ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಜೊತೆ ಕೈಜೋಡಿಸಲು ಸಿದ್ಧವಿರುವುದಾಗಿ ಸಿಪಿಐ(ಎಂ) ಸ್ಪಷ್ಟಪಡಿಸಿದೆ. ತಿರುವನಂತಪುರಂನಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಎರಡನ್ನೂ ಸೋಲಿಸುವುದು ಸಿಪಿಐ(ಎಂ) ಗುರಿಯಾಗಿದೆ. ಇದಕ್ಕಾಗಿ ಬಿಜೆಪಿ ಮತ್ತು ಟಿಎಂಸಿ ವಿರೋಧಿ ಮತಗಳು ಒಗ್ಗೂಡಬೇಕಿದ್ದು, ಕಾಂಗ್ರೆಸ್ ಜೊತೆಗಿನ ಚುನಾವಣಾ ಹೊಂದಾಣಿಕೆಗೆ ಪಕ್ಷ ಮುಕ್ತವಾಗಿದೆ ಎಂದು ತಿಳಿಸಿದೆ. 2016 ಮತ್ತು 2021ರ ಚುನಾವಣೆಯಲ್ಲೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು.
ಕೇರಳದಲ್ಲಿ ಕಾಂಗ್ರೆಸ್ ವಿರುದ್ಧ ಸಮರ:
ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಸಿದ್ಧವಿದ್ದರೂ, ಕೇರಳದಲ್ಲಿ ಮಾತ್ರ ಕಾಂಗ್ರೆಸ್ ವಿರುದ್ಧವೇ ಸೆಣಸಾಡುವುದಾಗಿ ಸಿಪಿಐ(ಎಂ) ಘೋಷಿಸಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಹಿಂದುತ್ವ ಶಕ್ತಿಗಳ ವಿರುದ್ಧ ಹಾಗೂ ಆರೆಸ್ಸೆಸ್-ಬಿಜೆಪಿ ಕೋಮು ಸಿದ್ಧಾಂತದ ವಿರುದ್ಧ ಹೋರಾಡುವಲ್ಲಿ ವಿಫಲವಾಗಿದೆ ಎಂದು ಸಿಪಿಐ(ಎಂ) ಗಂಭೀರ ಆರೋಪ ಮಾಡಿದೆ. ಅಲ್ಲದೆ, ಕೇಂದ್ರ ಸರ್ಕಾರ ಕೇರಳದ ಮೇಲೆ ನಡೆಸುತ್ತಿರುವ ಆರ್ಥಿಕ ತಾರತಮ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯನ್ನು ಸಂಸತ್ತಿನಲ್ಲಿ ವಿರೋಧಿಸುವಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ಎಡವಿದೆ ಎಂದು ಟೀಕಿಸಿದೆ.
ತಮಿಳುನಾಡಿನಲ್ಲಿ ಬಿಜೆಪಿಯನ್ನು ಸೋಲಿಸಲು ಡಿಎಂಕೆ ನೇತೃತ್ವದ ಒಕ್ಕೂಟದೊಂದಿಗೆ (ಕಾಂಗ್ರೆಸ್ ಒಳಗೊಂಡಂತೆ) ಸೇರಿ ಚುನಾವಣೆ ಎದುರಿಸುವುದಾಗಿ ಪಕ್ಷ ತಿಳಿಸಿದೆ. ಅದೇ ರೀತಿ ಅಸ್ಸಾಂ ಮತ್ತು ಪುದುಚೇರಿಯಲ್ಲೂ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗೆ ಕೈಜೋಡಿಸುವುದಾಗಿ ಸಿಪಿಐ(ಎಂ) ಹೇಳಿದೆ.
