀತ, ಜಿಯೋ ಸಾವನ್ ಮತ್ತು ಇತರರು ತೈಕ್ಕುಡಂ ಬ್ರಿಡ್ಜ್ ಅನುಮತಿ ಪಡೆಯದೇ ಸದರಿ ಬಳಸುವಂತಿಲ್ಲ ಎಂದು ಆದೇಶ ನೀಡಿದ್ದಾರೆ.