ಮೀಡಿಯಾ ಅಕಾಡೆಮಿಕ್, ಲೇಖಕಿ ಮತ್ತು ಪಾಡ್ ಕಾಸ್ಟರ್ ಗಾಯತ್ರಿ ಶ್ರೀವಾಸ್ತವ ಅವರು ಅಹಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕ್ರಿಕೆಟ್ ವಿಶ‍್ವಕಪ್ ನ ಅಂತಿಮ ಸುತ್ತಿನ ಅಟ ವೀಕ್ಷಿಸಲು ಹೋಗಿದ್ದರು. ಅಲ್ಲಿ ತಾನು ಕಂಡದ್ದನ್ನು, ಅನುಭವಿಸಿದ್ದನ್ನು ಲೇಖನವಾಗಿಸಿ ಆವಾಜ್ ಸೌತ್ ಏಶಿಯಾ ಡಾಟ್ ಕಾಮ್ ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನವನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ
‘ದೊಡ್ಡದೆಲ್ಲವೂ ಸುಂದರವಾಗಿರಬೇಕಾಗಿಲ್ಲ’. ಇದು ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ನೋಡಿದ ಬಳಿಕ ನಾನು ಕಲಿತ ಪಾಠ.
ನಾನು ನನ್ನ ಒಂಬತ್ತನೆಯ ಹರೆಯದಿಂದಲೂ ಕ್ರಿಕೆಟ್ ಅಭಿಮಾನಿಯಾಗಿದ್ದವಳು. ಇದಕ್ಕೆ ಕಾರಣ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ 1983 ರಲ್ಲಿ ವಿಶ್ವಕಪ್ ಗೆದ್ದುದು.
ಈ ಬಾರಿ ಮೊಹಾಲಿಯಲ್ಲಿ ಕ್ರಿಕೆಟ್ ವಿಶ‍್ವಕಪ್ ನ ಒಂದೇ ಒಂದು ಪಂದ್ಯ ಆಡದೇ ಇದ್ದುದು, ದೂರದ ಧರ್ಮಶಾಲಾದಲ್ಲಿ ಅನೇಕ ಪಂದ್ಯ ಆಡಿದ್ದು, ಮುಂಬಯಿ ಮತ್ತು ಕೊಲ್ಕತ್ತಾದಲ್ಲಿ ಸೆಮಿ ಫೈನಲ್ ಮಾತ್ರ ಆಡಿದ್ದು, ದಿಲ್ಲಿಯಲ್ಲಿ ಒಂದೇ ಒಂದು ಪಂದ್ಯ ಆಡಿದ್ದು, ಅಹಮದಾಬಾದ್ ನಲ್ಲಿ ಫೈನಲ್ ಆಡುತ್ತಿರುವುದು ಈ ಬಗ್ಗೆ ನನಗೆ ಸಮಾಧಾನವಿರಲಿಲ್ಲ. ಇದನ್ನು ನಾನು ನನ್ನ ಆಪ್ತರಲ್ಲಿ ಹೇಳಿಕೊಂಡಿದ್ದೆ ಕೂಡಾ.
ಕ್ರಿಕೆಟ್ ಪ್ರೇಮಿಯಾಗಿ ಇತ್ತೀಚೆಗೆ ನಾನು ಹೈದರಾಬಾದ್ ನಲ್ಲಿ ಪಾಕಿಸ್ತಾನ ಶ್ರೀಲಂಕಾ ನಡುವೆ ನಡೆದ ಪಂದ್ಯ ನೋಡಲು ನನ್ನ ಗಂಡನ ಜತೆಯಲ್ಲಿ ಹೋಗಿದ್ದೆ. ಅದೊಂದು ಅದ್ಭುತ ಪಂದ್ಯವಾಗಿತ್ತು. ಪ್ರತೀ ತಂಡದಿಂದ ಎರಡರಂತೆ ನಾಲ್ಕು ಸೆಂಚುರಿ ಬಾರಿಸಲ್ಪಟ್ಟಿದ್ದವು. ಅಲ್ಲಿ ಕ್ರಿಕೆಟನ್ನು ಸಂಭ್ರಮಿಸುವ ಒಳ್ಳೆಯ ಪ್ರೇಕ್ಷಕರಿದ್ದರು ಕೂಡಾ. ಗಲಾಟೆ ಇರಲಿಲ್ಲ. ಭಾರತ ಒಳಗೊಂಡ ಇತರ ಪಂದ್ಯಗಳಿಗೆ ಹೋಲಿಸಿದರೆ ಅಲ್ಲಿ ಸುಲಭದಲ್ಲಿ ಟಿಕೆಟ್ ದೊರೆಯುವಂತಿತ್ತು.
ಆದರೆ ರಾಜೀವ ಗಾಂಧಿ ಸ್ಟೇಡಿಯಂ ಅಷ್ಟೊಂದು ಸ್ವಚ್ಛವಾಗಿರಲಿಲ್ಲ. ಆಸನಗಳೂ ಆರಾಮದಾಯಕ ವಾಗಿರಲಿಲ್ಲ. ಇದು ಹೈದರಾಬಾದ್ ನ ಇಮೇಜ್ ಗೆ ಧಕ್ಕೆ ತರುವಂತಿತ್ತು. ಆದರೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಚೆನ್ನಾಗಿ ನಿರ್ವಹಣೆ ಮಾಡಲ್ಪಟ್ಟಿದ್ದವು.
ಅಹಮದಾಬಾದ್ ನ ಅನುಭವ
ಅಹಮದಾಬಾದ್ ನ ಅನುಭವವಾದರೋ ತೀರಾ ಭಿನ್ನವಾಗಿತ್ತು. ಹರಸಾಹಸ ಪಟ್ಟು, ಮುಂಬಯಿಯ ಗೆಳೆಯರೊಬ್ಬರ ಸಹಾಯ ಪಡೆದು, ದುಬಾರಿ ಟಿಕೆಟ್ ಖರೀದಿಸ ಬೇಕಾಯಿತು. ದಿಲ್ಲಿ ಅಹಮದಾಬಾದ್ ವಿಮಾನಯಾನ ದರವೂ ದುಬಾರಿಯಾಗಿತ್ತು. ಅಂತೂ ಕ್ರಿಕೆಟ್ ಫೈನಲ್ ವೀಕ್ಷಿಸುವ ಆಸೆಯಿಂದ ಶನಿವಾರ ರಾತ್ರಿ ಒಬ್ಬಳೇ ಅಹಮದಾಬಾದ್ ಗೆ ಪಯಣಿಸಿದೆ.
ವಿಮಾನ ತೀರಾ ತಡವಾಗಿ ತಲಪಿತು. ನೋಡಿದರೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣ ತುಂಬಾ ಖಾಸಗಿ ಜೆಟ್ ಗಳು ಮತ್ತು ಬಾಡಿಗೆ ವಿಮಾನಗಳು ನಿಂತಿದ್ದವು. ಉತ್ಸಾಹ ಎಲ್ಲೆಲ್ಲೂ ಎದ್ದು ಕಾಣುವಂತಿತ್ತು. ಎಲ್ಲೆಲ್ಲಿಂದಲೋ ಎಲ್ಲ ಕ್ರಿಕೆಟ್ ಪ್ರೇಮಿಗಳು ಧಾವಿಸಿದ್ದರು. ಧೋನಿ, ರೋಹಿತ್, ವಿರಾಟ್, ಶಮಿ ಹೀಗೆ ಕ್ರಿಕೆಟ್ ನದೇ ಮಾತು.
ಮಾರನೇ ದಿನ 29 ನೇ ಓವರ್ ನಲ್ಲಿ ಪ್ಯಾಟ್ ಕಮಿನ್ಸ್ ಬಾಲಿಗೆ ವಿರಾಟ್ ಔಟಾಗುವ ವರೆಗೂ ಈ ಮೂಡ್ ಹೀಗೆಯೇ ಇತ್ತು. ಆತ ಔಟಾಗುತ್ತಲೇ ಮೂಡ್ ನಿರಾಸಕ್ತಿಯಿಂದ ಅವಿಶ್ವಾಸದತ್ತ ಬದಲಾಯಿತು. ಏನಾಗುತ್ತಿದೆ ಎಂಬುದನ್ನು ಜನ ನಂಬಲೇ ಸಿದ್ಧರಿರಲಿಲ್ಲ. ಆಮೇಲೆ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತು.
ಅವ್ಯವಸ್ಥೆ
ನಿಜ, ಅಹಮದಾಬಾದ್ ನ ಪ್ರೇಕ್ಷಕರು ಸಭ್ಯರಾಗಿರಲಿಲ್ಲ, ಪಕ್ಷಪಾತಿಯಾಗಿದ್ದರು, ಜಿಂಗೋಯಿಸಂ (ರಾಷ್ಟ್ರ ದುರಭಿಮಾನ) ಅತಿಯಾಗಿತ್ತು, ತುಂಬಾ ಗದ್ದಲವಿತ್ತು. ಅದಕ್ಕಿಂತಲೂ ಮುಖ್ಯವಾಗಿ, ಜಗತ್ತಿನ ಅತಿದೊಡ್ಡ ಸ್ಟೇಡಿಯಂನಲ್ಲಿ ಸದ್ದಿನ ಪ್ರತಿಧ್ವನಿ ಅಸಹನೀಯವಾಗಿತ್ತು. ಕುಳಿತವರಿಗೆ ಕಾರ್ಯಕ್ರಮ ನಿರ್ವಾಹಕರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಆ ರೀತಿಯಲ್ಲಿ ಸದ್ದು, ಪ್ರತಿಧ್ವನಿ, ಬರೇ ಗದ್ದಲ, ಗದ್ದಲ.
ಸ್ಟೇಡಿಯಂ ನ ಪ್ರವೇಶ ದ್ವಾರ ತೀರಾ ಅವ್ಯವಸ್ಥೆಯಿಂದ ಕೂಡಿತ್ತು. ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಯಾರಿಗೂ ಏನೂ ಆಗದಿದ್ದುದು ಪುಣ್ಯ. ನೂಕಾಟ ತಳ್ಳಾಟ ವಿಪರೀತವಿತ್ತು. ಅಧಿಕೃತ ಟಿಕೆಟ್ ಹೊಂದಿದ್ದಾಗಲೂ ಇಂತಹ ಅನುಭವವಾಯಿತು. ವಿದೇಶೀಯರಿಗಂತೂ ಇದು ಸಹಜವಾಗಿಯೇ ತೀರಾ ಆಘಾತದ ಅನುಭವ.
ಜಗತ್ತಿನ ಅತಿದೊಡ್ಡ ಸ್ಟೇಡಿಯಂನ ಸೀಟುಗಳು ತೀರಾ ಇಕ್ಕಟ್ಟಿನಿಂದ ಕೂಡಿದ್ದವು. ಪ್ರತೀ ಸ್ಟಾಂಡ್ ನಲ್ಲಿ 50 ಅಡ್ಡ ಸಾಲುಗಳು. ಆದ್ದರಿಂದ ತೀರಾ ಕೆಳಗಿನ ಸ್ಟಾಂಡ್ ನವರಿಗೂ ಆಟದ ಒಳ್ಳೆಯ ನೋಟ ಸಿಗುವುದು ಸಾಧ್ಯವಿರಲಿಲ್ಲ. ನೋಡುವ ಖುಷಿ ಅನುಭವಿಸುವುದನ್ನು ಗಮನದಲ್ಲಿರಿಸಿಕೊಳ್ಳದೆಯೇ ಸ್ಟೇಡಿಯಂ ನಿರ್ಮಿಸಲಾಗಿದೆಯೇನೋ ಅನಿಸಿತು. ಸೀಟುಗಳ ಸಂಖ್ಯೆಯೂ ವಿಪರೀತ, ಆದರೆ ವೀಕ್ಷಣೆಯ ಸುಖ ಸೀಮಿತ.
ಇಂತಹ ಪಂದ್ಯ ನಡೆಯುವಾಗ ಒಂದು ಲಕ್ಷ ಜನರಿಗೆ ಆಹಾರ ಒದಗಿಸುವುದು ದೊಡ್ಡ ಸವಾಲು. ಆ ವಿಚಾರದಲ್ಲಿಯೂ ವೀಕ್ಷಕರಿಗೆ ಆದುದು ಬೇಸರವೇ. ಭಾರತ ಗೆಲ್ಲುವ ಪಂದ್ಯವಲ್ಲವೇ? ಆದ್ದರಿಂದ ದುಬಾರಿ ಆಹಾರಕ್ಕೆ ಜನ ಸಿದ್ಧರಾಗಿದ್ದರು. ನೀರು ಉಚಿತವಾಗಿತ್ತು. ಆದರೆ ಕೇವಲ ಒಂದು ಬಾಟಲಿ! ನಾನು ಕುಳಿತ ಜಾಗದಲ್ಲಿ ಒಂದೇ ಒಂದು ಕಾಫಿ ಚಹಾ ಸ್ಟಾಲ್ ಇತ್ತು. ಇದು ಸಾವಿರಾರು ಮಂದಿಗೆ ಸಾಕೇ? ಜನ ತಂಪು ಪಾನೀಯ ಖರೀದಿಸುವಂತೆ ಬಲವಂತಪಡಿಸುವುದು ಇದರ ಉದ್ದೇಶವಾಗಿರಬಹುದೇ?
ಸ್ಟೇಡಿಯಂ ನಲ್ಲಿ ಪ್ಯೂರ್ ವೆಜ್ ಆಹಾರ ಮಾರುತ್ತಿದ್ದರು. ಬರ್ಗರ್, ಪಿಜ್ಜಾ, ಭೇಲ್, ಸಮೋಸಾ, ಮಸಾಲಾ ಕಾರ್ನ್, ಪಾಪ್ ಕಾರ್ನ್, ಐಸ್ ಕ್ರೀಮ್ ಇತ್ಯಾದಿ. ರಾತ್ರಿ ಎಂಟು ಗಂಟೆಗಾಗುವಾಗ ಎಲ್ಲವೂ ಖಾಲಿ. ನೆನಪಿಡಿ- ಕ್ರಿಕೆಟ್ ಅಭಿಮಾನಿಗಳು ಸುಮಾರು ಪೂರ್ವಾಹ್ನ 11.30 ಕ್ಕೇ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು (ಸ್ವತಃ ನಾನೇ ನನ್ನ ಸಂಬಂಧಿಯ ಮನೆಯಿಂದ ಬೆಳಗ್ಗೆ 10 ಕ್ಕೆ ಹೊರಟು, 12.15 ಕ್ಕೆ ಕ್ರೀಡಾಂಗಣದ ಒಳಗಿದ್ದೆ). ಅವರ ಹಸಿವು ನೀಗಿಸುವ ವ್ಯವಸ್ಥೆಯ ಕತೆ ಏನು? ಆರಂಭದಲ್ಲೇನೋ ಶೌಚಾಲಯಗಳು ಸ್ವಚ್ಛವಿದ್ದವು. ಮ್ಯಾಚ್ ಮುಂದುವರಿಯುತ್ತಿದ್ದಂತೆ ಎಲ್ಲವೂ ಗಲೀಜಾದವು.
ನಿರ್ಗಮಿಸಲು ಸಿದ್ಧಳಾದೆ
ಪಂದ್ಯದ ಏಕೈಕ ಶತಕ ಬಾರಿಸಿದ್ದು ಟ್ರಾವಿಸ್ ಹೆಡ್. ಆಸ್ಟ್ರೇಲಿಯಾದ ಗೆಲುವಿನ ಶತಕವದು. ಆತ ಸೆಂಚುರಿ ಹೊಡೆಯುತ್ತಲೇ ಪಂದ್ಯದ ಫಲಿತಾಂಶ ಗೋಡೆಯ ಮೇಲಿನ ಬರಹದಷ್ಟು ಸ್ಪಷ್ಟವಾಯಿತು. ಆದ್ದರಿಂದ, ಅನೇಕರಂತೆ ನಾನೂ ಕ್ರೀಡಾಂಗಣದಿಂದ ನಿರ್ಗಮಿಸಲು ಸಿದ್ಧಳಾದೆ.
ಭಾರತ ಸೋತ ಬಳಿಕ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು? ಲಕ್ಷ ಜನ ಒಮ್ಮೆಲೇ ಕ್ರೀಡಾಂಗಣದಿಂದ ಹೊರಬರುವಾಗ ಪರಿಸ್ಥಿತಿ ಹೇಗಿರಬಹುದು ಎಂಬ ಬಗ್ಗೆ ನನಗೆ ಅರಿವಿತ್ತು. ಆಗಲೇ ನನಗೆ ಜ್ಞಾನೋದಯವಾದುದು – ‘ದೊಡ್ಡದು ಯಾವತ್ತೂ ಸುಂದರವಾಗಿರಬೇಕಾಗಿಲ್ಲ’ ಎನ್ನುವುದು. ಜನ ಆಗಲೇ ತಾಳ್ಮೆ ಕಳೆದುಕೊಂಡಿದ್ದರು, ನಿರಾಶರಾಗಿದ್ದರು. ನನ್ನನ್ನೂ ಸೇರಿದಂತೆ, ಜನ ಬಂದುದು ಭಾರತದ ವಿಜಯವನ್ನು ನೋಡಲಲ್ಲವೇ?!
ನನ್ನ ಪರಿಸ್ಥಿತಿ ಹೇಗಿತ್ತೆಂದರೆ, ನಾನು ಒಬ್ಬಳೇ ಗಾಂಧಿನಗರಕ್ಕೆ ವಾಪಸ್ ಹೋಗಬೇಕಾಗಿತ್ತು. ಕ್ಯಾಬ್ ಸಿಗುವುದೇ ದೊಡ್ಡ ಸಂಗತಿ. ಹೀಗೆ ಸುಮಾರು ಒಂಬತ್ತು ಗಂಟೆಗೆ ಪಂದ್ಯದ ಏಕೈಕ ಶತಕಕ್ಕೆ ಚಪ್ಪಾಳೆ ಹೊಡೆದು, ಬ್ಯಾಟರಿ ಮುಗಿಯುತ್ತ ಬಂದಿದ್ದ (ಪವರ್ ಬ್ಯಾಂಕ್ ಒಯ್ಯಲು ಅವಕಾಶ ಇರಲಿಲ್ಲ) ಮೊಬೈಲ್ ನೊಂದಿಗೆ ಕ್ರೀಡಾಂಗಣದಿಂದ ಹೊರಬಿದ್ದೆ. 9.45 ಕ್ಕೆ ಕ್ಯಾಬ್ ನಲ್ಲಿ ಕುಳಿತೆ. ನನ್ನ ಸ್ನೇಹಿತೆ ಮೆಟ್ರೋದಲ್ಲಿ ತನ್ನ ಹೊಟೇಲ್ ಗೆ ಹೋದಳು. ಅಲ್ಲೂ ಮೈಲುಗಟ್ಟಲೆ ಕ್ಯೂ ಇತ್ತು ಎಂದು ತಿಳಿಯಿತು. ಯಾಕೆಂದರೆ, ದೇಶ ವಿದೇಶದಿಂದ ಮ್ಯಾಚ್ ನೋಡಲು ಜನ ಬಂದಿದ್ದರು. ಹೊಟೇಲ್ ತುಂಬಾ ದುಬಾರಿ ಇದ್ದುದರಿಂದ ಕೆಲವರಂತೂ ಹಿಂದಿನ ರಾತ್ರಿಯೇ ಕ್ರೀಡಾಂಗಣದಲ್ಲಿ ಉಳಿದಿದ್ದರು. ಹೀಗೆ, ಏರಿದ್ದ ಉನ್ಮಾದವೆಲ್ಲ ಭಾನುವಾರ ರಾತ್ರಿ ಇಳಿದಿತ್ತು. ಪ್ರೇಕ್ಷಕರಿಗೆ ಮನೆ ತಲಪುವುದೇ ದೊಡ್ಡ ಚಿಂತೆಯ ವಿಷಯವಾಗಿತ್ತು. ಹಾಗಾಗಿ, ಕ್ರಿಕೆಟ್ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ಸಮಯ ಇರಲಿಲ್ಲ.
ನಿಜ. ಪ್ರೇಕ್ಷಕರು ಕೆಟ್ಟದಾಗಿ ವರ್ತಿಸಿದರು. ಆದರೆ ಇದಕ್ಕೆ ಪಂದ್ಯವನ್ನು ಆಯೋಜಿಸಿದ ರೀತಿಯೂ ಕಾರಣವಾಗಿತ್ತು. ಎಲ್ಲವೂ ಅವ್ಯವಸ್ಥಿತವಾಗಿತ್ತು, ದುಬಾರಿಯಾಗಿತ್ತು. ಆದರೆ ಭಾರತ ಕಪ್ ಗೆಲ್ಲುವ ಐತಿಹಾಸಿಕ ಕ್ಷಣ ಕಣ್ಣು ತುಂಬಿಕೊಳ್ಳುವುದಕ್ಕಾಗಿ ಜನ ಎಲ್ಲವನ್ನೂ ಸಹಿಸಿಕೊಂಡಿದ್ದರು.
ದಿಲ್ಲಿಯಿಂದ ಅಹಮದಾಬಾದ್ ಗೆ ಪಯಣಿಸುವಾಗ ನಾನು ಭೇಟಿಯಾದ ಕ್ಯೂಟೆಸ್ಟ್ ಫ್ಯಾನ್ ಗಳೆಂದರೆ ಒಂದು ತಂದೆ ಮಗ ಜೋಡಿ. ತಂದೆಯ ವಯಸ್ಸು ನಲವತ್ತು ನಲವತ್ತೈದರ ನಡುವಿರಬಹುದು. ಆತನ ತಂದೆ ಆತನನ್ನು 1996 ರ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಭಾರತ, ಶ್ರೀಲಂಕಾ ಪಂದ್ಯ ನೋಡಲು ಕರೆದೊಯ್ದಿದ್ದರಂತೆ (ಆಗ ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜ್ ನಲ್ಲಿ ಓದುತ್ತಿದ್ದ ನಾನೂ ಪಂದ್ಯ ನೋಡಲು ಗೆಳತಿಯರೊಂದಿಗೆ ಹೋಗಿದ್ದೆ. ಪಂದ್ಯದ ತುಂಬಾ ನಾವು ಕಿರುಚಿದ್ದೆವು. ಸಚಿನ್ ಸೆಂಚುರಿ ಹೊಡೆದಿದ್ದ. ಆದರೂ ಭಾರತ ಪಂದ್ಯ ಸೋತಿತ್ತು).
ಈಗ ನಾನು ಹೇಳಿದ ಬಿಸಿನೆಸ್ ಮನ್ ನ ಪಾಲಿಗೂ ಇತಿಹಾಸ ಮರುಕಳಿಸಿತ್ತು. ಈಗ ಆತ ತನ್ನ 12 ರ ಹರೆಯದ ಮಗನನ್ನು ಕರೆದುಕೊಂಡ ಕೊಹ್ಲಿ ಸೆಂಚುರಿ ನೋಡಲು ಹೊರಟಿದ್ದ. ಆದರೆ ದುರದೃಷ್ಟವಶಾತ್ ಅದು ಸಂಭವಿಸಲಿಲ್ಲ. ಆದರೆ ಖಂಡಿತವಾಗಿಯೂ ಆ ತಂದೆ ಮಗನ ನಡುವಿನ ಸ್ನೇಹಪೂರ್ಣ ಸಂಬಂಧ, ಅಮೂಲ್ಯ ಬಂಧ, ಈ ವಿಶ್ವಕಪ್ ಗೆ ಸಂಬಂಧಿಸಿದಂತೆ ನನ್ನ ಮನದಲ್ಲಿ ದೀರ್ಘ ಉಳಿಯಲಿರುವ ಸಂಗತಿ.
ಗಾಯತ್ರಿ ಶ್ರೀವಾಸ್ತವ, ಮೀಡಿಯಾ ಅಕಾಡೆಮಿಕ್, ಲೇಖಕಿ ಮತ್ತು ಪಾಡ್ ಕಾಸ್ಟರ್
ಕೃಪೆ: ಆವಾಜ್ ಸೌತ್ ಏಶಿಯಾ ಡಾಟ್ ಕಾಮ್
ಕನ್ನಡಕ್ಕೆ ಭಾವಾನುವಾದ: ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ-ವರ್ಲ್ಡ್ ಕಪ್ | ಗೆದ್ದರೆ ಮೋದಿ ಪ್ರಭಾವ; ಸೋತರೆ..?