ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ತೀರ್ಪಿನ ಪ್ರತಿಯನ್ನು ಅಪ್ಲೋಡ್ ಮಾಡಿದ ಅಧಿಕಾರಿಗಳು
ಹೊಸದಿಲ್ಲಿ: ಪಂಜಾಬ್, ಕೇರಳ ಮತ್ತು ತಮಿಳುನಾಡು ವಿಧಾನಸಭೆ ಶಿಫಾರಸು ಮಾಡಿರುವ ಮಸೂದೆಗಳನ್ನು ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಅನುಮೋದನೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಪಂಜಾಬ್, ಕೇರಳ ಮತ್ತು ತಮಿಳುನಾಡು ಸರಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಂಜಾಬ್ ರಾಜ್ಯಪಾಲರ ವಿಚಾರವಾಗಿ ನವೆಂಬರ್ 10ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಪ್ರತಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ಅಧಿಕಾರದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದೆ.
ರಾಜ್ಯಪಾಲರು ಚುನಾವಣಾ ಪ್ರಕ್ರಿಯೆಯ ಮೂಲಕ ಅಧಿಕಾರವನ್ನು ಹೊಂದಿರದಿದ್ದರೂ, ಅವರು ಕೆಲವು ಸಾಂವಿಧಾನಿಕ ಅಧಿಕಾರಗಳನ್ನು ಹೊಂದಿದ್ದಾರೆ. ಆದಾಗ್ಯೂ, ಆ ಅಧಿಕಾರಗಳಿಗೆ ಮಿತಿಯಿದೆ. ಅಸೆಂಬ್ಲಿಗಳು ಮಾಡುವ ಕಾನೂನನ್ನು ತಡೆಯುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳ ಕುರಿತು ನಿರ್ಧಾರ ಕೈಗೊಳ್ಳದೆ, ವಿಧೇಯಕಗಳನ್ನು ಬಾಕಿ ಇಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ.
ರಾಜ್ಯಪಾಲ ರಾಷ್ಟ್ರಪತಿಯಿಂದ ನೇಮಕಗೊಂಡ ರಾಜ್ಯದ ನಾಮಮಾತ್ರದ ಮುಖ್ಯಸ್ಥರಾಗಿದ್ದಾರೆ. ರಾಜ್ಯಪಾಲರು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾತ್ರ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ರಾಜ್ಯಪಾಲರು ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಮಾರ್ಗದರ್ಶಕರಾಗಿ ಮಾತ್ರ ಕಾರ್ಯನಿರ್ವಹಿಸಬೇಕು. ಇದು ಪ್ರಜಾಪ್ರಭುತ್ವದ ಸ್ಥಿರತೆಯ ಅಡಿಪಾಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.