Monday, April 29, 2024

ಸತ್ಯ | ನ್ಯಾಯ |ಧರ್ಮ

ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್ ಸೋಂಕು ; ಒಂದೇ ದಿನದಲ್ಲಿ 335 ಪ್ರಕರಣ ದೃಢ

ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಕಂಡುಬಂದಿದ್ದು, ಒಂದೇ ದಿನದಲ್ಲಿ 335 ಪ್ರಕರಣದಲ್ಲಿ ಕೋವಿಡ್ ಸೋಂಕು ಧೃಢಪಟ್ಟಿದೆ. ಈಗಾಗಲೇ ದೇಶಾದ್ಯಂತ ದಾಖಲಾದ ಪ್ರಕರಣದಲ್ಲಿ 1701 ಪ್ರಕರಣ ದೃಢವಾಗಿದೆ.

ತಜ್ಞರ ಪ್ರಕಾರ ಈ ಬಾರಿ ಶುರುವಾಗಿರುವ ಕೋವಿಡ್ ತುಂಬಾ ಪರಿಣಾಮಕಾರಿಯಾಗಿದ್ದು ಕೇವಲ 1701 ಪ್ರಕರಣಗಳಲ್ಲೇ ಕೇರಳ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 5 ಮಂದಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಈ ಹಿಂದೆ ಕಾಣಿಸಿಕೊಂಡ ಕೋವಿಡ್ ಗಿಂತ ಇದು ಹೆಚ್ಚು ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4.46 ಕೋಟಿಗೆ (4,44,69,799) ಏರಿಕೆಯಾಗಿದೆ. ರಾಷ್ಟ್ರೀಯ ಚೇತರಿಕೆ ದರವನ್ನು 98.81 ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ, ಕೋವಿಡ್ -19 ನಿಂದ 5,33,316 ಜನರು ಸಾವನ್ನಪ್ಪಿದ್ದಾರೆ ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲೂ ಕೇರಳ ಗಡಿ ಭಾಗದ ಕರ್ನಾಟಕದ ಜಿಲ್ಲೆಗಳಾದ ಮೈಸೂರು, ಕೊಡಗು, ದಕ್ಷಿಣ ಕನ್ನಡ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಪ್ರಕರಣಗಳಲ್ಲಿ ಸ್ವಲ್ಪ ಮಟ್ಟಿಗೆ ಕಾಣುವ ಏರಿಕೆ ಮತ್ತು ಸೋಂಕಿತರ ಆರೋಗ್ಯ ನಿಭಾಯಿಸಲು ಕರ್ನಾಟಕವು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದೆ ಎಂದು ಭರವಸೆ ನೀಡುವ ಮೂಲಕ ಜನರು ಭಯಭೀತರಾಗಬೇಡಿ ಎಂದು ಸಚಿವರು ಹೇಳಿದ್ದಾರೆ. ಆದರೆ ಯಾವುದೇ ಸಂದರ್ಭದಲ್ಲೂ ಪ್ರಕರಣ ಹೆಚ್ಚಿದರೆ ಸೂಕ್ತ ರೀತಿಯ ಕ್ರಮಕ್ಕೆ ರಾಜ್ಯದ ಎಲ್ಲಾ ಆಸ್ಪತ್ರೆಗಳು ಸಜ್ಜಾಗಬೇಕು ಎನ್ನುವ ಕರೆ ಆರೋಗ್ಯ ಇಲಾಖೆಯಿಂದ ನೀಡಲಾಗಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆಯನ್ನು ನಿಗದಿಪಡಿಸಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಕೆ.ರವಿ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸಭೆಯಲ್ಲಿ, ಯಾವುದೇ ಸಂದರ್ಭದಲ್ಲೂ ಎದುರಾಗುವ ವಿಪತ್ತಿಗೆ ರಾಜ್ಯದ ಆರೋಗ್ಯ ಇಲಾಖೆ ಸಜ್ಜಾಗಲು ಕರೆ ನೀಡಲಿದ್ದಾರೆ.

ಪ್ರಸ್ತುತ, ಕರ್ನಾಟಕಲ್ಲಿ ಸೋಂಕು ಹರಡುವ ಪ್ರಮಾಣದಲ್ಲಿ ಅಷ್ಟು ಏರಿಕೆ ಇಲ್ಲದಿದ್ದರೂ 58 ಸಕ್ರಿಯ ಪ್ರಕರಣಗಳನ್ನು ವರದಿ ಮಾಡಿದೆ. 11 ಪ್ರಕರಣಗಳು ಆಸ್ಪತ್ರೆಗೆ ದಾಖಲಾಗಿದೆ ಮತ್ತು ಒಂದು ಕೋವಿಡ್-ಸಂಬಂಧಿತ ಸಾವು ಸಂಭವಿಸಿದೆ. ಸಾವಿಗೆ ಈಡಾದ ವ್ಯಕ್ತಿಗೆ ಕೋವಿಡ್ ಮಾತ್ರವಲ್ಲದೆ ಇತರೆ ಪರಿಣಾಮಕಾರಿ ಕಾಯಿಲೆಗಳೂ ಇದ್ದು, ಕೋವಿಡ್ ನಿಂದಲೇ ಆದ ಸಾವು ಎಂದು ನಿಖರವಾಗಿ ಹೇಳಲಾಗದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು